Husband Kills Pregnant Wife And Commits Suicide Shocking Incident
ಗರ್ಭಿಣಿ ಪತ್ನಿ ಉಸಿರುಗಟ್ಟಿಸಿ ಕೊಂದು ನೇಣಿಗೆ ಶರಣಾದ ಗಂಡ (ಚಿತ್ರ ಎನ್ ಬಿ..)
Contributed by: MANJUNATHA S|Vijaya Karnataka•
* ನಾಯಿ ಬೆಲ್ಟ್ ನಿಂದ ಕುತ್ತಿಗೆ ಬಿಗಿದು ಕೃತ್ಯ
ವಿಕ ಸುದ್ದಿಲೋಕ ಬೆಂಗಳೂರುಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ಗರ್ಭಿಣಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಪತಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನಡೆದಿದೆ.
ಬನಶಂಕರಿ ಮೂರನೇ ಹಂತದ ನಿವಾಸಿ ಸ್ವಪ್ನಾ (28), ಮನೋಜ್ (30) ಮೃತರು. ಉತ್ತರಪ್ರದೇಶ ಮೂಲದ ಮನೋಜ್ ಹತ್ತು ವರ್ಷಗಳಿಂದ ತಂದೆ, ತಾಯಿ ಜತೆ ನಗರದಲ್ಲಿವಾಸಿಸುತ್ತಿದ್ದ. ಮೂರು ವರ್ಷಗಳ ಹಿಂದೆ ಸ್ವಪ್ನಾ ಅವರ ಜತೆ ವಿವಾಹವಾಗಿದ್ದ.
ಕಾರ್ಪೆಂಟರ್ ಆಗಿದ್ದ ಮನೋಜ್ ಇತ್ತೀಚೆಗೆ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮೂರು ತಿಂಗಳ ಗರ್ಭಿಣಿ ಸ್ವಪ್ನಾ ಮನೆಯಲ್ಲಿಇರುತ್ತಿದ್ದರು. ಕೌಟುಂಬಿಕ ವಿಚಾರಗಳಿಗೆ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಬುಧವಾರ ಬೆಳಗ್ಗೆಯೂ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿ ಸಿಟ್ಟಿನಲ್ಲಿದ್ದ ಮನೋಜ್ , ನಾಯಿ ಕುತ್ತಿಗೆಗೆ ಹಾಕುವ ಬೆಲ್ಟ್ ನಿಂದ ಪತ್ನಿ ಸ್ವಪ್ನಾ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಂದಿದ್ದಾನೆ. ಬಳಿಕ ಅದೇ ಬೆಲ್ಟ್ ನಿಂದ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಯ ಜಗಳವು ಏಕಾಏಕಿ ನಿಂತಿದ್ದನ್ನು ಸ್ಥಳೀಯರು ಗಮನಿಸಿ ಅನುಮಾನದ ಮೇರೆಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಒಳಗಿನಿಂದ ಲಾಕ್ ಆಗಿದ್ದ ಬಾಗಿಲು ಮುರಿದು ಒಳನುಗ್ಗಿ ನೋಡಿದಾಗ ಸ್ವಪ್ನಾ ಹಾಗೂ ಮನೋಜ್ ಮೃತದೇಹಗಳು ಪತ್ತೆಯಾಗಿದ್ದವು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಮನೋಜ್ ಪೋಷಕರು ಬೆಳಗ್ಗೆಯೇ ಕೆಲಸಕ್ಕೆ ಹೋಗಿದ್ದರು. ಹೀಗಾಗಿ, ಗಂಡ-ಹೆಂಡತಿ ಜಗಳವು ದುರಂತ ಅಂತ್ಯ ಕಂಡಿದೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಹಲವು ಆಯಾಮಗಳಲ್ಲಿತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದರು.