ಪ್ರವಾಸ

Contributed byshubha.hegde@timesgroup.com|Vijaya Karnataka
exploring meghalaya caves natural wonders
ಮೇಘಾಲಯದ ಗುಹೆಗಳ ಸುತ್ತಾಟ

ಶ್ರೀನಿವಾಸ ಜೋಕಟ್ಟೆ
ಇಂಟ್ರೊ: ಮೇಘಾಲಯದಲ್ಲಿಆಕರ್ಷಕ ಗುಹೆಗಳಿದ್ದು, ಅದರ ಆಕಾರ, ಉದ್ದಗಳಿಗೆ ಖ್ಯಾತಿ ಪಡೆದಿವೆ.

ಮೇಘಾಲಯದ ಪ್ರವಾಸ ಅಂದರೆ ಬೆಟ್ಟಗಳ ನಡುವೆ ಮೋಡಗಳ ಜೊತೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಮುಂದೆ ಗುಹೆಗಳ ಹುಡುಕಾಟಕ್ಕೆ ಮನಸ್ಸು ಮುಂದಾಗುತ್ತದೆ.

ಮೇಘಾಲಯವು ನೈಸರ್ಗಿಕ ಸುಣ್ಣದ ಕಲ್ಲಿನ ಸಾವಿರಾರು ಗುಹೆಗಳನ್ನು ಹೊಂದಿದ್ದು, ಅವುಗಳ ವಿಶಿಷ್ಟ ಶಿಲಾ ರಚನೆಗಳು, ಅಲ್ಲಿನ ಭೂಗತ ನದಿಗಳು ಮತ್ತು ಚಕ್ರವ್ಯೂಹದಂತಹ ಸುತ್ತುಬರುವ ಹಾದಿಗಳು ಗಮನ ಸೆಳೆಯುತ್ತವೆ.

ಪೂರ್ವೋತ್ತರದ ಸ್ಕಾಟ್ ಲ್ಯಾಂಡ್ ಎನಿಸಿದ ಮೇಘಾಲಯದಲ್ಲಿಸುಮಾರು 1,700 ರಷ್ಟು ಗುಹೆಗಳಿವೆ ಎಂದು ಪುರಾತತ್ವ ತಜ್ಞರು ಹೇಳುತ್ತಿದ್ದು ಆ ನಿಟ್ಟಿನಲ್ಲಿಸಂಶೋಧನಾ ಕಾರ್ಯಗಳು ನಡೆಯುತ್ತಿವೆ. ಇವುಗಳಲ್ಲಿಸಾವಿರಕ್ಕೂ ಅಧಿಕ ಗುಹೆಗಳನ್ನು ಮಾತ್ರ ಈ ತನಕ ಪತ್ತೆ ಹಚ್ಚಿದ್ದಾರೆ. ಇತ್ತೀಚಿನ ದಿನಗಳಲ್ಲಿಗುಹೆಗಳನ್ನು ವೀಕ್ಷಿಸಲೆಂದೇ ಪ್ರವಾಸಿಗರು ಮೇಘಾಲಯಕ್ಕೆ ಬರುತ್ತಿದ್ದಾರೆ. ಮೇಘಾಲಯದಂತಹ ಚಿಕ್ಕ ರಾಜ್ಯದಲ್ಲಿಇಷ್ಟೊಂದು ಗುಹೆಗಳಿರುವುದು ವಿಸ್ಮಯ. ಕೆಲ ಸಮಯದ ಹಿಂದೆ ಭೂವಿಜ್ಞಾನಿಗಳು ಭೂಮಿಯ ಇತಿಹಾಸದಲ್ಲಿಹೊಸ ಕಾಲಯುಗವನ್ನು ಕಂಡು ಹಿಡಿದಿದ್ದು ಎಲ್ಲಾಮಾಧ್ಯಮಗಳಲ್ಲಿವರದಿಯಾಗಿತ್ತು. ಇದರಲ್ಲಿಮೇಘಾಲಯದ ಕನೆಕ್ಷನ್ ಇರುವುದು ವಿಶೇಷ ಆಸಕ್ತಿಗೆ ಕಾರಣವಾಗಿದೆ.ಈ ಆವಿಷ್ಕಾರವು ಪ್ರಸ್ತುತ ಭೂವೈಜ್ಞಾನಿಕ ಯುಗವನ್ನು ಮೇಘಾಲಯನ್ ಯುಗ ಎಂದು ಹೆಸರಿಸಲು ಕಾರಣವಾಯಿತು. ಮೇಘಾಲಯದ ಗುಹೆಗಳಲ್ಲಿಬಂಡೆಗಲ್ಲುಗಳಲ್ಲಿಜುರಾಸಿಕ್ ಯುಗದ ಅವಶೇಷಗಳೂ ದೊರೆತಿವೆ.

ಸಾಮಾನ್ಯವಾಗಿ ಪ್ರವಾಸಿಗರು ಸೋಹರಾ, ಮಯ್ ಸಿನ್ರಾಮ್ ಇಂತಹ ಗುಹೆಗಳನ್ನೇ ಹೆಚ್ಚಾಗಿ ವೀಕ್ಷಿಸುತ್ತಾರೆ. ಮೇಘಾಲಯದಲ್ಲಿನೆಲದೊಳಗೂ ಹರಿಯುವ ನದಿ, ಸರೋವರಗಳು ಇವೆ. ಅತಿಹೆಚ್ಚು ಮಳೆ ಬೀಳುವುದೂ ಇದಕ್ಕೆ ಕಾರಣವಾಗಿರಬಹುದು. ಐನೂರಕ್ಕಿಂತಲೂ ಹೆಚ್ಚು ಗುಹಾ ಸಂಶೋಧಕರು ಈ ಬಗ್ಗೆ ಸಂಶೋಧನೆ ನಡೆಸುತ್ತಲೇ ಬಂದಿದ್ದಾರೆ. ಈ ಕೆಲಸ ಈಗಲೂ ಮುಂದುವರಿಯುತ್ತಿದೆ. ಮೃದುವಾದ ಮರಳು, ಸುಣ್ಣದ ಶಿಲೆಗಳಲ್ಲಿಇಲ್ಲಿನ ಗುಹೆಗಳು ಶತಮಾನಗಳಿಂದ ರೂಪುಗೊಳ್ಳುತ್ತಾ ಬಂದಿವೆ.

ಖಾಸೀ ಬುಡಕಟ್ಟು, ಜೈನ್ತಿಯಾ (ಜೈಂತಿಯಾ) ಬುಡಕಟ್ಟು ಮತ್ತು ಗಾರೋ ಬುಡಕಟ್ಟು ಮೇಘಾಲಯದ ಪ್ರಮುಖ ಬುಡಕಟ್ಟು ಜನಾಂಗ. ಇವರೆಲ್ಲದಕ್ಷಿಣ ಚೀನಾ, ಮಂಗೋಲಿಯನ್ ಮೂಲದವರು ಎಂಬ ಮಾತೂ ಇದೆ. ನೋಡಲು ಬರ್ಮಿಯರ ತರಹ ಕಾಣುತ್ತಾರೆ. ಈ ಜನರೆಲ್ಲಸ್ನೇಹ ಸ್ವಭಾವದವರು. ಭಾರತದ ಅತಿ ಉದ್ದದ ಗುಹೆಗಳು ಮೇಘಾಲಯದ ಜೈನ್ತಿಯಾ ಬೆಟ್ಟಗಳು ಮತ್ತು ಚಿರಾಪುಂಜಿ ಪ್ರದೇಶಗಳಲ್ಲಿವೆ. ಭಾರತದ ಹತ್ತು ಅತಿ ಉದ್ದ ಮತ್ತು ಆಳವಿರುವ ಗುಹೆಗಳಲ್ಲಿ, ಮೊದಲ ಒಂಬತ್ತು ಮೇಘಾಲಯದಲ್ಲೇ ಇವೆ ಎನ್ನುತ್ತಾರೆ. ಆದರೆ ಹತ್ತನೆಯದು ಮಿಜೋರಾಂನಲ್ಲಿದೆ. ಅತಿ ಉದ್ದದ ಗುಹೆ ಕ್ರೆಮ್ ಲಿಯಾಟ್ ಪ್ರಾಹ್ ಇದು ಜೈನ್ತಿಯಾ ಬೆಟ್ಟಗಳಲ್ಲಿದೆ. ಕ್ರೆಮ್ ಲಿಯಾಟ್ ಪ್ರಾಹ್ ದಕ್ಷಿಣ ಏಷ್ಯಾದ ಅತಿ ಉದ್ದದ ನೈಸರ್ಗಿಕ ಗುಹೆಯಾಗಿದ್ದು, ಮೇಘಾಲಯದ ಪೂರ್ವ ಜೈನ್ತಿಯಾ ಬೆಟ್ಟಗಳ ಜಿಲ್ಲೆಯ ಶ್ನೊಂಗ್ರಿಮ್ ಪರ್ವತಶ್ರೇಣಿಯಲ್ಲಿದೆ. ಕ್ರೆಮ್ ಎಂದರೆ ಖಾಸಿ ಭಾಷೆಯಲ್ಲಿಗುಹೆ ಎಂದರ್ಥ. ಈ ಗುಹೆಯು ಬೃಹತ್ ಏರ್ ಕ್ರಾ´್ಟ… ಹ್ಯಾಂಗರ್ ಮಾರ್ಗಕ್ಕೆ ಪ್ರಸಿದ್ಧಿ.

ಚಿರಾಪುಂಜಿಯ ಮಯ್ ಸಿನ್ರಾಮ್ ಗುಹೆಯೊಳಗೆ ಈ ಕಡೆಯಿಂದ ಹೋಗಿ ಆ ಕಡೆಯಿಂದ ಬರುವುದೆಂದರೆ ರೋಮಾಂಚನ. ಬಗ್ಗಿಕೊಂಡೇ ದೇಹವನ್ನು ತೆವಳಿಕೊಂಡು ಸುತ್ತಿ ಸುತ್ತಿ ಒಳಹೋಗಿ ಆಚೆ ಬದಿಯಿಂದ ಹೊರಬರಬೇಕು. ಇಲ್ಲಿಕೆಲವೆಡೆ ನದಿಗಳೂ ಬೆಟ್ಟವನ್ನೇ ಕೊರೆದು ದಾರಿ ಮಾಡಿಕೊಂಡು ಹರಿಯುವ ದೃಶ್ಯಗಳಿವೆ. ಚಿರಾಪುಂಜಿಯ ಪ್ರವಾಸದಲ್ಲಿಬೆಟ್ಟದ ಮೇಲೆ ನಿಂತು ಕಣಿವೆಯ ಆ ಕಡೆಗೆ ಕಾಣುವ ಬಾಂಗ್ಲಾದೇಶದ ಹಳ್ಳಿಗಳನ್ನು ಕಾಣುವುದೂ ಪ್ರವಾಸಿಗರಿಗೆ ಕುತೂಹಲ.

ಬಾಕ್ಸ್

ಪ್ರಸಿದ್ಧ ಗುಹೆಗಳು

ಮೌಸ್ಮೈ ಗುಹೆಯು ಚಿರಾಪುಂಜಿಯಿಂದ ಸುಮಾರು ಆರು ಕಿ.ಮೀ ದೂರದಲ್ಲಿದೆ. ಇದು ಮೇಘಾಲಯದ ಪ್ರಸಿದ್ಧ ಮತ್ತು ಪ್ರವಾಸಿಗರಿಗೆ ಸುಲಭವಾಗಿ ಪ್ರವೇಶಿಸಬಹುದಾದ ಗುಹೆ. ಇದು ನೈಸರ್ಗಿಕವಾಗಿ ರೂಪುಗೊಂಡ ಕಲಾಕೃತಿಗಳು ಮತ್ತು ಉತ್ತಮ ಬೆಳಕನ್ನು ಹೊಂದಿದ್ದು, ಅನ್ವೇಷಕರಿಗೆ ಸುಲಭ. ಕ್ರೆಮ್ ಲಿಯಾಟ್ ಪ್ರಾಹ್ ಇದು ಜೈಂನ್ತಿಯಾ ಬೆಟ್ಟಗಳಲ್ಲಿದೆ. ಈ ಗುಹೆ ಭಾರತದ ಅತಿ ಉದ್ದದ ನೈಸರ್ಗಿಕ ಗುಹೆ. ಕ್ರೆಮ್ ಪುರಿ ಗುಹೆ ಮೌಸಿನ್ರಾಮ್ ಎಂಬಲ್ಲಿದೆ. ಅತಿ ಉದ್ದದ ಬಲುವಾ ಕಲ್ಲಿನ ಗುಹೆ. ಸುಮಾರು 24.5 ಕಿಲೋಮೀಟರ್ ಉದ್ದದ ಈ ಗುಹೆಯು ವಿಶಾಲವಾದ ಚಕ್ರವ್ಯೂಹದಂತಿದೆ. ಇದು ಶಿಲಾ ರಚನೆಗಳು ಮತ್ತು ನೀರಿನ ಕೊಳಗಳನ್ನು ಹೊಂದಿದೆ. ಮೌಮ್ಲುಹ್ ಗುಹೆ ಚಿರಾಪುಂಜಿಯಲ್ಲಿದೆ. ಸುಮಾರು ಏಳು ಕಿಲೋಮೀಟರ್ ಉದ್ದದ ಈ ಗುಹೆಯು ಮೇಘಾಲಯ ಯುಗದ ಭೌಗೋಳಿಕ ಪುರಾವೆಗಳಿಗೆ ಪ್ರಸಿದ್ಧಿ ಪಡೆದಿದೆ. ಮಲ್ಲುಅಥವಾ ಮೌಮ್ಲುಹ್ ಗುಹೆ ಎಂದು ಸೊಹ್ರಾ (ಚಿರಾಪುಂಜಿ) ದಲ್ಲಿರುವ ಇದು ಭಾರತೀಯ ಉಪಖಂಡದ ನಾಲ್ಕನೇ ಅತಿ ಉದ್ದದ ಗುಹೆ. ಕೊತ್ಸತಿ-ಉಮ್ಲಾವನ್ ಗುಹೆ ಜೈನ್ತಿಯಾ ಬೆಟ್ಟಗಳಲ್ಲಿದೆ. ಇದು ಬಹು ಪ್ರವೇಶದ್ವಾರಗಳು ಮತ್ತು ನಿರ್ಗಮನಗಳನ್ನು ಹೊಂದಿದ್ದು, ಸಾಹಸಿಗರಿಗೆ ಉತ್ತಮ ತಾಣವಾಗಿದೆ. ಮೇಘಾಲಯದಲ್ಲಿಕ್ರೆಮ್ ಮೌಮ್ಲುಹ್ ,ಕ್ರೆಮ್ ಬಾಂಧ್ ,ಕ್ರೆಮ್ ಲಿಂಫಟ್ , ಮಾಯ್ಸ… ಮಾಯಿ ಗುಹೆ , ಕ್ರೆಮ್ ಲಿಯಾತ್ ಪ್ರಾಹ್ , ಕ್ರೆಮ್ ಲುಬೊನ್ , ಕೋತ್ಸತೀ -ಉಮ್ಲಾವನ್ ಗುಹೆ ಪ್ರಣಾಳಿ ಇವೆಲ್ಲಪ್ರಮುಖ ಗುಹೆಗಳು.

ಆದರೆ ಹೆಚ್ಚಿನ ಗುಹೆಗಳು ಅತ್ಯಂತ ಆಳವಾದ ಮತ್ತು ದಟ್ಟವಾದ ಕಾಡುಗಳಲ್ಲಿವೆ. ಆದ್ದರಿಂದ ಸ್ಥಳೀಯ ಮಾರ್ಗದರ್ಶಿ ಇಲ್ಲದೆ ಒಳಗೆ ಹೋಗುವುದು ಕೆಲವೊಮ್ಮೆ ಅಪಾಯಕಾರಿ. ಗುಹೆಗಳಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್ ಮತ್ತು ಏಪ್ರಿಲ್ ನಡುವಿನ ಅವಧಿ.