ಯರಗೋಳ್ ಡ್ಯಾಂನಲ್ಲಿ5 ವರ್ಷಗಳಿಗೆ ಮೀನು ಸಾಕಾಣಿಕೆ ಗುತ್ತಿಗೆ | ಬಲಾಢ್ಯರ ಕೈವಾಡ ಶಂಕೆ, ಸರಕಾರಕ್ಕೆ ಲಕ್ಷಾಂತರ ರೂ. ನಷ್ಟ
ಸತ್ಯ ಬಂಗಾರಪೇಟೆ
ಯರಗೋಳ್ ಡ್ಯಾಂನಲ್ಲಿಮೀನು ಸಾಕಾಣಿಕೆ ಮಾಡಲು 5 ವರ್ಷಗಳಿಗೆ ನೀಡಿರುವ ನೇರ ಗುತ್ತಿಗೆಯಲ್ಲಿಬಲಾಢ್ಯರ ಕೈವಾಡದಿಂದ ಅಕ್ರಮ ನಡೆದಿದ್ದು, ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಗಳ ನಷ್ಟ ಉಂಟಾಗಿದೆ.
ಕೋಲಾರ ಜಿಲ್ಲೆಯ ಜನತೆಗೆ ಕುಡಿಯುವ ನೀರು ಪೂರೈಸಲು ನಿರ್ಮಿಸಿರುವ ಯರಗೋಳ್ ಡ್ಯಾಂ ಜಿಲ್ಲೆಯ ಜನತೆಗೆ ವರದಾನವಾಗಿದೆ. ಈಗ ಡ್ಯಾಂನಲ್ಲಿಮೀನುಗಾರಿಕೆ ಮಾಡಲು ಮೀನುಗಾರಿಕೆ ಇಲಾಖೆ ಮುಂದಾಗಿದ್ದು ಮೀನು ಕೃಷಿಕರ ಕೈಗೆ ಕೆಲಸ ಅರಸಿ ಬಂದಿದೆ. ಆದರೆ ನೇರ ಗುತ್ತಿಗೆಯಲ್ಲಿಅಕ್ರಮದ ವಾಸನೆ ಕಂಡುಬಂದಿದ್ದು, ಗುತ್ತಿಗೆಗೆ ನೀಡಿರುವ ಹಣದ ಮೊತ್ತ ಇದಕ್ಕೆ ಪುಷ್ಟಿ ನೀಡುವಂತಿದೆ.
ಯರಗೋಳ್ ಡ್ಯಾಂನಲ್ಲಿಮೀನುಗಾರಿಕೆಗೆ ಸಂಬಂಧಿಸಿದಂತೆ ಗುತ್ತಿಗೆ ನೀಡಲು ಮೀನುಗಾರಿಕೆ ಇಲಾಖೆ ಮೀನುಗಾರರ ಸಹಕಾರ ಸಂಘ ಮತ್ತು ಎಫ್ ಪಿಒಗಳಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ವಾಸ್ತವವಾಗಿ ಡ್ಯಾಂನಲ್ಲಿಬಂಗಾರಪೇಟೆ ತಾಲೂಕಿನ ಸಂಘದವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಮಾಹಿತಿ ಕೊರತೆಯೋ ಅಥವಾ ಇತರೆ ಯಾವುದೋ ಕಾರಣವೋ ಗೊತ್ತಿಲ್ಲತಾಲೂಕಿನಿಂದ ಯಾವುದೇ ಸಂಘ ಅರ್ಜಿಯನ್ನು ಸಲ್ಲಿಸಿಲ್ಲ. ವಿಪರ್ಯಾಸವೆಂದರೆ ಕೋಲಾರ ಮೂಲದ ಸಪ್ಪಲಮ್ಮದೇವಿ ಮೀನು ರೈತ ಉತ್ಪಾದಕರ ಕಂಪನಿ ಅರ್ಜಿ ಸಲ್ಲಿಸಿ ಗುತ್ತಿಗೆಯನ್ನು ತನ್ನದಾಗಿಸಿಕೊಂಡಿದೆ.
ಸರಕಾರದ ನಿಯಮದಂತೆ ಡ್ಯಾಂ ಇರುವ ತಾಲೂಕಿನ ಸಂಘ ಮತ್ತು ಕಂಪನಿ ಬಿಟ್ಟು ಇತರೆ ತಾಲೂಕಿನವರು ಅರ್ಜಿಯನ್ನು ಸಲ್ಲಿಸುವಂತಿಲ್ಲ. ಆದರೆ ಇಲ್ಲಿನಿಯಮವನ್ನು ತಮ್ಮ ಅನುಕೂಲಕ್ಕೆ ಮಾಡಿಕೊಂಡು ಕೋಲಾರದ ಜಯನಗರದಲ್ಲಿರುವ ಎಫ್ ಪಿಒ ಬಂಗಾರಪೇಟೆ ತಾಲೂಕಿನ ಮಾದಿಗರಹಳ್ಳಿ ಗ್ರಾಮದಲ್ಲಿಕಂಪನಿ ಕಾರ್ಯನಿರ್ವಹಿಸುತ್ತಿದೆ ಎಂದು ದಾಖಲೆಗಳನ್ನು ಸೃಷ್ಟಿಸಿ ಗುತ್ತಿಗೆಗೆ ಅರ್ಜಿ ಸಲ್ಲಿಸಿದೆ. ಅರ್ಜಿ ಸಲ್ಲಿಸಲು ನಿಗದಿ ಮಾಡಿದ್ದ ಕೊನೆ ದಿನದಂದು ಅರ್ಜಿಯನ್ನು ಸಲ್ಲಿಸಿ ಗುತ್ತಿಗೆಯನ್ನು ತಮ್ಮದಾಗಿಸಿಕೊಂಡಿದೆ. ಕನಿಷ್ಠ 5 ಲಕ್ಷಕ್ಕೂ ಹೆಚ್ಚು ಗುತ್ತಿಗೆ ಮೊತ್ತಕ್ಕೆ ಅವಕಾಶ ಇರುವ ಸ್ಥಳದಲ್ಲಿಕೇವಲ ವಾರ್ಷಿಕ 25,200 ರೂ.ಗಳಂತೆ 5 ವರ್ಷಗಳ ಅವಧಿಗೆ ಮೀನುಗಾರಿಕೆ ಇಲಾಖೆ ಗುತ್ತಿಗೆ ನೀಡಿದೆ. ಗುತ್ತಿಗೆ ತಮ್ಮದಾಗಿಸಿಕೊಳ್ಳಲು ರಾಜಕಾರಣಿಗಳ ಕೃಪಾಕಟಾಕ್ಷವನ್ನು ಪಡೆದು ಸಪ್ಪಲಮ್ಮದೇವಿ ಮೀನು ರೈತ ಉತ್ಪಾದಕರ ಕಂಪನಿಯ ಆಡಳಿತ ಮಂಡಳಿಯ ಸದಸ್ಯರು ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರಿ ಗುತ್ತಿಗೆಯನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.
ಅಧಿಕಾರಿಗಳು ಹೇಳುವುದು ಹೀಗೆ: ಗುತ್ತಿಗೆ ನೀಡುವಲ್ಲಿಯಾವುದೇ ಅಕ್ರಮ ನಡೆದಿಲ್ಲಎಲ್ಲವೂ ಕಾನೂನಿನ ಪ್ರಕಾರ ನಡೆದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕೋಲಾರ ಮೂಲದ ಕಂಪನಿಗೆ ಗುತ್ತಿಗೆ ನೀಡಲು ಸಾಧ್ಯವಿಲ್ಲದ ಕಾರಣ ಕಂಪನಿಯವರು ಬಂಗಾರಪೇಟೆ ತಾಲೂಕಿಗೆ ಸಂಬಂಧಪಟ್ಟಂತೆ ಕಂಪನಿಯ ಕಾರ್ಯವ್ಯಾಪ್ತಿ ಬದಲಾಯಿಸಿಕೊಂಡು ಅರ್ಜಿ ಸಲ್ಲಿಸಿದ್ದರು. ಡ್ಯಾಂ ಬಲಮಂದೆ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಅಲ್ಲಿನ 20ಕ್ಕೂ ಹೆಚ್ಚಿನ ಸದಸ್ಯರನ್ನು ಕಂಪನಿಗೆ ಶೇರುದಾರರನ್ನಾಗಿಸಿಕೊಂಡು ಅರ್ಜಿ ಸಲ್ಲಿಸಿದ್ದಾರೆ. ಮೀನುಗಾರಿಕೆಗೆ ಒಂದೇ ಒಂದು ಅರ್ಜಿ ಬಂದಿದ್ದ ಕಾರಣ ಸರಕಾರದ ನಿಗದಿಯಂತೆ ಹೆಕ್ಟೇರ್ ಗೆ 300 ರೂ.ಗಳಂತೆ ಒಟ್ಟು 25,200 ರೂ.ಗೆ ಒಂದು ವರ್ಷಕ್ಕೆ ಗುತ್ತಿಗೆ ನೀಡಲಾಗಿದೆ. ನಂತರ ಉಳಿದ 4 ವರ್ಷಗಳು ಇದೇ ಮೊತ್ತಕ್ಕೆ ವಾರ್ಷಿಕ ಶೇ 5ರಷ್ಟು ಹೆಚ್ಚಳ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಯರಗೋಳ್ ಡ್ಯಾಂನಲ್ಲಿಮೀನುಗಾರಿಕೆಗೆ ನೀಡಿರುವ ಗುತ್ತಿಗೆಯಲ್ಲಿಅಕ್ರಮ ನಡೆದಿದೆ. ಡ್ಯಾಂನ ಅಚ್ಚುಕಟ್ಟು ವ್ಯಾಪ್ತಿಯಲ್ಲಿಮೀನುಗಾರಿಕೆ ಕುಟುಂಬಗಳಿದ್ದು, ಅವರ ಜೀವನೋಪಾಯಕ್ಕೆ ಮತ್ತು ಮೀನುಗಾರರ ಕೈಗೆ ಕೆಲಸ ನೀಡಲು ಎಫ್ ಪಿಒಗೆ ನೀಡುರುವ ಗುತ್ತಿಗೆ ರದ್ದುಪಡಿಸಿ ಬಹಿರಂಗ ಹರಾಜು ಹಾಕಬೇಕೆಂದು ಕೆಲವರು ಜಿಲ್ಲಾಧಿಕಾರಿ, ಜಿಪಂ, ಮೀನುಗಾರಿಕೆ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದಾರೆ.
ಕೋಟ್
ಯರಗೋಳ ಡ್ಯಾಂನಲ್ಲಿಮೀನುಗಾರಿಕೆಗೆ ನೀಡಿರುವ ಗುತ್ತಿಗೆಯಲ್ಲಿಭಾರಿ ಗೋಲ್ ಮಾಲ್ ನಡೆದಿದ್ದು, ಇದರಿಂದ ಸರಕಾರಕ್ಕೆ ಅಧಿಕ ಮೊತ್ತದಲ್ಲಿನಷ್ಟ ಉಂಟಾಗುತ್ತಿದೆ. ಸರಕಾರ ಬಹಿರಂಗ ಹರಾಜಿನ ಮೂಲಕ ಮೀನುಗಾರಿಕೆಗೆ ಡ್ಯಾಂ ನೀಡಬೇಕು. ಅಧಿಕಾರಿಗಳು ನನಗೆ ಗುತ್ತಿಗೆ ನೀಡಿದರೆ ವರ್ಷಕ್ಕೆ 5 ಲಕ್ಷ ಹಣ ಪಾವತಿಸುತ್ತೇನೆ. 5 ವರ್ಷಗಳ ಅವಧಿಗೆ ನೀಡಿದರೆ 20 ಲಕ್ಷ ಪಾವತಿಸುತ್ತೇನೆ.
-ಕಾರ್ತಿಕ್ , ಭೀಮಗಾನಹಳ್ಳಿ
ಯರಗೋಳ್ ಡ್ಯಾಂ ನಲ್ಲಿಮೀನು ಸಾಕಾಣಿಕೆಗೆ ಕೋಲಾರ ಮೂಲದವರಿಗೆ ಲೀಸ್ ಗೆ ನೀಡಲಾಗಿದೆ. ಆದರೆ ಕಾನೂನಿನ ಪ್ರಕಾರ ಹಾಗೆ ನೀಡುವಂತಿಲ್ಲ. ಸಹಕಾರ ಸಂಘದವರು ಅರ್ಜಿಯನ್ನು ಸಲ್ಲಿಸಿಲ್ಲಎಂಬ ಕಾರಣಕ್ಕೆ ಕೋಲಾರ ಮೂಲದ ಎಫ್ ಪಿಒಗೆ ಗುತ್ತಿಗೆ ನೀಡಲಾಗಿದೆ. ಟೆಂಡರ್ ಅಥವಾ ಹರಾಜಿನಲ್ಲಿಗುತ್ತಿಗೆ ನೀಡಿದರೆ ವರ್ಷಕ್ಕೆ 20 ಲಕ್ಷ ಆದಾಯ ಬರಲಿದೆ. ಎಫ್ ಪಿಒ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಗುತ್ತಿಗೆ ಪಡೆಯುವ ಮೂಲಕ ಅಕ್ರಮ ನಡೆಸಿದ್ದಾರೆ.
-ಹೆಸರು ಹೇಳಲು ಇಚ್ಛಿಸದ ಅಧಿಕಾರಿ
13 ಬಂಗಾರಪೇಟೆ: ಯರಗೋಳ್ ಡ್ಯಾಂ

