ಕಾವಲರಹಟ್ಟಿ ಬಳಿ ಮ್ಯಾಸ ಬೇಡರ ಸಾಂಪ್ರದಾಯಿಕ ಆಚರಣೆ | ದೇವರ ಎತ್ತುಗಳ ಮೆರೆಸುವ ಸಂಭ್ರಮ
ಅದ್ಧೂರಿ ಶೂನ್ಯದ ಮಾರಮ್ಮ ಜಾತ್ರೆ
ವಿಕ ಸುದ್ದಿಲೋಕ ಚಳ್ಳಕೆರೆ
ತಾಲೂಕಿನ ಕಾವಲರಹಟ್ಟಿ ಬಳಿ ಬುಧವಾರ ಸಂಜೆ ಮ್ಯಾಸ ಬೇಡರು ಪಂಚ ದೇವರ ಸಂಗಮದೊಂದಿಗೆ ದೇವರ ಎತ್ತುಗಳ ಮೆರೆಸುವ (ಓಡಿಸುವ) ಮೂಲಕ ಮುತ್ತಯ್ಯಗಳ ಶೂನ್ಯದ ಮಾರಮ್ಮ ಜಾತ್ರೆಯನ್ನು ಬುಡಕಟ್ಟು ಸಂಪ್ರದಾಯದಂತೆ ನಡೆಸಿದರು.
ದೇವಿಯ ಪೂಜಾರಿ ಬೋರಯ್ಯ ಉಪವಾಸವಿದ್ದು, ಮಂಗಳವಾರ ರಾತ್ರಿ ದಾಸಯ್ಯಗಳ ಜತೆ ಹುತ್ತದ ಮಣ್ಣಿನಿಂದ ಮಾರಮ್ಮದೇವಿ ಮೂರ್ತಿ ತಯಾರಿಸಿ, ಒಡವೆಗಳಿಂದ ಅಲಂಕರಿಸಿ, ಕಾಸಿಂ ಹುಲ್ಲಿನಿಂದ ನಿರ್ಮಿಸಿದ ಗುಡಿಯಲ್ಲಿಮಾರಮ್ಮ ದೇವಿಯನ್ನು ಪ್ರತಿಷ್ಠಾಪಿಸಿದರು. ನನ್ನಿವಾಳ ಕಟ್ಟೆಮನೆ ಅಧಿಕಾರಿ ದೊರೆ ಸೂರನಾಯಕ ಸಮ್ಮುಖದಲ್ಲಿ ದೇವರ ಕಾರ್ಯ ನಡೆಸಲಾಯಿತು.
ಕಾವಲರಹಟ್ಟಿ ಮುತ್ತಯ್ಯಗಳ ಶೂನ್ಯದ ಮಾರಮ್ಮದೇವಿಯ ದೇವರ ಎತ್ತಿನಗೂಡು ನಡೆಯುವ ಜಾಗದಲ್ಲಿತಂಗಟೆ ರಂಬೆ, ಗಗಸೆ ರೆಂಬೆಗಳಿಂದ ಶ್ರೀಮುತ್ತೇಗಾರ ಲಿಂಗೇಶ್ವರಸ್ವಾಮಿ, ಜಗಲೂರಯ್ಯಸ್ವಾಮಿ, ಬಂಗಾರದೇವರು, ಶ್ರೀಬೊಮ್ಮಲಿಂಗೇಶ್ವ ಸ್ವಾಮಿ, ಗಾದ್ರಿಪಾಲನಾಯಕ, ದಾಸಯ್ಯಯರ ದೇವರ ಪದಿಗಳನ್ನು ಗೂಡಿನ (ಕೊಠಡಿ) ರೂಪದಲ್ಲಿಕಿಲಾರಿಗಳು ನಿರ್ಮಿಸಿದ್ದ ಸನ್ನಿಧಿಯಲ್ಲಿದೇವರ ಪೂಜೆಗಳು ಮತ್ತು ದಾಸಯ್ಯರಿಂದ ದೇವರ ಪದಿಗಳ ಮುಂದೆ ಮತ್ತು ಶೂನ್ಯದ ಮಾರಮ್ಮ ದೇವಿ ಗುಡಿಯ ಮುಂದೆ ಮಣೇವು ನಡೆಸಿದರು.
ಮುತ್ತಯ್ಯಗಳ ಶೂನ್ಯದ ಮಾರಮ್ಮ ದೇವಿ ಜಾತ್ರೆ ನಿಮಿತ್ತ ದೇವರ ಎತ್ತುಗಳನ್ನು ದೇವರ ಪದಿಗಳ ಬಳಿ ಕರೆತರಲಾಗಿತ್ತು. ಮಂಗಳವಾರ ರಾತ್ರಿ ಭಕ್ತರು ದೇವರ ಎತ್ತುಗಳಿಗೆ ತಂದ ಅಕ್ಕಿ, ರೊಟ್ಟಿ,ಬಾಳೆ ಹಣ್ಣು, ಬೆಲ್ಲಪ್ರಸಾದ ನೀಡಿ ದೇವರ ಎತ್ತುಗಳ ಜತೆ ವಾಸ್ತವ್ಯ ಮಾಡಿದ್ದರು. ತಮ್ಮ ಮನೆ ದೇವರುಗಳ ಎತ್ತುಗಳನ್ನು ತಮ್ಮ ಅಣ್ಣ-ತಮ್ಮಂದಿರ ಸಮ್ಮುಖದಲ್ಲಿಕಿಲಾರಿಗಳು ಪ್ರತ್ಯೇಕ ವಿಭಾಗ ಮಾಡಿಕೊಂಡು ಎತ್ತುಗಳನ್ನು ಮೂರು ಬಾರಿ ಮೆರೆಸಿದರು. ನಂತರ ದೇವರ ಎತ್ತುಗಳನ್ನು ತಮ್ಮ ದೇವರ ಪದಿಗಳ ಮುಂದೆ ಒಕರೆದೊಯ್ದರು.
ಶೂನ್ಯದ ಮಾರಮ್ಮ ದೇವಿಯ ದೇವರ ಎತ್ತಿನ ಗೂಡಿನಲ್ಲಿಶಂಖ-ಜಾಗಟೆ ಬಾರಿಸುವ ಮೂಲಕ ಭಕ್ತಿ ಸಮಪಿಸುವ ದಾಸಯ್ಯ, ಒಪ್ಪತ್ತಿನಿಂದ ಪೂಜಾ ಕಾರ್ಯಗಳಲ್ಲಿಭಾಗವಹಿಸುವುದರಿಂದ ಅವರಿಗೆ ಮೊದಲು ಬೆಲ್ಲ, ಬಾಳೆ ಹಣ್ಣನ್ನು ಮಣೇವು ರೂಪದಲ್ಲಿಇಡಲಾಯಿತು.
ದೇವರ ಎತ್ತುಗಳ ಕಾಯುವ ಗೋಪಾಲಕರು ಹುಲ್ಲಿನಿಂದ ನಿರ್ಮಿಸಿದ್ದ ಗುಡಿಯ ಸಮೇತ ಮಾರಮ್ಮದೇವಿಯ ಮಣ್ಣಿನ ಮೂರ್ತಿಯನ್ನು ಸೂರ್ಯ ಹುಟ್ಟುವ ಕಡೆ ತೆಗೆದುಕೊಂಡು ಹೋದರು. ಮರಳಿ ಬರುವಾಗ ಭಕ್ತರು ದೇವರ ಗುಡಿ ನಿರ್ಮಿಸಿದ್ದ ಹಲ್ಲನ್ನು ತಮ್ಮ ಮನೆಗಳಿಗೆ ಕೊಂಡ್ಯೊಯ್ದರು. ದೇವರ ಎತ್ತುಗಳನ್ನು ಮೆರವಣಿಗೆ ಮೂಲಕ ಗೂಡುಗಳಿಗೆ ಕಳಿಸುವ ಮೂಲಕ ಜಾತ್ರೆ ಸಂಪನ್ನಗೊಂಡಿತು.
ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ, ಕಿಲಾರಿಗಳಾದ ಜೋಗಯ್ಯ, ಪಾಲಯ್ಯ, ಕಣ್ಣಯ್ಯ, ದೊರೆ ಬೈಯಣ್ಣ, ದೊರೆನಾಗರಾಜ್ , ಅಪ್ಪಣ್ಣ, ಚಿನ್ನಯ್ಯ, ಓಬಯ್ಯ, ದಾಸಯ್ಯರು ಇದ್ದರು.
--
ಫೋಟೋ:15ಸಿಎಲ್ ಕೆ 1,2.
ಹುಲ್ಲಿನಿಂದ ನಿರ್ಮಿಸಿದ್ದ ಮಾರಮ್ಮ ದೇವಿ ಗುಡಿಯನ್ನು ಹೊತ್ತು ಊರ ಹೊಲಮಾರೆಗೆ ಸಾಗಿಸುತ್ತಿರುವುದು.
--
ಫೋಟೊ:15 ಸಿಎಲ್ ಕೆ 4,5.
ದೇವರ ಎತ್ತುಗಳನ್ನು ಮೆರೆಸುತ್ತಿರುವುದು.
--
ಫೋಟೊ:15 ಸಿಎಲ್ ಕೆ 6.
ದೇವರ ಗುಡಿ ಬಳಿ ದಾಸಯ್ಯರಿಂದ ಮಣೇವು.
--
ಫೋಟೊ:15 ಸಿಎಲ್ ಕೆ 7
ಮಾರಮ್ಮ ದೇವಿ ಗುಡಿ ಬಳಿ ಸೇರಿದ ದೇವರ ಎತ್ತುಗಳು.
--
ಫೋಟೊ:15 ಸಿಎಲ್ ಕೆ 8.
ಬೆಲ್ಲ, ಬಾಳೆ ಹಣ್ಣನ್ನು ಸವಿದ ದಾಸಯ್ಯರು.
--
ಫೋಟೊ:15ಸಿಎಲ್ ಕೆ 9.
ಜಾತ್ರೆಯಲ್ಲಿಭಾಗವಹಿಸಿದ್ದ ದಾಸಯ್ಯರು.

