12ವೈಡಿಆರ್ 5
ಚೆನ್ನಾರೆಡ್ಡಿ ಪಾಟೀಲ ತನ್ನೂರು
ಕೇಂದ್ರ ಸರಕಾರ ಸರ್ವಾಧಿಕಾರಿ ಧೋರಣೆಗೆ ಶಾಸಕ ತುನ್ನೂರು ಆಕ್ರೋಶ
ಅಭಿಪ್ರಾಯ ಕೇಳದೆ ನರೇಗಾ ಹೆಸರು ಬದಲಾವಣೆ
ವಿಕಸುದ್ದಿಲೋಕ ಯಾದಗಿರಿ
ಪ್ರಧಾನಿ ನರೇಂದ್ರ ಮೋದಿ ಸರಕಾರ ಆರ್ ಎಸ್ ಎಸ್ ನ ಅಣತಿಯಂತೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೊಸ ಶಾಸನ ಜಾರಿಗೆ ತರುವ ಮೂಲಕ ಗ್ರಾಮ ಪಂಚಾಯಿತಿಗಳ ಸ್ವಾಯತ್ತತೆಗೆ ಧಕ್ಕೆ ತಂದಿದೆ. ವಿಬಿ ಜಿ ರಾಮ್ ಜಿ ಹೆಸರಿನಲ್ಲಿಹೊಸ ಕಾಯಿದೆ ಜಾರಿಗೆ ತರುವಾಗ ರಾಜ್ಯ ಸರಕಾರಗಳ ಅಭಿಪ್ರಾಯ ಪಡೆಯದೆ ಕೇಂದ್ರ ಸರಕಾರ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ ಬಿಲ್ (ವಿಬಿ ಜಿ ರಾಮ್ ಜಿ) ಹಳ್ಳಿಗಳ ಅಧಿಕಾರ ಕಸಿದುಕೊಂಡು ಗ್ರಾಮೀಣ ಆರ್ಥಿಕತೆಯನ್ನು ನಾಶಪಡಿಸಲು ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರಕಾರ ಉದ್ಯೋಗದ ಹಕ್ಕು, ಮಾಹಿತಿ ಹಕ್ಕು, ಶೈಕ್ಷಣಿಕ ಹಕ್ಕು ಮೊದಲಾದ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶದ ಜನರಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಕಾರ್ಯ ಮಾಡಿತ್ತು. ಅವರ ಜನಪರ ಕಾಯಿದೆ ಹಿಂಪಡೆದುಕೊಳ್ಳುವ ಮೂಲಕ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಕೆಲಸವನ್ನು ಮೋದಿ ಸರಕಾರ ಮಾಡುತ್ತಿದೆ ಎಂದು ದೂರಿದ್ದಾರೆ.
ನರೇಗಾ ಕಾಯಿದೆ ಪ್ರಕಾರ ಜನಸಾಮಾನ್ಯರು, ಕೂಲಿ ಕಾರ್ಮಿಕರು, ಕೃಷಿ ಕಾರ್ಯಗಳ ಜೊತೆಯಲ್ಲಿತಾವಿದ್ದ ಸ್ಥಳದಲ್ಲೇ ನರೇಗಾ ಅಡಿ ಕೂಲಿ ಕೆಲಸ ಮಾಡಲು ಅವಕಾಶವಿತ್ತು. ಆ ಮೂಲಕ ಹಳ್ಳಿಗಾಡಿನ ಆರ್ಥಿಕತೆ ಕಟ್ಟಲು ಸಾಧ್ಯವಾಗಿತ್ತು. ಸ್ಥಳೀಯವಾಗಿ ಆಸ್ತಿ ಸೃಜನೆಯಾಗುತ್ತಿತ್ತು. ಉದ್ಯೋಗ ಕೇಳಿ ಪಡೆಯುವ ಹಕ್ಕು ಜನರಿಗಿತ್ತು. ಹೊಸ ಶಾಸನದಿಂದ ಇದ್ಯಾವುದೂ ಇಲ್ಲವಾಗಿದೆ ಎಂದಿದ್ದಾರೆ.
***ಕೋಟ್ ...
ಸ್ವಾತಂತ್ರ್ಯ ಚಳವಳಿಯಲ್ಲಿಮಹಾತ್ಮಾ ಗಾಂಧೀಜಿ ಅವರು ಸ್ವಂತ ಸುಖವನ್ನು ತ್ಯಜಿಸಿ ಇಡೀ ರಾಷ್ಟ್ರ ತಿರುಗಾಡಿ ಅಹಿಂಸೆಯ ಮೂಲಕ ಸ್ವಾತಂತ್ಯ ಗಳಿಸಿಕೊಟ್ಟ ತ್ಯಾಗಜೀವಿಯಾಗಿದ್ದಾರೆ. ಅವರ ಹೆಸರನ್ನು ಬದಲಾಯಿಸಿರುವುದು ಅಮಾನವೀಯ ನಡೆವಳಿಕೆ ಖಂಡನೀಯವಾಗಿದೆ.
ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಶಾಸಕ

