-ಪುರಸಭೆ ಅಧ್ಯಕ್ಷೆ ರೇಷ್ಮಾ ಸಿಖಂದರ್ ತಾಖೀತು-ಎಸ್ ಟಿಪಿ, ಸ್ಲಂ ಗುರುತಿಸುವಿಕೆ ಕಾವೇರಿದ ಚರ್ಚೆ
ವಿಕ ಸುದ್ದಿಲೋಕ ಹಗರಿಬೊಮ್ಮನಹಳ್ಳಿ
‘‘ಪಟ್ಟಣದಲ್ಲಿಕೊಳಚೆ ಪ್ರದೇಶಗಳನ್ನು ಗುರುತಿಸಿ, ಅಭಿವೃದ್ಧಿಪಡಿಸುವಲ್ಲಿಅನಗತ್ಯ ವಿಳಂಬ ಬೇಡ,’’ ಎಂದು ಪುರಸಭೆ ಅಧ್ಯಕ್ಷೆ ರೇಷ್ಮಾ ಸಿಖಂದರ್ ತಾಖೀತು ಮಾಡಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿನಡೆದ ಸಾಮಾನ್ಯ ಸಭೆಯಲ್ಲಿಬುಧವಾರ ಮಾತನಾಡಿದರು.
‘‘ಕೊಳಚೆ ಪ್ರದೇಶಗಳ ಅಭಿವೃದ್ಧಿ ವಿಳಂಬವಾಗಿದೆ. ಈಗಾಗಲೆ ಗುರುತಿಸಲಾದ ಪ್ರದೇಶಗಳ ಪೈಕಿ ಸದಸ್ಯರಿಗೆ ಆಕ್ಷೇಪವಿದ್ದರೆ ಖುದ್ದು ಸದಸ್ಯರೊಂದಿಗೆ ವಾರ್ಡ್ ಸರ್ವೆ ನಡೆಸಿ, ಅಂತಿಮಪಡಿಸಿ. ಆದರೆ, ಅನಗತ್ಯವಾಗಿ ವಿಳಂಬ ಮಾಡುವುದು ಬೇಡ,’’ ಎಂದರು. ಇದಕ್ಕೆ ಸದಸ್ಯ ನಾಗರಾಜ ಜನ್ನು ಪ್ರತಿಕ್ರಿಯಿಸಿ, ‘‘ಅಧಿಕಾರಿಗಳೇ ಸರ್ವೆ ನಡೆಸಲಿ,’’ ಎಂದಾಗ ಸದಸ್ಯ ಬಿ.ಗಂಗಾಧರ ಆಕ್ಷೇಪ ವ್ಯಕ್ತಪಡಿಸಿ, ‘‘ಸದಸ್ಯರೊಂದಿಗೆ ತೆರಳಿ.’’ ಎಂದರು. ಸದಸ್ಯ ಎಂ.ಮರಿರಾಮಪ್ಪ ಮಧ್ಯಪ್ರವೇಶಿಸಿ, ‘‘ಪುನಃ ಸರ್ವೆ ಬೇಡ. ಈಗಾಗಲೆ ಆಯ್ಕೆಯಾಗಿರುವ 7 ವಾರ್ಡ್ ಗಳಲ್ಲಿಅಭಿವೃದ್ಧಿ ಕಾರ್ಯ ಆರಂಭಿಸಿ. ಉಳಿದ ವಾರ್ಡ್ ಗಳಲ್ಲಿಕೊಳಚೆ ನಿರ್ಮೂಲನೆ ಮಂಡಳಿ ಮತ್ತು ಪುರಸಭೆ ಸಿಬ್ಬಂದಿ ಸರ್ವೆ ನಡೆಸಿ ಮಾಹಿತಿ ಸಲ್ಲಿಸಲಿ,’’ ಎಂದಾಗ ಅಧ್ಯಕ್ಷೆ ಸಮ್ಮತಿ ಸೂಚಿಸಿದರು.
ಕೊಳಚೆ ನಿರ್ಮೂಲನೆ ಮಂಡಳಿ ಎಇ ಶಿವಕುಮಾರ ಮಾತನಾಡಿ, ‘‘ಜಿಲ್ಲೆಯಲ್ಲಿ111 ಕೊಳಚೆ ಪ್ರದೇಶಗಳಿದ್ದು ಈ ಪೈಕಿ ಕೂಡ್ಲಿಗಿ, ಕೊಟ್ಟೂರು ಹೂವಿನಹಡಗಲಿಯಲ್ಲಿಅಭಿವೃದ್ಧಿ ಕೈಗೊಳ್ಳಲಾಗಿದೆ. ಪಟ್ಟಣದ ಪ್ರದೇಶಗಳ ಫಲಾನುಭವಿಗಳ ಪಟ್ಟಿ, ಎನ್ ಒಸಿ, ಪ್ರದೇಶಗಳ ಚಕ್ಕುಬಂದಿ ಮತ್ತು ಸ್ಕೆಚ್ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಬೇಕು,’’ ಎಂದರು.
ನಿವೇಶನ ಪರವಾನಗಿ: ಏಕ ನಿವೇಶನಗಳಿಗೆ ಬಾಕಿ ಉಳಿಸಿ ಬಹು ನಿವೇಶನಗಳಿಗೆ ಪರವಾನಗಿ ನೀಡುತಿರುವ ಕ್ರಮ ಕುರಿತು ಸದಸ್ಯ ಜೋಗಿ ಹನುಮಂತಪ್ಪ ಸಭೆಯ ಗಮಸೆಳೆದರು. ನಿವೇಶನಗಳಿಗೆ ಪರವಾನಗಿ ನೀಡುವ ಮುನ್ನ ಸಭೆಯ ಗಮನಕ್ಕೆ ತನ್ನಿ ಎಂದು ಸದಸ್ಯ ಪವಾಡಿ ಹನುಮಂತಪ್ಪ ಸೂಚನೆ ನೀಡಿದರು. ‘‘ಏಕ ನಿವೇಶನ ಕುರಿತು ಮುಂದಿನ ಸಭೆಯಲ್ಲಿಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ,’’ ಅಧ್ಯಕ್ಷೆ ರೇಷ್ಮಾ ಸಿಖಂದರ್ ಖಚಿತಪಡಿಸಿದರು.
ಶುದ್ಧೀಕರಣ ಘಟಕ : ಮುತ್ಕೂರು ಗ್ರಾಮದ ಬಳಿ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ 3 ಎಕರೆ ನಿವೇಶನ ಕಾಯ್ದಿರಿಸಿ, ಒಳಚರಂಡಿ ನಿರ್ಮೂಲನೆ ಮಂಡಳಿಗೆ ಹಸ್ತಾಂತರಿಸಲಾಗಿದೆ ಎಂದು ಸಭೆಗೆ ಮುಖ್ಯಾಧಿಕಾರಿ ಎಂ.ಕೆ.ಮುಗಳಿ ತಿಳಿಸಿದರು. ‘‘ಮೊದಲು ಚರಂಡಿಗಳಿಂದ ಸಮರ್ಪಕವಾಗಿ ನೀರು ಹರಿದುಹೋಗುವಂತೆ ಕ್ರಮಕೈಗೊಳ್ಳಲು,’’ ಸದಸ್ಯೆ ಕಮಲಮ್ಮ ಶಿವಮೊಗ್ಗ ಆಗ್ರಹಿಸಿದರು.
ರಾಯಣ್ಣ ಪಾರ್ಕ್ ನಿರ್ಮಾಣ : ಪಟ್ಟಣದಲ್ಲಿಸಂಗೊಳ್ಳಿ ರಾಯಣ್ಣ ಪಾರ್ಕ್ ನಿರ್ಮಾಣ ಕುರಿತಂತೆ ಸದಸ್ಯ ಎಂ.ಮರಿರಾಮಪ್ಪ ಗಮನಸೆಳೆದಾಗ, ಛತ್ರಪತಿ ಶಿವಾರ್ಜಿ ಪಾರ್ಕ್ ಅಭಿವೃದ್ಧಿಗೆ ಸದಸ್ಯ ದೀಪಕ್ ಕಠಾರೆ ಒತ್ತಾಯಿಸಿದರು. ‘‘ಹೇಮರೆಡ್ಡಿ ಮಲ್ಲಮ್ಮ ವೃತ್ತ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು,’’ ಎಂದು ಸದಸ್ಯ ತ್ಯಾವಣಗಿ ಕೊಟ್ರೇಶ್ ಒತ್ತಾಯಿಸಿದಾಗ ‘‘ಮುಂದಿನ ಸಭೆಯಲ್ಲಿಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು,’’ ಎಂದು ಅಧ್ಯಕ್ಷೆ ಭರವಸೆ ನೀಡಿದರು.
ನಾನಾ ಸೌಲಭ್ಯ ಕೋರಿ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಂಜುನಾಥ ಮನವಿ ಸಲ್ಲಿಸಿದರು. ಉಪಾಧ್ಯಕ್ಷೆ ನೇತ್ರಾವತಿ ಸೆರೆಗಾರ, ಸದಸ್ಯರಾದ ತೆಲಿಗಿ ನೆಲ್ಲುಇಸ್ಮಾಯಿಲ್ , ರಾಜೇಶ್ ಬ್ಯಾಡಗಿ, ಅಂಬಿಕಾ ದೇವೇಂದ್ರಪ್ಪ, ಮಂಜುಳಾ ಕೃಷ್ಣನಾಯ್ಕ, ನವೀನ್ ಕುಮಾರ್ , ಬಣಕಾರ ಸುರೇಶ, ಅಜೀಜುಲ್ಲಾ, ಮಂಗಳಾ ರವೀಂದ್ರಗೌಡ, ಬಡಲಡಕಿ ಕೃಷ್ಣಪ್ಪ, ಉಪ್ಪಾರ ಬಾಳಪ್ಪ ಇದ್ದರು.
ಫೋಟೋ ಕ್ಯಾಪ್ಷನ್ : 22ಎಚ್ ಬಿಎಚ್ 3
ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿನಡೆದ ಸಾಮಾನ್ಯ ಸಭೆಯಲ್ಲಿಪುರಸಭೆ ಅಧ್ಯಕ್ಷೆ ರೇಷ್ಮಾ ಸಿಖಂದರ್ ಮಾತನಾಡಿದರು.