The Theft Of Durga Community Hall The Ruined Works Of Smart City
ಸಮುದಾಯ ಭವನದ ಸಾಮಾಗ್ರಿ ಕಳುವು
Contributed by: Vinayaka Naik P|Vijaya Karnataka•
ದಾವಣಗೆರೆಯ ದುರ್ಗಾಂಬಿಕಾ ಸಮುದಾಯ ಭವನ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣಗೊಂಡಿದೆ. ಭವನ ಉದ್ಘಾಟನೆಯಾಗಿ ಎರಡು ವರ್ಷವಾದರೂ ಸಾರ್ವಜನಿಕರ ಬಳಕೆಗೆ ದೊರಕಿಲ್ಲ. ನಿರ್ಮಾಣದಲ್ಲಿಯೇ ಲೋಪಗಳಿದ್ದು, ಛಾವಣಿ ಕಿತ್ತುಬರುತ್ತಿದೆ. ಭವನ ಪಾಲಿಕೆಗೆ ಹಸ್ತಾಂತರವಾಗುವ ಮುನ್ನವೇ ಕಿಟಕಿ ಗಾಜುಗಳು, ಎಲೆಕ್ಟ್ರಿಕಲ್ ಸಾಮಗ್ರಿಗಳು, ಫ್ಯಾನ್‌ಗಳು ಕಳುವಾಗಿವೆ. ಕಲ್ಯಾಣಿಯೂ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿದೆ.
ದಾವಣಗೆರೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ ದುರ್ಗಾಂಬಿಕಾ ಸಮುದಾಯ ಭವನ ಮತ್ತು ಕಲ್ಯಾಣಿ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದರೂ, ಭವನದ ಸಾಮಗ್ರಿಗಳು ಕಳುವಾಗಿದ್ದು, ಛಾವಣಿ ಕುಸಿಯುತ್ತಿದೆ. ಕಲ್ಯಾಣಿಯಲ್ಲೂ ನಿರ್ವಹಣೆ ಕೊರತೆಯಿಂದ ಉಪಕರಣಗಳು ಹಾಳಾಗಿವೆ. ಜನೋಪಯೋಗಕ್ಕೆ ಬರುವ ಮುನ್ನವೇ ಈ ಕಟ್ಟಡಗಳು ಹಾಳಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ದುರ್ಗಾಂಬಿಕಾ ದೇವಸ್ಥಾನದ ಜಾಗದಲ್ಲಿ ನಿರ್ಮಿಸಿದ ಸಮುದಾಯ ಭವನ ಈಗ 'ಮೇಲೆಲ್ಲಾ ಥಳಕು, ಒಳಗೆಲ್ಲಾ ಹುಳುಕು' ಎಂಬಂತಾಗಿದೆ. ಹೊರಗಿನಿಂದ ಸುಂದರವಾಗಿ ಕಾಣುವ ಈ ಭವನ ಒಳಗೆ ಹಲವು ಸಮಸ್ಯೆಗಳಿಂದ ಕೂಡಿದೆ. ಕಳಪೆ ಕಾಮಗಾರಿಯಿಂದಾಗಿ ಛಾವಣಿಯ ಸೀಲಿಂಗ್‌ಗಳು ಉದುರುತ್ತಿವೆ ಮತ್ತು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಭವನವನ್ನು ಜನೋಪಯೋಗಕ್ಕೆ ಬಿಡುವ ಮೊದಲೇ ಈ ಪರಿಸ್ಥಿತಿ ಎದುರಾಗಿದೆ. ಅಲ್ಲದೆ, ಭವನದ ವಿನ್ಯಾಸವೂ ಅವೈಜ್ಞಾನಿಕವಾಗಿದೆ. ನೆಲ ಮಹಡಿಯಲ್ಲಿ ಸಭಾಂಗಣವಿದ್ದರೆ, ಮೇಲ್ಮಹಡಿಯಲ್ಲಿ ಭೋಜನಾಲಯ ಇರಬೇಕಿತ್ತು, ಆದರೆ ಅದು ಉಲ್ಟಾ ಆಗಿದೆ. ಭೋಜನಾಲಯಗಳಲ್ಲಿ ಕೈ ತೊಳೆಯಲು ಅಳವಡಿಸಿರುವ ಸಿಂಕ್‌ಗಳು ಚಿಕ್ಕದಾಗಿವೆ. ಖಾಲಿ ಜಾಗ ಸಿಕ್ಕಲ್ಲೆಲ್ಲಾ ಕೊಠಡಿಗಳನ್ನು ನಿರ್ಮಿಸಿ ಹಣ ಪೋಲು ಮಾಡಲಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ.ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ 2023ರಲ್ಲಿ, ಆಗಿನ ಜಿಲ್ಲಾ ಉಸ್ತುವಾರಿ ಸಚಿವರು ಈ ಭವನವನ್ನು ಉದ್ಘಾಟಿಸಿದ್ದರು. ಆದರೆ, ಎರಡು ವರ್ಷ ಕಳೆದರೂ ಇದುವರೆಗೂ ಸಾರ್ವಜನಿಕರ ಬಳಕೆಗೆ ಸಿಕ್ಕಿಲ್ಲ. ಭವನವನ್ನು ದೇವಸ್ಥಾನ ಟ್ರಸ್ಟ್‌ಗೆ ಹಸ್ತಾಂತರಿಸಬೇಕೋ ಅಥವಾ ಪಾಲಿಕೆಗೆ ಹಸ್ತಾಂತರಿಸಬೇಕೋ ಎಂಬ ಗೊಂದಲ ಸ್ಮಾರ್ಟ್‌ಸಿಟಿ ಅಧಿಕಾರಿಗಳನ್ನು ಕಾಡಿತು. ಅಂತಿಮವಾಗಿ, ಇತ್ತೀಚೆಗೆ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಆದರೆ, ಪಾಲಿಕೆಯ ವಶಕ್ಕೆ ಬರುವ ಮೊದಲೇ ಭವನದಲ್ಲಿನ ಕಿಟಕಿ ಗಾಜುಗಳು ಪುಡಿಯಾಗಿವೆ. ಬಾಗಿಲಿನ ಲಾಕ್‌ಗಳು, ಎಲೆಕ್ಟ್ರಿಕಲ್ ಕೇಬಲ್‌ಗಳು, ಸ್ವಿಚ್ ಬೋರ್ಡ್‌ಗಳು, ನಲ್ಲಿಗಳು, ಫ್ಯಾನ್‌ಗಳು ಸೇರಿದಂತೆ ಹಲವು ಸಾಮಗ್ರಿಗಳು ಕಳುವಾಗಿವೆ.
ಇದೇ ರೀತಿ, 4.3 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಕಲ್ಯಾಣಿಯೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿ ಸುಂದರವಾದ ಪಾಥ್‌ವೇ, ಬೆಂಚ್‌ಗಳು, ಹುಲ್ಲುಹಾಸು, ಕಾರಂಜಿ ಮತ್ತು ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಆದರೆ, ಸೂಕ್ತ ನಿರ್ವಹಣೆ ಇಲ್ಲದೆ ಇದು ಹಾಳಾಗುತ್ತಿದೆ. ಇಲ್ಲಿನ ಉಪಕರಣಗಳೂ ಕಳುವಾಗಿವೆ ಮತ್ತು ಇದು ಅನೈತಿಕ ಚಟುವಟಿಕೆಗಳ ತಾಣವಾಗಿದೆ.
"ಕಳಪೆಗೆ ಸೀಲಿಂಗ್ ಕಿತ್ತುಕೊಂಡು ಬರುತ್ತಿರುವುದೇ ಸಾಕ್ಷಿ. ಹೇಳೋರು, ಕೇಳೋರು ಯಾರು ಇಲ್ಲದೇ ಅಧಿಕಾರಿಗಳು ಮನಸೋ ಇಚ್ಛೆ ಕಾಮಗಾರಿಯಾಗಿದೆ. ಅನುದಾನ ಲೂಟಿಯಾಗಿದೆ, ಬಹುತೇಕ ಕಾಮಗಾರಿ ಹಳ್ಳ ಹಿಡಿದಿವೆ. ಬಂದ ಅನುದಾನವೆಷ್ಟು ? ಏನೇನೂ ಆಸ್ತಿ ರೂಪಿಸಲಾಗಿದೆ, ಅವುಗಳ ನಿರ್ವಹಣೆ ಈ ಎಲ್ಲ ಕುರಿತು ಶ್ವೇತಪತ್ರ ಹೊರಡಿಸಬೇಕು," ಎಂದು ಯಶವಂತರಾವ್ ಜಾಧವ್ ದೂಡಾ ಮಾಜಿ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.
"ದುರ್ಗಾಂಬಿಕಾ ದೇವಿ ಸಮುದಾಯ ಭವನ ಪಾಲಿಕೆಗೆ ಹಸ್ತಾಂತರವಾಗುವ ಮುನ್ನವೇ ಭವನದಲ್ಲಿ ಅಳವಡಿಸಿದ್ದ ಉಪಕರಣಗಳನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದಾರೆ. ಈಗ ಪಾಲಿಕೆಯಿಂದಲೇ ಭವನದ ರಿಪೇರಿ ಕಾಮಗಾರಿ ಆರಂಭಿಸಲಾಗಿದೆ," ಎಂದು ರೇಣುಕಾ, ಮನಪಾ ಆಯುಕ್ತರು ತಿಳಿಸಿದ್ದಾರೆ.
ಈ ಸಮುದಾಯ ಭವನವನ್ನು ಉದ್ಘಾಟನೆಯಾದ ದಿನದಿಂದಲೇ ಸರಿಪಡಿಸಿ ಬಾಡಿಗೆ ನೀಡಿದ್ದರೆ, ಈ ಹೊತ್ತಿಗೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿತ್ತು. ಕಲ್ಯಾಣಿಯಲ್ಲಿ ಕಾರಂಜಿ ಚಿಮ್ಮಿ, ಸಂಗೀತ ಅಳವಡಿಸಿ, ಕಡಿಮೆ ಬೆಲೆಯ ಟಿಕೆಟ್ ದರ ನಿಗದಿಪಡಿಸಿದರೆ ಪಾಲಿಕೆಗೆ ಆದಾಯ ಬರಲಿದೆ. ಈಗಲೂ ಕಾಲ ಮಿಂಚಿಲ್ಲ.