ಮುಂಬಯಿ: ದೇಶಾದ್ಯಂತ ನಡೆಯುವ ಹಲವಾರು ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮಾಸ್ಟರ್ ಮೈಂಡ್ ಬಿಜೇಂದ್ರ ಗುಪ್ತಾನನ್ನು ಬಿಹಾರದಲ್ಲಿಬಂಧಿಸಲಾಗಿದೆ. ಆತನಿಗಾಗಿ ಬಿಹಾರದ ಹಲವಾರು ಕಡೆಗಳಲ್ಲಿಶೋಧ ಕಾರ್ಯಾಚರಣೆ ನಡೆಸಿದ್ದ ಮಹಾರಾಷ್ಟ್ರ ಪೊಲೀಸರು ಅಂತಿಮವಾಗಿ ಆತನನ್ನು ಸಹಚರನೊಂದಿಗೆ ಬಂಧಿಸಿದರು. ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪತ್ರಿಕೆ ಸೋರಿಕೆ ಪ್ರಕರಣದ ‘ಮಾಸ್ಟರ್ ಮೈಂಡ್ ’ ಎಂದು ಆತನನ್ನು ಗುರುತಿಸಲಾಗಿದೆ. ಕಳೆದ ಒಂದು ತಿಂಗಳಿನಿಂದ ಪೊಲೀಸರು ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದರೂ ಆತ ಚಾಲಾಕಿತನದಿಂದ ತಪ್ಪಿಸಿಕೊಳ್ಳುತ್ತಿದ್ದ. ಬಿಜೇಂದ್ರ ಗುಪ್ತಾನ ಹೆಸರು 2024ರ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿಯೂ ಕೇಳಿ ಬಂದಿತ್ತು. ಮಾಧ್ಯಮವೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿಇದು ಬಹಿರಂಗವಾಗಿತ್ತು. ಈ ಸಂದರ್ಭದಲ್ಲಿಬಿಜೇಂದ್ರ ಗುಪ್ತಾ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಹಲವಾರು ರಹಸ್ಯ ವಿಷಯಗಳನ್ನು ಹಂಚಿಕೊಂಡಿದ್ದ. ಇದರಲ್ಲಿಅಕ್ರಮ ಜಾಲದ ಕಾರ್ಯನಿರ್ವಹಣೆಯ ಬಗ್ಗೆಯೂ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ. ಬಿಜೇಂದ್ರ ಗುಪ್ತಾನ ಪತ್ನಿ ಸುಮನ್ ಗುಪ್ತಾ ಕೂಡ ಟಿಇಟಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿಭಾಗಿಯಾಗಿದ್ದಾರೆ ಎನ್ನಲಾಗಿದೆ.