ವಿಕ ಸುದ್ದಿಲೋಕ ಬೆಂಗಳೂರು ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿಮಕ್ಕಳ ಹಾಜರಾತಿಗೆ ಶಿಕ್ಷಣ ಇಲಾಖೆ 2026-27ನೇ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಿರುವ ‘ನಿರಂತರ’ ಆ್ಯಪ್ ಆಧಾರಿತ ಹಾಜರಾತಿ ವ್ಯವಸ್ಥೆಗೆ ತಾಂತ್ರಿಕ ದೋಷದ ಸಮಸ್ಯೆ ಕಾಡುತ್ತಿದೆ. ಶಾಲಾ ಶಿಕ್ಷಣ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಈಗಾಗಲೆ ರಾಜ್ಯದಲ್ಲಿನೋಂದಣಿಯಾದ 3.2 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ.72ರಷ್ಟು ವಿದ್ಯಾರ್ಥಿಗಳು ನಿರಂತರ ಆ್ಯಪ್ ಮೂಲಕ ಹಾಜರಾತಿ ದಾಖಲಿಸುತ್ತಿದ್ದಾರೆ. ಇನ್ನೂ 35.2 ಲಕ್ಷ ವಿದ್ಯಾರ್ಥಿಗಳ ನೋಂದಣಿ ಬಾಕಿ ಇದೆ. ತಾಂತ್ರಿಕ ಸಮಸ್ಯೆಯಿಂದ ನೋಂದಣಿ ಸಾಧ್ಯವಾಗುತ್ತಿಲ್ಲಎಂಬ ದೂರುಗಳು ಕೇಳಿಬಂದಿವೆ. ಶೈಕ್ಷಣಿಕ ವರ್ಷದ ಆರಂಭದಿಂದ ಜು.20ರವರೆಗೆ 3.2 ಲಕ್ಷ ವಿದ್ಯಾರ್ಥಿಗಳು ನಿರಂತರ ಆ್ಯಪ್ ಮೂಲಕ ನೋಂದಣಿಯಾಗಿದ್ದು, ಸರಕಾರಿ, ಅನುದಾನಿತ ಶಾಲೆಗಳಲ್ಲಿಶಿಕ್ಷಕರು ಈ ಆ್ಯಪ್ ಬಳಸಿ ಹಾಜರಾತಿ ದಾಖಲಿಸುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶಗಳು ಸೇರಿದಂತೆ ಕೆಲ ಭಾಗಗಳಲ್ಲಿತಾಂತ್ರಿಕ ದೋಷದ ಹಿನ್ನೆಲೆಯಲ್ಲಿಆ್ಯಪ್ ಹಾಜರಾತಿ ಬಳಕೆಗೆ ಅಡೆತಡೆ ಎದುರಾಗಿದೆ. ತಾಂತ್ರಿಕ ದೋಷಗಳ ಪತ್ತೆಗೆ ಮುಂದಾಗಿರುವ ಇಲಾಖೆ, ಈಗ ಬಿಸಿಯೂಟ ಯೋಜನೆಯಡಿಯಲ್ಲಿಮೊಟ್ಟೆ ತಿನ್ನುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಕೂಡ ಟ್ರ್ಯಾಕ್ ಮಾಡಲು ಚಿಂತನೆ ನಡೆಸಿದೆ. ವಿದ್ಯಾರ್ಥಿಗಳ ಜತೆಗೆ, ಶಿಕ್ಷಕರು ಹಾಗೂ ಶಾಲಾ ಶಿಕ್ಷಣ ಇಲಾಖೆ ಸಿಬ್ಬಂದಿ ಹಾಜರಾತಿಗೆ ಪರಿಚಯಿಸಲಾಗಿದ್ದ ಕರ್ತವ್ಯ ಆ್ಯಪ್ ಗೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆ್ಯಪ್ ಮೂಲಕ ಹಾಜರಾತಿ ಕಡ್ಡಾಯ ಎಂದು ಇಲಾಖೆ ಆದೇಶ ಹೊರಡಿಸಿದ ಬಳಿಕ ಶೇ.99ರಷ್ಟು ನೋಂದಣಿಯಾಗಿದೆ. ವಿದ್ಯಾರ್ಥಿಗಳ ಹಾಜರಾತಿಯಲ್ಲಿಪಾರದರ್ಶಕತೆ ತರುವ ಮೂಲಕ ವಿದ್ಯಾರ್ಥಿ ಕೇಂದ್ರಿತ ಯೋಜನೆಗಳನ್ನು ಜಾರಿಗೆ ತರಲು ಶಿಕ್ಷಣ ಇಲಾಖೆ ಮುಂದಾಗಿತ್ತು. ಇದಕ್ಕಾಗಿ ರಾಜ್ಯ ಸರಕಾರ 2.83 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಈ ಆ್ಯಪ್ ಆಧಾರಿತ ಹಾಜರಾತಿ ಮೂಲಕ ಸಮಗ್ರ ಹಾಜರಾತಿ ವರದಿಗಳನ್ನು ಕಲೆ ಹಾಕಿ ಅತಿ ಕಡಿಮೆ ಹಾಜರಾತಿ ಇರುವ ಶಾಲೆಗಳು ಅಥವಾ ಶೈಕ್ಷಣಿಕ ವಲಯಗಳನ್ನು ಗುರುತಿಸಲು ಇಲಾಖೆ ಚಿಂತನೆ ನಡೆಸಿದೆ. ಆಯಾ ಪ್ರದೇಶದ ಶೈಕ್ಷಣಿಕ ಹಿನ್ನೆಡೆಗೆ ಕಾರಣಗಳನ್ನು ವಿಶ್ಲೇಷಿಸಿ ಗುಣಮಟ್ಟ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ರೂಪಿಸಲು ಕೂಡ ಈ ಯೋಜನೆ ಇಲಾಖೆಗೆ ನೆರವಾಗಲಿದೆ.