ವಿಕ ಸುದ್ದಿಲೋಕ ಶೃಂಗೇರಿ ಇಸ್ರೊ ಅಧ್ಯಕ್ಷ ಡಾ.ವಿ.ನಾರಾಯಣನ್ ಅವರು ಶ್ರೀ ಶಾರದಾ ಪೀಠಕ್ಕೆ ಆಗಮಿಸಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ, ಉಭಯ ಜಗದ್ಗುರುಗಳ ಆಶೀರ್ವಾದ ಪಡೆದರು. ಶಿವಮೊಗ್ಗದಿಂದ ಶನಿವಾರ ಆಗಮಿಸಿದ ಅವರು ಶ್ರೀಮಠದ ಅತಿಥಿ ಗೃಹದಲ್ಲಿವಾಸ್ತವ್ಯ ಮಾಡಿದ್ದರು. ಭಾನುವಾರ ಬೆಳಗ್ಗೆ ಗುರುಭವನದಲ್ಲಿಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಜಗದ್ಗುರುಗಳೊಂದಿಗೆ ಇಸ್ರೊ ಕಾರ್ಯ ವೈಖರಿ, ಸಾಧನೆ ಬಗ್ಗೆ ವಿವರಿಸಿದರು. ಮುಂದೆ ಉಡಾವಣೆ ಆಗಲಿರುವ ರಾಕೆಟ್ ಮಾದರಿಯನ್ನು ಜಗದ್ಗುರುಗಳಿಗೆ ಸಮರ್ಪಿಸಿದರು. ಶೃಂಗೇರಿಯಲ್ಲಿಇಸ್ರೊ ಸಹಕಾರದಲ್ಲಿ ವಿಜ್ಞಾನ ಕೇಂದ್ರ ಸ್ಥಾಪಿಸುವ ಬಗ್ಗೆ ಚರ್ಚಿಸಿದರು. ಕೇಂದ್ರಕ್ಕೆ ಅಗತ್ಯವಿರುವ ಮೂರುವರೆ ಎಕರೆ ಜಾಗವನ್ನು ಜೆಸಿಬಿಎಂ ಕಾಲೇಜು ಸಮೀಪ ಗುರುತಿಸಲಾಗಿದೆ ಎಂದರು. ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಮಾತನಾಡಿ, ಶೃಂಗೇರಿಗೆ ಅಗತ್ಯವಾಗಿದ್ದ ವಿಜ್ಞಾನ ಕೇಂದ್ರ ನಿರ್ಮಾಣಕ್ಕೆ ಶ್ರೀಮಠದಿಂದ ಪೂರ್ಣ ಸಹಕಾರ ನೀಡಲಾಗುತ್ತದೆ ಎಂದರು. ಡಾ.ವಿ.ನಾರಾಯಣನ್ , ಪತ್ನಿ ಕವಿತಾರಾಜ್ ಹಾಗೂ ಕುಟುಂಬ ದವರು ಇದ್ದರು. ಈ ಸಂದರ್ಭ ಶ್ರೀಮಠದ ಆಡಳಿತಾಧಿಕಾರಿ ಮುರುಳಿ, ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಹೆಬ್ಬಿಗೆ ರಾಮಚಂದ್ರರಾವ್ , ಜಗದ್ಗುರುಗಳ ಆಪ್ತ ಸಹಾಯಕ ಶಮಂತಶರ್ಮ ಇದ್ದರು. ಪಟ್ಟಣ ಹೊರವಲಯದ ಶಂಕರಗಿರಿಗೆ ಭೇಟಿ ನೀಡಿ ಶ್ರೀ ಆದಿಶಂಕರರ ಶಿಲಾಮಯ ಮೂರ್ತಿಯ ದರ್ಶನ ಮಾಡಿದರು.

