ವಿಕ ಸುದ್ದಿಲೋಕ ಸಾಗರತಾಲೂಕಿನ ಕರೂರು-ಭಾರಂಗಿ ಹೋಬಳಿಯ ಮಳೆಮಾಪನ ಯಂತ್ರಗಳನ್ನು ತಕ್ಷಣ ದುರಸ್ತಿಪಡಿಸುವಂತೆ ಒತ್ತಾಯಿಸಿ ಕೃಷಿ ಸಮಾಜ ಹಾಗೂ ಸಂಯುಕ್ತ ರೈತ ಸಂಘದಿಂದ ಗುರುವಾರ ಆವಿನಹಳ್ಳಿಯಲ್ಲಿಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ತಾ.ಪಂ. ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಕಳೆದ ಎರಡು ವರ್ಷಗಳಿಂದ ತಾಲೂಕಿನ ಹಲವು ಮಳೆಮಾಪನ ಯಂತ್ರಗಳು ಹಾಳಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲಎಂದು ಆರೋಪಿಸಿದರು.
ಮಳೆಮಾಪನ ಯಂತ್ರಗಳನ್ನು ಸರಿಪಡಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇದರ ಪರಿಣಾಮವಾಗಿ ರೈತರಿಗೆ ವೈಜ್ಞಾನಿಕ ಆಧಾರದ ಮೇಲೆ ಬೆಳೆಹಾನಿ ಪರಿಹಾರ ದೊರೆಯುತ್ತಿಲ್ಲಎಂದು ಅವರು ದೂರಿದರು.
ಕಳೆದ ವರ್ಷ ಅತಿವೃಷ್ಟಿಯಿಂದ ಕರೂರು-ಭಾರಂಗಿ ಹೋಬಳಿ ಸೇರಿದಂತೆ ತಾಲೂಕಿನಾದ್ಯಂತ ವ್ಯಾಪಕ ಬೆಳೆಹಾನಿಯಾಗಿತ್ತು. ರೈತರು ನಿಗದಿತ ಪ್ರಮಾಣದಲ್ಲಿಬೆಳೆವಿಮೆ ಪ್ರೀಮಿಯಂ ಪಾವತಿಸಿದ್ದರೂ ಅತ್ಯಂತ ಕಡಿಮೆ ಪರಿಹಾರ ನೀಡಲಾಗಿದೆ. ಈ ವರ್ಷವೂ ತಾಲೂಕಿನಲ್ಲಿಮಳೆಯ ಕೊರತೆ ಕಂಡುಬಂದಿದ್ದು, ಶಾಸಕರು ಹಾಗೂ ಸಚಿವರು ಕೂಡಲೇ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದರು.
ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ಮಾತನಾಡಿ, 2024-25ನೇ ಸಾಲಿನಲ್ಲಿಬೆಳೆಹಾನಿಗೆ ಅತ್ಯಂತ ಕಡಿಮೆ ಪರಿಹಾರ ನೀಡಲಾಗಿದೆ. ತಾಲೂಕಿನ 34 ಗ್ರಾಮ ಪಂಚಾಯಿತಿಗಳ ಪೈಕಿ ನಾಲೈ್ಕದು ಪಂಚಾಯಿತಿಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳ ರೈತರಿಗೆ ಸಮರ್ಪಕ ಪರಿಹಾರ ದೊರೆತಿಲ್ಲಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಯುಕ್ತ ರೈತ ಸಂಘದ ಅಧ್ಯಕ್ಷ ಎಂ.ಬಿ. ಮಂಜಪ್ಪ ಮಾತನಾಡಿ, ಮಳೆಮಾಪನ ಯಂತ್ರಗಳ ದುರಸ್ತಿಗೆ ಇದುವರೆಗೆ ಟೆಂಡರ್ ಕೂಡ ಕರೆಯಲಾಗಿಲ್ಲ. ರೈತರಿಂದ ಬೆಳೆವಿಮೆ ಹಣವನ್ನು ಸಂಗ್ರಹಿಸಲಾಗುತ್ತಿದೆ. ಆದರೆ, ಪರಿಹಾರ ಮಾತ್ರ ಸಮರ್ಪಕವಾಗಿ ನೀಡುತ್ತಿಲ್ಲ. ಇದರಿಂದ ರೈತರು ವಿಮಾ ಕಂಪನಿಗಳ ಲಾಭಕ್ಕಾಗಿಯೇ ಹಣ ಪಾವತಿಸಿದಂತಾಗಿದೆ ಎಂದು ದೂರಿದರು.
ಸಾಗರ ತಾಲೂಕಿನ ಕರೂರು-ಭಾರಂಗಿ ಹೋಬಳಿ ಮಳೆಮಾಪನ ಯಂತ್ರಗಳನ್ನು ತಕ್ಷಣ ದುರಸ್ತಿಪಡಿಸುವಂತೆ ಒತ್ತಾಯಿಸಿ ಕೃಷಿ ಸಮಾಜ ಹಾಗೂ ಸಂಯುಕ್ತ ರೈತ ಸಂಘದಿಂದ ಗುರುವಾರ ಆವಿನಹಳ್ಳಿಯಲ್ಲಿಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.