ವಿಕ ಸುದ್ದಿಲೋಕ ಗದಗ
ಜಿಲ್ಲೆಯ ಐತಿಹಾಸಿಕ ತಾಣ ಲಕ್ಕುಂಡಿಯಲ್ಲಿಪತ್ತೆಯಾಗಿದ್ದ ನಿಧಿಯ ಆಭರಣಗಳು ಮತ್ತು ಪುರಾತನ ವಸ್ತುಗಳು ಯಾವ ಕಾಲಕ್ಕೆ ಸೇರಿದ್ದು ಎಂಬುದನ್ನು ಖಚಿತಪಡಿಸಿಕೊಳ್ಳಲು ಪುರಾತತ್ವ ಇಲಾಖೆಯ ಉನ್ನತ ಅಧಿಕಾರಿಗಳ ತಂಡ ಮಂಗಳವಾರ ಮಹತ್ವದ ಪರಿಶೀಲನೆ ನಡೆಸಿತು.
ಪತ್ರಾಂಕಿತ ಮತ್ತು ಖಜಾನೆ ಅಧಿಕಾರಿಗಳ ಸುಪರ್ದಿಯಲ್ಲಿದ್ದ ಈ ನಿಧಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ತರಲಾಗಿತ್ತು. ಅಲ್ಲಿಕೇಂದ್ರ ಪುರಾತತ್ವ ಇಲಾಖೆ ಮತ್ತು ರಾಜ್ಯ ಪುರಾತತ್ವ ಇಲಾಖೆಯ ತಜ್ಞರು, ಅಧಿಕಾರಿಗಳ ಸಮ್ಮುಖದಲ್ಲಿಪ್ರತಿಯೊಂದು ವಸ್ತುವನ್ನು ಕೂಲಂಕಷವಾಗಿ ಪರಿಶೀಲಿಸಿದರು.
ಸುಮಾರು ಮೂರು ಗಂಟೆ ನಡೆದ ಈ ಸುದೀರ್ಘ ಪ್ರಕ್ರಿಯೆಯಲ್ಲಿ, ದೊರೆತಿರುವ ಪ್ರತಿಯೊಂದು ಚಿನ್ನಾಭರಣ ಮತ್ತು ಐತಿಹಾಸಿಕ ವಸ್ತುಗಳ ಅಳತೆ, ತೂಕ ಹಾಗೂ ವಿನ್ಯಾಸವನ್ನು ದಾಖಲಿಸಿಕೊಳ್ಳಲಾಯಿತು. ಭವಿಷ್ಯದ ಸಂಶೋಧನೆ ಮತ್ತು ದಾಖಲಾತಿಗಾಗಿ ಪ್ರತಿಯೊಂದು ಆಭರಣದ ಭಾವಚಿತ್ರ ಹಾಗೂ ವಿಡಿಯೊ ಚಿತ್ರೀಕರಣವನ್ನೂ ಅಧಿಕಾರಿಗಳು ಮಾಡಿಕೊಂಡರು.
ಪರಿಶೀಲನೆ ಪೂರ್ಣಗೊಂಡ ನಂತರ ನಿಧಿಯ ವಸ್ತುಗಳನ್ನು ಅಧಿಕಾರಿಗಳು ಮರಳಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
‘‘ಆಭರಣಗಳ ವಿನ್ಯಾಸ ಮತ್ತು ಲೋಹದ ಗುಣಲಕ್ಷಣಗಳನ್ನು ಆಧರಿಸಿ ಅವುಗಳು ಯಾವ ರಾಜಮನೆತನದ ಕಾಲಕ್ಕೆ ಸೇರಿವೆ ಎಂಬ ಬಗ್ಗೆ ಶೀಘ್ರದಲ್ಲೇ ಅಧಿಕೃತ ವರದಿ ನೀಡಲಾಗುವುದು,’’ ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿಜಿಲ್ಲಾಧಿಕಾರಿ ಸಿ.ಎನ್ .ಶ್ರೀಧರ, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ಇತರರು ಉಪಸ್ಥಿತರಿದ್ದರು.
-----
14ಸಲೀಮ2
ಗದಗ ಜಿಲ್ಲಾಡಳಿತ ಭವನದಲ್ಲಿಲಕ್ಕುಂಡಿಯಲ್ಲಿದೊರೆತ ನಿಧಿಯ ಇತಿಹಾಸದ ಬಗ್ಗೆ ತಜ್ಞರು ಪರಿಶೀಲನೆ ನಡೆಸಿದರು.

