ಜನತೆಗೆ ಮತ್ತೆ ಟೋಲ್ ಹೆಚ್ಚಳದ ಬರೆ

Contributed byanil.kumar2@timesgroup.com|Vijaya Karnataka
another toll hike on the bangalore mysore route
- ಬೆಂಗಳೂರು-ಮೈಸೂರು ನಡುವೆ ಒಮ್ಮೆ ಹೋಗಿ ಬಂದರೆ 500 ರೂ. ಶುಲ್ಕ

ವಿಕ ಸುದ್ದಿಲೋಕ ಬೆಂಗಳೂರು
ರಾಜ್ಯದ ಹಲವು ಹೆದ್ದಾರಿಗಳಲ್ಲಿಟೋಲ್ ದರಗಳನ್ನು ಹೆಚ್ಚಿಸಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಹಾಗೂ ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ನ ಟೋಲ್ ಶುಲ್ಕವನ್ನು ಐದು ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿಎರಡನೇ ಬಾರಿಗೆ ಹೆಚ್ಚಳ ಮಾಡಲಾಗಿದೆ.

ಒಂದು ಬಾರಿಗೆ ಹೆದ್ದಾರಿಯಲ್ಲಿಸಂಚರಿಸುವ ಕಾರುಗಳ ಪ್ರವೇಶ ಶುಲ್ಕವನ್ನು 355ರಿಂದ 370 ರೂ.ಗೆ ಹೆಚ್ಚಿಸಲಾಗಿದೆ. 56.2 ಕಿ.ಮೀ ಅಂತರದ ಕಣಿಮಿಣಿಕೆ- ಶೇಷಗಿರಿ ಹಳ್ಳಿ ಪ್ಲಾಜಾದ ಶುಲ್ಕ 170ರಿಂದ 185ಕ್ಕೆ ಹೆಚ್ಚಳವಾಗಿದೆ. ಗಣಂಗೂರು ಪ್ಲಾಜಾ ಮೂಲಕ ಸಂಚರಿಸುವ ಕಾರುಗಳ ಪ್ರವೇಶ ಶುಲ್ಕವನ್ನು 175ರಿಂದ 185ಕ್ಕೆ ಹೆಚ್ಚಿಸಲಾಗಿದೆ. ಬೆಂಗಳೂರು-ಮೈಸೂರು ನಡುವೆ ಒಮ್ಮೆ ಹೋಗಿ ಬರುವ ಶುಲ್ಕ 500 ರೂ. ಆಗಿದೆ.

ಲಘು ವಾಣಿಜ್ಯ ವಾಹನಗಳು, ಲಘು ಸರಕು ಸಾಗಣೆ ವಾಹನಗಳು ಹಾಗೂ ಮಿನಿ ಬಸ್ ಗಳಿಗೆ ಒಂದು ಕಡೆಯ ಸಂಚಾರಕ್ಕೆ 295 ರೂ., ಎರಡು ಬಾರಿಗೆ 445 ರೂ. ನಿಗದಿಯಾಗಿದೆ. ಟ್ರಕ್ ಗಳು ಮತ್ತು ಬಸ್ ಗಳಿಗೆ ಒಂದು ಬಾರಿಗೆ 620 ರೂ., ಎರಡು ಬಾರಿಗೆ 930 ರೂ. ನಿಗದಿಯಾಗಿದೆ. ಮೂರು ಆಕ್ಸೆಲ್ ಗಳ ವಾಣಿಜ್ಯ ವಾಹನಗಳು, ಕಟ್ಟಡ ನಿರ್ಮಾಣ ಯಂತ್ರಗಳು ಹಾಗೂ ಅತಿ ಭಾರದ ವಾಹನಗಳ ಪ್ರವೇಶ ಶುಲ್ಕವನ್ನೂ ಹೆಚ್ಚಿಸಲಾಗಿದೆ.

ಅಲ್ಲದೆ, ಸ್ಯಾಟಲೈಟ್ ಟೌನ್ ರಿಂಗ್ ರೋಡ್ ನ ದಾಬಸ್ ಪೇಟೆ-ದೊಡ್ಡಬಳ್ಳಾಪುರ ನಡುವಿನ 80 ಕಿ.ಮೀ. ಸಂಚಾರ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಹುಲಿಕುಂಟೆ ಟೋಲ್ ಪ್ಲಾಜಾದಲ್ಲಿಕಾರು, ವ್ಯಾನ್ , ಜೀಪ್ ಸೇರಿ ಲಘು ಮೋಟಾರು ವಾಹನಗಳು ಒಮ್ಮೆ ಸಂಚರಿಸಲು 105ರ ಬದಲಿಗೆ 110 ರೂ. ಹಾಗೂ ಎರಡು ಬಾರಿ ಸಂಚರಿಸಲು 165 ರೂ. ಪಾವತಿಸಬೇಕು. ನಲ್ಲೂರು ಪ್ಲಾಜಾದಲ್ಲಿಒಮ್ಮೆ ಸಂಚರಿಸಲು 85 ರೂ. ಹಾಗೂ ಎರಡು ಬಾರಿಗೆ 130 ರೂ. ಪಾವತಿಸಬೇಕು. ಇತರೆ ವಾಹನಗಳಿಗೂ ಶುಲ್ಕ ಹೆಚ್ಚಿಸಲಾಗಿದೆ. ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಕಳೆದ ಏಪ್ರಿಲ್ 1ರಿಂದ ಶುಲ್ಕ ಹೆಚ್ಚಿಸಿದ ಬಳಿಕ, ಈಗ ಎರಡನೇ ಬಾರಿಗೆ ಶುಲ್ಕ ಹೆಚ್ಚಿಸಲಾಗಿದೆ.

ಬೆಂಗಳೂರು-ಹೈದರಾಬಾದ್ ಹೆದ್ದಾರಿ ಶುಲ್ಕವನ್ನೂ ಪ್ರಾಧಿಕಾರವು ಹೆಚ್ಚಿಸಿದ್ದು, ಕಾರು ಒಮ್ಮೆ ಸಂಚರಿಸಲು 125ರೂ., ದ್ವಿಮುಖ ಸಂಚಾರಕ್ಕೆ 185 ರೂ. ಬಾಗೇಪಲ್ಲಿಪ್ಲಾಜಾದಲ್ಲಿಪಾವತಿಸಬೇಕು. ಬೆಂಗಳೂರು-ಕನಕಪುರ- ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿಸಂಚರಿಸುವ ವಾಹನಗಳ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಅಟ್ಟಿಗೂಳಿಪುರ, ಸತ್ಯಗಾಲ ಮತ್ತು ಸೋಮನಹಳ್ಳಿ ಪ್ಲಾಜಾಗಳಲ್ಲಿಇದು ಮಂಗಳವಾರದಿಂದಲೇ ಜಾರಿಗೊಂಡಿದೆ.

ಕಲಬುರಗಿಯ ಹರವಾಳ, ವಿಜಯಪುರ-ಸಂಕೇಶ್ವರ ವಿಭಾಗದ ರಾಂಪುರ, ಬೀದರ್ - ಹುಮ್ನಾಬಾದ್ ವಿಭಾಗದ ಖಾದೇರ್ ನಗರ್ ಮತ್ತು ಕಣ್ಣೋಲಿ ಪ್ಲಾಜಾಗಳಲ್ಲೂದರ ಏರಿಕೆಯಾಗಿದೆ.