ಅಂಜುಮನ್ ಸಂಸ್ಥೆಯ ಆರೋಪ ಆಧಾರರಹಿತ

Contributed byrathodjayakumar92@gmail.com|Vijaya Karnataka
Vijay Karnataka
ಅಂಜುಮನ್ ಸಮಿತಿ ಮಾಜಿ ಅಧ್ಯಕ್ಷ ಎಚ್ .ಎನ್ .ಎಫ್ .ಇಮಾಮ್ ನಿಯಾಜಿ ಹೇಳಿಕೆ

ಸಂಸ್ಥೆ ಮೇಲಿನ ಆರೋಪ ಆಧಾರರಹಿತ
ವಿಕ ಸುದ್ದಿಲೋಕ ಹೊಸಪೇಟೆ (ವಿಜಯನಗರ)

‘‘ಅಂಜುಮನ್ ಸಂಸ್ಥೆಯ ಚುನಾವಣಾ ಪ್ರಕ್ರಿಯೆ ಕುರಿತು ಕೆಲವರು ಮಾಡುತ್ತಿರುವ ಆರೋಪಗಳು ಆಧಾರರಹಿತ ಮತ್ತು ಸತ್ಯಕ್ಕೆ ದೂರವಾಗಿವೆ,’’ ಎಂದು ಹುಡಾ ಅಧ್ಯಕ್ಷ ಹಾಗೂ ಅಂಜುಮನ್ ಸಮಿತಿ ಮಾಜಿ ಅಧ್ಯಕ್ಷ ಎಚ್ .ಎನ್ .ಎಫ್ . ಇಮಾಮ್ ನಿಯಾಜಿ ಸ್ಪಷ್ಟಪಡಿಸಿದರು.

ನಗರದಲ್ಲಿಶುಕ್ರವಾರ ಪತ್ರಿಕಾ ಭವನದಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದರು.

‘‘ಸಂಸ್ಥೆಯ ಕಾರ್ಯವೈಖರಿ ಮತ್ತು ಅಭಿವೃದ್ಧಿ ಕಾರ್ಯ ಸಹಿಸದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದ ಅವರು, ನಮ್ಮ ಸಮಿತಿಯ ಅವಧಿ ಮಾರ್ಚ್ 31ಕ್ಕೆ ಮುಕ್ತಾಯಗೊಂಡಿದೆ. 2025ರ ನವೆಂಬರ್ ನಲ್ಲಿನಾವು ನೋಂದಣಿ ಪ್ರಕ್ರಿಯೆ ಆರಂಭಿಸಿದ್ದೆವು. ಈ ಅವಧಿಯಲ್ಲಿಮೂರು ವರ್ಷದ ಅವಧಿಗೆ 8,134 ಸಾಮಾನ್ಯ ಸದಸ್ಯರು ಮತ್ತು 75 ಅಜೀವ ಸದಸ್ಯರು ಸೇರಿ ಒಟ್ಟು 8,209 ಸದಸ್ಯರು ನೋಂದಣಿಯಾಗಿದ್ದಾರೆ. ಸಂಸ್ಥೆಯಿಂದಲೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ವಕ್ಫ್ ಬೋರ್ಡ್ ಗೆ ಪಟ್ಟಿ ಸಲ್ಲಿಸಲಾಗಿದೆ. ಮಾರ್ಚ್ವರೆಗೆ 5,339 ಸದಸ್ಯರಿಗೆ ಕಾರ್ಡ್ ವಿತರಿಸಲಾಗಿದ್ದು, ಸಮಿತಿಯ ಅವಧಿ ಮುಗಿದಿದ್ದರಿಂದ ಉಳಿದ ಕಾರ್ಡ್ ಗಳು ಸಂಸ್ಥೆಯಲ್ಲಿವೆ,’’ ಎಂದು ವಿವರಿಸಿದರು.

ಆರೋಪಗಳಿಗೆ ಪ್ರತಿಕ್ರಿಯೆ:

ಪಟ್ಟಿಯಲ್ಲಿಬೇರೆ ಊರಿನವರಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ನಿಯಾಜ್ ಅವರು, ನಮ್ಮ 35 ವಾರ್ಡ್ ಗಳ ವ್ಯಾಪ್ತಿಯವರಿಗೆ ಮಾತ್ರ ಸದಸ್ಯತ್ವ ಪಡೆಯುವ ಹಕ್ಕಿದೆ. ನೊಂದಾಯಿತರೆಲ್ಲರೂ ಹೊಸಪೇಟೆಯವರೇ ಆಗಿದ್ದಾರೆ. ಅಕಸ್ಮಾತ್ ಅಕ್ಕಪಕ್ಕದ ಊರಿನವರ ಹೆಸರು ಪಟ್ಟಿಯಲ್ಲಿದ್ದರೆ, ಅವುಗಳನ್ನು ಪರಿಶೀಲಿಸಿ ತೆಗೆಯುವಂತೆ ನಾವೇ ಸೂಚಿಸಿದ್ದೇವೆ. ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಹೊರಗಿನವರಿದ್ದರೆ ಅವರನ್ನು ಕೈಬಿಟ್ಟು ಚುನಾವಣೆ ನಡೆಸಲಿ ಎಂದು ನಾವೇ ಸ್ವತಃ ತಿಳಿಸಿದ್ದೇವೆ,’’ ಎಂದು ಹೇಳಿದರು.

ಮುಖಂಡರಾದ ಅನ್ಸರ್ ಬಾಷಾ, ಫೈರೋಜ್ ಖಾನ್ , ಡಾ. ದರ್ವೇಶ್ , ಮೋಸಿನ್ , ಗುಲಾಂ ರಸೂಲ್ , ಅಥಾಯ್ ರಸೂಲ್ , ಗಫೂರ್ , ಮೊಹಮ್ಮದ್ ಗೌಸ್ , ಮುಷೀರ್ ಡಿ. ಇದ್ದರು.

ಫೋಟೊ: ವಿಜೆಎನ್ 17ಜಯಪ್ಪ06: ಇಮಾಮ್ ನಿಯಾಜಿ

ಬಾಕ್ಸ್

ಅಕ್ರಮ ಸದಸ್ಯತ್ವ ಕಾರ್ಡ್ ಹಂಚಿಕೆ, ಆರೋಪ

ಹೊಸಪೇಟೆ(ವಿಜಯನಗರ): ‘‘ನಗರದ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮ ಸದಸ್ಯತ್ವ ಕಾರ್ಡ್ ಗಳ ಹಂಚಿಕೆ ನಡೆದಿದೆ ಎಂದು ಆರೋಪಿಸಿ, ಮುಸ್ಲಿಂ ಸಮಾಜದ ಮುಖಂಡರು ನೂತನ ಚುನಾವಣಾಧಿಕಾರಿ ಹಾಗೂ ತಾಪಂ ಇಒ ಆಲಂ ಪಾಷಾ ಅವರಿಗೆ ಗುರುವಾರ ದೂರು ಸಲ್ಲಿಸಿದರು.

ದೂರು ಸಲ್ಲಿಸಿದ ಬಳಿಕ ಮಾತನಾಡಿದ ಮಾಜಿ ಅಧ್ಯಕ್ಷ ಖಾದರ್ ರಫಯಿ, ‘‘ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯ ರ್ಥಿಯೊಬ್ಬರು ಐದು ಸಾವಿರಕ್ಕೂ ಹೆಚ್ಚು ಸದಸ್ಯತ್ವ ಕಾರ್ಡ್ ಗಳನ್ನು ಅಕ್ರಮವಾಗಿ ಪಡೆದು ಹಂಚಿಕೆ ಮಾಡಿದ್ದಾರೆ. ಈ ಕ್ರಮವು ಚುನಾವಣೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಪ್ರಶ್ನಿಸುವಂತಿದೆ,’’ ಎಂದು ಆತಂಕ ವ್ಯಕ್ತಪಡಿಸಿದರು.

ಸಮಾಜದ ಮುಖಂಡರು ಪ್ರತಿಕ್ರಿಯಿಸಿ, ‘‘ಚುನಾವಣಾ ಪ್ರಕ್ರಿಯೆಯಲ್ಲಿಯಾವುದೇ ಪಕ್ಷಪಾತಕ್ಕೆ ಅವಕಾಶ ನೀಡಬಾರದು. ಅರ್ಹರಿಗೆ ಮಾತ್ರ ಅವಕಾಶ ಕಲ್ಪಿಸಿ, ಸಂವಿಧಾನ ಬದ್ಧವಾಗಿ ನ್ಯಾಯಯುತ ಚುನಾವಣೆ ನಡೆಸಬೇಕು,’’ ಎಂದು ಒತ್ತಾಯಿಸಿದರು.

ಚುನಾವಣಾಧಿಕಾರಿ ಸ್ಪಷ್ಟನೆ: ದೂರು ಸ್ವೀಕರಿಸಿದ ಚುನಾವಣಾಧಿಕಾರಿ ಆಲಂ ಪಾಷಾ, ‘‘ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನು ಚೌಕಟ್ಟಿನಲ್ಲಿಕೆಲಸ ಮಾಡುವುದಾಗಿ,’’ ಭರವಸೆ ನೀಡಿದರು.