ಜಿಲ್ಲಾಧಿಕಾರಿ ಡಾ.ಎಂ.ಆರ್ .ರವಿ ಸೂಚನೆ
ವಿಕ ಸುದ್ದಿಲೋಕ ಕೋಲಾರ
ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಹವಾಮಾನ ಆಧಾರಿತ ಮರುವಿನ್ಯಾಸಗೊಳಿಸಲಾದ ಬೆಳೆ ವಿಮೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್ .ರವಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿನಡೆದ ಹವಾಮಾನ ಆಧಾರಿತ ಮರುವಿನ್ಯಾಸಗೊಳಿಸಲಾದ ಬೆಳೆ ವಿಮೆ ಯೋಜನೆಯ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಿಲ್ಲೆಯಾದ್ಯಂತ ಬೆಳೆ ವಿಮೆ ಯೋಜನೆಗೆ ನೋಂದಾಯಿಸಿಕೊಂಡಿರುವ ರೈತರ ಸಂಖ್ಯೆ 6191. ಪಾವತಿಯಾಗಿರುವ ಪ್ರೀಮಿಯಂ ಮೊತ್ತ 2024-25ನೇ ಸಾಲಿಗೆ 136 ಲಕ್ಷ ರೂ ಹಾಗೂ ವಿತರಿಸಲಾದ ವಿಮಾ ಪರಿಹಾರದ ಮೊತ್ತ 1270 ಲಕ್ಷ ರೂ. ಪಾವತಿಸಲಾಗಿದೆ. ಜಿಲ್ಲೆಯ ಒಟ್ಟು 49036 ಹೆಕ್ಟೇರ್ ವಿಸ್ತೀರ್ಣದಲ್ಲಿಬೆಳೆದಿರುವ ಮಾವು ಬೆಳೆಗೆ 161 ವಿಮಾ ಘಟಕಗಳಿಂದ 80,000 ರೂ. ಪಾವತಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಸಭೆಗೆ ತಿಳಿಸಿದರು.
ಹವಾಮಾನ ವೈಪರೀತ್ಯದಿಂದಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಮರುವಿನ್ಯಾಸಗೊಳಿಸಲಾದ ಈ ಯೋಜನೆಯು ಹವಾಮಾನದ ಏರುಪೇರುಗಳನ್ನು ಆಧರಿಸಿ ನಷ್ಟ ತುಂಬಿಕೊಡುವಲ್ಲಿಸಹಕಾರಿಯಾಗಿದೆ. ಇದರ ಲಾಭ ಪ್ರತಿಯೊಬ್ಬ ಅರ್ಹ ರೈತನಿಗೂ ತಲುಪಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವಿಮೆ ನೋಂದಣಿ ಸಂದರ್ಭದಲ್ಲಿಎದುರಾಗುವ ತಾಂತ್ರಿಕ ತೊಂದರೆಗಳನ್ನು ಶೀಘ್ರವಾಗಿ ಪರಿಹರಿಸಲು ಮತ್ತು ವಿಮಾ ಕಂಪನಿಗಳು ರೈತರ ದೂರುಗಳಿಗೆ ತಕ್ಷಣ ಸ್ಪಂದಿಸಲು ನಿರ್ದೇಶನ ನೀಡಲಾಯಿತು. ಬೆಳೆ ವಿಮೆ ಮಾಡಿಸುವ ಕೊನೆಯ ದಿನಾಂಕ ಹಾಗೂ ಯೋಜನೆಯ ಸೌಲಭ್ಯಗಳ ಬಗ್ಗೆ ಗ್ರಾಮ ಮಟ್ಟದಲ್ಲಿಹೆಚ್ಚಿನ ಪ್ರಚಾರ ನೀಡಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಭೆಯಲ್ಲಿತಿಳಿಸಲಾಯಿತು.
ಸಭೆಯಲ್ಲಿಜಿಪಂ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ , ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ, ಜಿಲ್ಲಾಸಂಖ್ಯಾ ಸಂಗ್ರಹಣಾಧಿಕಾರಿ ರಮೇಶ್ , ಲೀಡ್ ಬ್ಯಾಂಕ್ ಮ್ಯಾನೇಜರ್ ಜೋಶಿ, ನಾನಾ ವಿಮಾ ಕಂಪನಿಗಳ ಪ್ರತಿನಿಧಿಗಳು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
=
ಫೋಟೋಕ್ಯಾಪ್ಷನ್ : ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿನಡೆದ ಹವಾಮಾನ ಆಧಾರಿತ ಮರುವಿನ್ಯಾಸಗೊಳಿಸಲಾದ ಬೆಳೆ ವಿಮೆ ಯೋಜನೆಯ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸಭೆಯಲ್ಲಿಡಿಸಿ ಡಾ.ಎಂ.ಆರ್ .ರವಿ ಮಾತನಾಡಿದರು. (13ಕೆಪಿಎಚ್ 2)

