ಕಿರಣ ಭಟ್ ಸಹಬಾಳ್ವೆ ಮತ್ತು ಪರಸ್ಪರ ಸಹಕಾರವನ್ನು ಧ್ವನಿಸುವ ನಾಟಕ ಮತ್ತಾಯ. ಈ ನಾಟಕ ನಮ್ಮ ಸ್ವಾರ್ಥಕ್ಕಾಗಿ, ಕ್ಷಣದ ತೃಪ್ತಿಗಾಗಿ ಪ್ರಕೃತಿಯನ್ನು ಕೊಳ್ಳೆ ಹೊಡೆದುಬಿಡುವ ಹಪಾಹಪಿತನದ ಕುರಿತು ಎಚ್ಚರಿಕೆ ನೀಡುತ್ತದೆ.
ಮತ್ತಾಯ ಮತ್ತು ಯೋಹಾನ್ನ ಎಂಬಿಬ್ಬರು ನೆರೆ ಹೊರೆಯ ಗೆಳೆಯರು. ಮತ್ತಾಯನಲ್ಲಿಧಾನ್ಯವಿದೆ. ಬಾವಿಯಿದೆ. ಕೋಳಿಗಳಿವೆ. ಯೋಹಾನ್ನ ಉಂಡಾಡಿ ಗುಂಡ. ದಿನಾ ಬಂದು ಮತ್ತಾಯ ಮಾಡಿದ ಅಡುಗೆಯನ್ನು ಉಂಡು, ತೇಗಿ ಹೋಗುವವ. ಇದ್ದಾಗ ತಿಂದು ಮುಗಿಸ್ಬಿಡ್ಬೇಕು ಎನ್ನುವದು ಆತನ ವಾದ. ಇಂಥ ಸ್ಥಿತಿಯಲ್ಲೂಅವರ ಗೆಳೆತನ ಮಾತ್ರ ಗಾಢವಾದದ್ದು. ಇಂತಿರುವಾಗ ತೀವ್ರ ಬರ ಕಾಣಿಸಿಕೊಳ್ಳುತ್ತದೆ. ಅಹಾರ, ನೀರು ಕರಗಿದಂತೆ ಮತ್ತಾಯನಲ್ಲಿಸ್ವಾರ್ಥ ಮೂಡುತ್ತದೆ. ಆತ ಯೋಹಾನ್ನನಿಗೆ ಊಟವನ್ನು ನಿರಾಕರಿಸಿ ಅಟ್ಟಿಬಿಡುತ್ತಾನೆ. ಅಂಡಲೆಯುತ್ತಿದ್ದ ಯೋಹಾನ್ನ ಹಸಿವಿನಿಂದ ಸಾಯುತ್ತಾನೆ.
ಈ ನಾಟಕದ ಪ್ರದರ್ಶನದ ಶೈಲಿ ವಿಶಿಷ್ಟವಾದದ್ದು. ಇದು ಅಖಾಡ ಶೈಲಿ. ಮಧ್ಯದಲ್ಲಿನಾಟಕದ ಅಖಾಡ. ಪ್ರೇಕ್ಷಕರಿಗಾಗಿ ಅದರ ಸುತ್ತ ಹಂತ ಹಂತಗಳ ಗ್ಯಾಲರಿ. ಇಂಥ ವ್ಯವಸ್ಥೆಯಲ್ಲಿ ಮಣ್ಣ ಬಣ್ಣದ ನೆಲದ ಮೇಲೆ ನಾಟಕ ನಡೆಯುತ್ತದೆ. ಪ್ರಸ್ತುತ ಪ್ರಯೋಗದ ವೈಶಿಷ್ಟ್ಯ ಇರುವದೇ ಅದರ ಪ್ರಸ್ತುತಿಯಲ್ಲಿ. ಈ ನಾಟಕದ ವಿನ್ಯಾಸಕ, ನಿರ್ದೇಶಕ ಕೇರಳದ ಅರುಣ ಲಾಲ್ ತಮ್ಮದೇ ಆದ ವಿಶಿಷ್ಟ ಶೈಲಿಯೊಂದನ್ನು ಕಂಡುಕೊಂಡಿದ್ದಾರೆ. ದೇಹ ಭಾಷೆಯ ಜೊತೆಗೆ ರಂಗಪರಿಕರಗಳನ್ನು ಪ್ರಧಾನವಾಗಿಟ್ಟುಕೊಂಡು ನಾಟಕ ಕಟ್ಟುವ ಕಲೆಯಿದು. ಇಲ್ಲಿರಂಗಪರಿಕರಗಳು ನಟರಷ್ಟೇ ಪ್ರಧಾನ. ಅವು ಬರಿಯ ಪರಿಕರಗಳಾಗಿರದೇ ವಿವಿಧ ರೂಪಗಳನ್ನು ಪಡೆಯುತ್ತ, ರೂಪಕಗಳೂ ಆಗುತ್ತ ಹೋಗುತ್ತವೆ.
ಪ್ರಸ್ತುತ ಪ್ರಯೋಗದಲ್ಲಿನೆಲದ ತುಂಬ ವಿವಿಧ ವಿನ್ಯಾಸಗಳಲ್ಲಿಸಂಯೋಜಿಸಲ್ಪಟ್ಟ ಇಟ್ಟಿಗೆಗಳಿವೆ. ರಂಗದ ಒಂದು ಮೂಲೆಯಲ್ಲಿಕಾವು ಕೋಲಿನಂಥ ಮರದ ಬೊಡ್ಡೆ. ಇನ್ನೊಂದು ತುದಿಗೆ ಬಿದಿರಿನ ಅಂಡೆಯಂಥ ಚಿಕ್ಕ ಕಂಬ. ಸ್ವಲ್ಪ ದೂರದಲ್ಲಿಇಟ್ಟಿಗೆ, ಹಲಗೆಗಳ ಗೇಟ್ ನಂಥ ಆಕೃತಿ. ಒಂದು ಬದಿಯಲ್ಲಿಇಟ್ಟಿಗೆಗಳನ್ನು ಪೇರಿಸಿದ ಬಾವಿ. ಇಂಥದೊಂದು ಅಖಾಡದಲ್ಲಿನಟರು ಶರೀರ ಭಾಷೆಯ ಬಲದೊಂದಿಗೆ ನಾಟಕ ಕಟ್ಟುತ್ತ ಹೋಗುತ್ತಾರೆ. ನಾಟಕದ ಮೊದಲ ಭಾಗದಲ್ಲಿಕಾಣುವುದು ಮತ್ತಾಯ, ಯೋಹಾನ್ನರ ಉತ್ಸಾಹ ತುಂಬಿದ ಗಾಢ ಗೆಳೆತನದ ದಿನಗಳು. ಇಲ್ಲಿಕುಶಾಲು ಇದೆ. ಕಾಲೆಳೆಯುವಿಕೆ ಇದೆ. ಬಾಲ್ಯದ ದಿನಗಳ ನೆನಪುಗಳಿವೆ. ಮದುವೆಯ ಕನಸುಗಳಿವೆ. ಇವನ್ನೆಲ್ಲಕಸುವು ತುಂಬಿದ ದೇಹಭಾಷೆ, ಆಂಗಿಕ ಅಭಿನಯ, ವಾಚಿಕಗಳ ಮೂಲಕ ಇಬ್ಬರು ನಟರು ಕಟ್ಟಿಕೊಡುತ್ತಾರೆ. ಕಚಗುಳಿಯಿಡಬಲ್ಲಪಂಚ್ ತುಂಬಿದ ಮಾತುಗಳಿವೆ. ಉತ್ತರಾರ್ಧ ಬಿರು ಬರಗಾಲದ ಛಾಯೆ. ಮತ್ತಾಯ ಯೋಹನ್ನನಿಗೆ ಊಟ ನಿರಾಕರಿಸಿದ್ದಾನೆ. ಆದರೆ ದಿನ ಕಳೆದಂತೆ ಒಂಟಿತನ ಬಾಧಿಸತೊಡಗಿದೆ. ಉಪವಾಸದಿಂದ ಅಂಡಲೆಯುತ್ತಿದ್ದ ಯೋಹನ್ನನಿಗೂ ಈಗ ಜ್ಞಾನೋದಯವಾಗಿದೆ.
‘ಯಾವಾಗ ನಾವು ಕೊನೆಯ ಅಗುಳನ್ನು ತಿಂದು ಮುಗಿಸ್ತೇವೋ, ಕೊನೆಯ ಮೀನಿಗೆ ಬಲೆ ಹಾಕ್ತೇವೋ, ಕೊನೆಯ ಗುಟುಕು ನೀರನ್ನು ಕುಡೀತೇವೋ ಆಗ ನಾವು ಕಳೆದುಕೊಂಡಿದ್ದು ಏನನ್ನು ಎಂದು ನಮಗೆ ತಿಳಿಯುತ್ತದೆ’
ಕೈಗೆ ಸಿಕ್ಕ ಬೀಜವೊಂದನ್ನು ನೆಟ್ಟು ಯೋಹನ್ನ ಗತಿಸಿಹೋಗಿದ್ದಾನೆ. ಒಂಟಿ ಮತ್ತಾಯ ರೋದಿಸುತ್ತಿದ್ದಾನೆ. ಚದುರಿ ಬಿದ್ದ ಇಟ್ಟಿಗೆ ತುಂಡುಗಳು ಈಗ ಗೋರಿಗಳಾಗಿವೆ. ನಾಟಕದುದ್ದಕ್ಕೂ ಇಟ್ಟಿಗೆ ತುಂಡುಗಳು ನಟರ ಕೈಯಲ್ಲಿವಿವಿಧ ರೂಪ ಪಡೆಯುತ್ತ ಹೋಗುತ್ತವೆ. ಬಾವಿಯಾಗಿ, ಕಾಳಿನ ಕಣಜವಾಗಿ, ಕೋಳಿಯಾಗಿ, ರಥವಾಗಿ, ಏನೇನೋ ಆಗುತ್ತ ಕೊನೆಗೆ ಗೋರಿಯಾಗುತ್ತವೆ. ಇವುಗಳನ್ನು ಬಳಸಿಕೊಂಡು ನಾಟಕ ಕಟ್ಟಿದ ನಟರನ್ನು ನಿಜಕ್ಕೂ ಮೆಚ್ಚಬೇಕು. ನೂರು ನಿಮಿಷಗಳ ಕಾಲ ನಿರಂತರವಾಗಿ ಶರೀರ, ಶಾರೀರಗಳನ್ನು ಕಲಾತ್ಮಕವಾಗಿ ದುಡಿಸಿಕೊಳ್ಳುವದು ಸುಲಭವಲ್ಲ. ಕುಮಾರ್ ಲಾಲ್ ಮತ್ತು ಕ್ಲೇವಿನ್ ಇಂಥದೊಂದನ್ನು ಸಾಧಿಸಿಬಿಡುತ್ತಾರೆ. ಅನುಷ್ ಶೆಟ್ಟಿಯವರ ಸಂಗೀತ ವಾತಾವರಣ ಸೃಷ್ಟಿಸುವಲ್ಲಿನೆರವಾಗಿದೆ. ನಿರ್ದಿಗಂತ ನಿರ್ಮಾಣದ, ಮಂಗಳೂರಿನ ಅಸ್ಥಿತ್ವ ಅಭಿನಯಿಸಿದ ನಾಟಕ ಇದು.