ಮಳೆಗಾಲದ ಮಬ್ಬಾದ ವಾತಾವರಣಕ್ಕೆ ಮುದುಡುವ ಮನವನ್ನು ಸಿಹಿ ತಿನಿಸುಗಳು ಮುದಗೊಳಿಸುತ್ತವೆ.
ಶುಭಾ ವಿಕಾಸ್
ಏಲಕ್ಕಿಯ ಪರಿಮಳಕ್ಕೆ ಮನಸ್ಸು ಅರಳುತ್ತದೆ, ಬೆಲ್ಲದ ಸವಿ ದೇಹಕ್ಕೆ ಹಿತಾನುಭವ ನೀಡುತ್ತದೆ, ಇವೆರಡೂ ಬೆರೆತ ಸಿಹಿ ತಿನಿಸು ಸಡಗರವನ್ನು ಉಕ್ಕಿಸುತ್ತದೆ. ದಿನಪೂರ್ತಿ ಮೋಡ ಕವಿದ ವಾತಾವರಣ, ಸುರಿಯುವ ಮಳೆ ಸೃಷ್ಟಿಸುವ ಏಕತಾನತೆ ನಡುವೆ ಮನಸ್ಸು ಆಗಾಗ ಮುದುಡುತ್ತದೆ. ತಣ್ಣನೆಯ ಹವಾಮಾನದಲ್ಲಿದೇಹದ ತಾಪಮಾನವನ್ನು ಸಮತೋಲನದಲ್ಲಿಡಲು ದೇಹಕ್ಕೆ ಹೆಚ್ಚಿನ ಶಕ್ತಿಯ ಅಗತ್ಯ. ಇದರಿಂದ ಸಹಜವಾಗಿಯೇ ಕಾರ್ಬೋಹೈಡ್ರೇಟ್ ಇರುವ ಆಹಾರಗಳ ಕಡೆಗೆ ಬಯಕೆ ಹೆಚ್ಚಾಗುತ್ತದೆ. ಸಿಹಿ ತಿನಿಸುಗಳನ್ನು ಸೇವಿಸುವುದರಿಂದ ಸಂತೋಷ ನೀಡುವ ಹಾರ್ಮೋನ್ ಗಳು ಬಿಡುಗಡೆಯಾಗಿ ಮನಸ್ಸಿಗೆ ತಕ್ಷಣದ ಉಲ್ಲಾಸ ಸಿಗುತ್ತದೆ. ಇದಕ್ಕೆ ಪೂರಕವಾಗಿ ಹಾಲು, ತುಪ್ಪ, ಬೆಲ್ಲ, ಏಲಕ್ಕಿ ಸೇರಿಸಿದ ಪಾಯಸ, ಹಲ್ವದಂತಹ ರೆಸಿಪಿಗಳು ಮಳೆಗಾಲದ ಮೂಡನ್ನು ಉದ್ದೀಪನಗೊಳಿಸುತ್ತವೆ ಎನ್ನುತ್ತಾರೆ ಪಾಕತಜ್ಞರು.
ಸೀಸನಲ್ ಫ್ರೂಟ್ ಪ್ರಭಾವ
ವರ್ಷಧಾರೆಯ ತಂಪಿನೊಂದಿಗೆ ಭಾರತದಾದ್ಯಂತ ಆಹಾರ ಪದ್ಧತಿ ಹಾಗೂ ಸಿಹಿ ತಿಂಡಿಗಳ ಸವಿಯೂ ಬದಲಾಗುತ್ತದೆ. ಮಳೆಗಾಲದ ಆರಂಭದಲ್ಲಿ ಹಲಸು, ಮಾವು ಸಿಹಿ ತಿನಿಸುಗಳನ್ನು ಮಾಡಲು ಪ್ರೇರಣೆ ನೀಡುತ್ತವೆ. ಹಲಸಿನ ಹಣ್ಣಿನ ಕಡಬು, ಹೋಳಿಗೆ, ಮುಳಕ, ಹಲ್ವಾ, ಮಾವಿನ ಹಣ್ಣಿನ ಪಾಯಸ, ಬಿಸಿ ಗುಲಾಬ್ ಜಾಮೂನ್ , ಜಿಲೇಬಿಗಳು ಈ ಸೀಸನ್ ನ ಫೇವರಿಟ್ ಸಿಹಿಗಳು. ಮುಸ್ಸಂಜೆಗೆ ಸುರಿಯುವ ಮಳೆ ಜೊತೆ ಬಜ್ಜಿ, ಬೋಂಡಗಳ ಜೊತೆ ಗರಿಗರಿಯಾದ ಬಿಸಿ ಜಿಲೇಬಿಗೆ ಬೇಡಿಕೆ ದುಪ್ಪಟ್ಟಾಗುತ್ತದೆ. ಉತ್ತರ ಭಾರತದಲ್ಲಿಜಿಲೇಬಿಯನ್ನು ಬಿಸಿ ಹಾಲಿನೊಂದಿಗೆ ಅಥವಾ ರಬ್ಡಿಯೊಂದಿಗೆ ಸವಿಯುವುದೇ ಕ್ರೇಜ್ . ಇದು ಈಗ ದಕ್ಷಿಣ ಭಾರತದಲ್ಲೂಹೊಸ ರುಚಿಯಾಗಿ ಸೆಳೆದಿದೆ. ಬಿಸಿ ಮಲ್ಪುವಾಗೆ ಮಳೆಗಾಲದಲ್ಲಿಬೇಡಿಕೆ ಹೆಚ್ಚಿರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬೆಲ್ಲ, ಎಳ್ಳು ಮತ್ತು ಡ್ರೈಫ್ರೂಟ್ಸ್ ಆಧರಿತ ಲಡ್ಡುಗಳಿಗೆ ಕೂಡ ಬೇಡಿಕೆ ಇದೆ. ‘ಮಾವಿನ ಹಣ್ಣಿನ ರಬ್ಡಿ, ಪೇಡ, ರೋಲ್ , ಬರ್ಫಿ, ಮಾವಿನ ರಸಗುಲ್ಲಾ, ಕೇಕ್ ಹೀಗೆ ಮಾವು ಮಳೆಗಾಲದ ಆರಂಭದಲ್ಲಿಹಲವು ಸಿಹಿ ಪ್ರಯೋಗಗಳಿಗೆ ಒಳಗಾಗುತ್ತದೆ ಹಾಗೂ ಹೆಚ್ಚಿನ ಬೇಡಿಕೆ ಸೃಷ್ಟಿಸಿಕೊಳ್ಳುತ್ತದೆ. ಅದೇ ರೀತಿ ಬೆಳಗ್ಗೆ ಜಿಲೇಬಿ ಸೇವಿಸುವ ಕ್ರೇಜ್ ಶುರುವಾಗಿದೆ. ಗರಿಗರಿಯಾದ ಬಿಸಿ ಬಿಸಿ ಜಿಲೇಬಿ ಸೇವಿಸಲಿಕ್ಕಾಗಿಯೇ ಹುಡುಕಿ ಹೊರಡುತ್ತಾರೆ. ಆದರೆ ಬೆಳಗ್ಗೆಗೆ ಹೋಲಿಸಿದರೆ ಮುಸ್ಸಂಜೆಗೆ ಜಿಲೇಬಿ ಹೆಚ್ಚು ಸೆಳೆಯುತ್ತದೆ’ ಎನ್ನುತ್ತಾರೆ ಪಾಕ ತಜ್ಞ ಮದನ್ ರಾಮವೆಂಕಟೇಶ.
ಹಬ್ಬದ ಸಡಗರ
ಭಾರತದಲ್ಲಿಮಳೆಗಾಲದ ಅವಧಿಯಲ್ಲೇ ಸಾಲು ಸಾಲು ಹಬ್ಬಗಳು ಬರುತ್ತವೆ. ನಾಗರ ಪಂಚಮಿ, ವರಮಹಾಲಕ್ಷ್ಮಿ, ಗಣೇಶ ಚತುರ್ಥಿ, ಕೃಷ್ಣ ಜನ್ಮಾಷ್ಟಮಿ ಹೀಗೆ ಹಬ್ಬಗಳ ಸಾಲು ಕೂಡ ಸಿಹಿ ಸಂಭ್ರಮಕ್ಕೆ ಜೊತೆಯಾಗುತ್ತವೆ. ಈ ಹೊತ್ತಲ್ಲಿಸಾಂಪ್ರದಾಯಿಕ ಸಿಹಿ ತಿನಿಸುಗಳು ವ್ಯಾಪಕವಾಗಿ ಬೇಡಿಕೆ ಸೃಷ್ಟಿಸಿಕೊಳ್ಳುತ್ತವೆ. ಮನೆ ಹಾಗೂ ಮಾರುಕಟ್ಟೆಯಲ್ಲೂಸಾಂಪ್ರದಾಯಿಕ ಸಿಹಿ ತಿನಿಸುಗಳಾದ ಮೋದಕ, ಲಡ್ಡು, ಹೋಳಿಗೆ, ಪಾಯಸಗಳು ಸೆಳೆಯುತ್ತವೆ.
ಕೋಟ್
ಮಳೆಗಾಲದ ವಾತಾವರಣದಲ್ಲಿಖಾರ ಸೇವಿಸುವ ಬಯಕೆ ಒಂದೆಡೆಯಾದರೆ ಸಿಹಿ ಕೂಡ ಮನಸ್ಸನ್ನು ಉದ್ದೀಪಿಸಲು ಬಯಸುತ್ತದೆ. ಹೀಗಾಗಿ ಮಳೆಗಾಲದ ಆರಂಭದಲ್ಲಿಹಲಸು, ಮಾವು ಬಹುತೇಕ ಸಿಹಿ ತಿನಿಸುಗಳಲ್ಲಿಮೇಲ್ಪಂಕ್ತಿಯಲ್ಲಿರುತ್ತವೆ. ಜಿಲೇಬಿ ಹಾಗೂ ಜಾಮೂನ್ ಆ ಕ್ಷಣದ ಸಿಹಿ ಸೇವಿಸುವ ಬಯಕೆಯನ್ನು ಈಡೇರಿಸಿದರೆ ಮಳೆಯೊಂದಿಗೆ ಶುರುವಾಗುವ ಹಬ್ಬದ ಸೀಸನ್ ಸಾಂಪ್ರದಾಯಿಕ ತಿನಿಸುಗಳ ಬೇಡಿಕೆ ಹೆಚ್ಚಿಸುತ್ತದೆ.