ಡಾ. ಸತ್ಯನಾರಾಯಣ ಭಟ್ (ಪು.9ಲೀಡ್ )

Contributed byShridevi Ambekallu|Vijaya Karnataka
ayurvedic tips for maintaining brain health
ಮಿದುಳು ಎಲ್ಲಿದೆ? ಅದನ್ನು ಸಂತೈಸಬಲ್ಲೆವೆ?

---------------------
ಡಾ. ಸತ್ಯನಾರಾಯಣ ಭಟ್ ಪಿ.

---------

ಒತ್ತಡದ ಬದುಕನ್ನು ನಿಯಂತ್ರಿಸಿಕೊಳ್ಳುವುದಕ್ಕೆ ಏನು ಮಾಡಬೇಕು? ನಮ್ಮ ಆಲೋಚನೆಗಳು ಹೇಗಿರಬೇಕು?

-------------

ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ. ನೆರೆಮನೆಯವರ ದುಃಖಕೆ ಅಳುವವರ ಮೆಚ್ಚ ಕೂಡಲಸಂಗಮ ದೇವಾ. ಸಾವಿರ ವರುಷದ ಹಿಂದೆ ಬರೆದ ಸಾಲು ಇದೀಗ ಹೆಚ್ಚು ಪ್ರಸ್ತುತ. ಬದುಕು ನಿರಾಳವಾಗಿರಲು ಬಸವಣ್ಣ ಬರೆದ ವಚನವಿದು.

ಇಂದು ಒದಗಿದ ಜಾಗತಿಕ ಸವಾಲುಗಳು ಒಂದೆರಡಲ್ಲ. ಸ್ಟೊ್ರೕಕ್ (ಮಿದುಳು ನಿಷ್ಕಿ್ರಯತೆ), ಫಿಟ್ಸ್ (ಮೂರ್ಛೆ ರೋಗ) ಮತ್ತು ಮರೆಗುಳಿತನದ ಅಲ್ಜೀಮಿಯರ್ ಕಾಯಿಲೆಗಳು ಏರುಮುಖವಾಗುತ್ತಿದೆ. ಇಂತಹ ಸಂದರ್ಭ ಬಾರದೆ ಇರುವಂತೆ ತಡೆಯುವ ಹಾದಿಗಳಿವೆಯೆ?

ರೋಗಿಗಳ ಸಂಖ್ಯೆ ಹೆಚ್ಚುವುದು ಆರೋಗ್ಯವಂತ ಸಮಾಜದ ಲಕ್ಷಣ ಅಲ್ಲ. ‘ವಿಷಾದೋ ರೋಗ ವರ್ಧನಾನಾಂ ..’ ಎಂದು ಚರಕ ಬಹಳ ವರ್ಷಗಳ ಹಿಂದೆಯೇ ಹೇಳಿದ್ದಾರೆ. ಬಸವಣ್ಣನವರು ಹೇಳಿದ್ದು ಸಹ ಅದನ್ನೇ! ನೆರೆಮನೆಯವರ ದುಃಖಕ್ಕೆ ನಾವೇಕೆ ಅಳಬೇಕು? ನಮ್ಮ ನಮ್ಮ ತನು, ಮನ ಸಂತೈಸಿಕೊಳ್ಳುವಾ. ಅಂತಹ ಹಾದಿಗಳಾವುವು?

ಮನಸ್ಸಿನ Íಕ್ತಿ

ಚಿಕ್ಕ ಮಕ್ಕಳಿಗೆ ಒಂದು ಆಟ. ಅದರ ಹೆಸರು ಕೆರೆ ದಡ ಆಟ. ವರ್ತುಲಾಕಾರವಾಗಿ ಹಾಕಿದ ಗೆರೆ. ಅದರಲ್ಲಿನಿಲ್ಲುವ ಮಕ್ಕಳು. ನಡುವೆ ನಿಂತ ನಾಯಕ ಸೀಟಿ ಊದುವನು. ಕೆರೆ ಮತ್ತು ದಡ ಎಂಬ ಪದಗಳ ಪುನರುಚ್ಚಾರಣೆ. ಕೆರೆ ಅಂದಾಗ ಮುಂದಕ್ಕೆ ನೆಗೆತ. ದಡ ಅಂದರೆ ಗೆರೆಯಲ್ಲಿಯೇ ಸ್ಥಿತ! ಕಿವಿಯಿಂದ ಕೇಳುವ ಸದ್ದು. ಎಚ್ಚೆತ್ತ ಮನಸ್ಸು ದಡವೋ, ಕೆರೆಯೋ ಎಂದು ನಿರ್ಧರಿಸುತ್ತದೆ. ತಟ್ಟನೆ ಮೊಣಕಾಲಿನ ಸ್ನಾಯು ಸೆಟೆದುಕೊಂಡು ನೆಗೆಯಬೇಕೇ, ನಿಂತ ಭಂಗಿಯೇ? ಮಿದುಳು ನಿರ್ಧರಿಸುತ್ತದೆ. ಹೀಗೆ ಸದಾ ಜಾಗೃತ ಸ್ಥಿತಿಯಲ್ಲಿನಮ್ಮ ಮನಸ್ಸು ನಿಲುಗಡೆಯ ಉಪಾಯಗಳನ್ನು ನಿರಂತರ ಹುಡುಕುತ್ತಿರುತ್ತದೆ. ಅದನ್ನು ಯೋಗ - ಧ್ಯಾನಗಳ ಮೂಲಕ ಸಾಧಿಸಬಹುದು. ಮನದ ಚಂಚಲತೆಗೆ ಕಡಿವಾಣ ಹಾಕಬಹುದು. ನೂರ್ಕಾಲದ ನಿರೋಗ ಬದುಕು ನಮ್ಮದಾಗಿಸಿಕೊಳ್ಳಬಹುದು.

ಪಂಚ ಜ್ಞಾನೇಂದ್ರಿಯಗಳು ನಮಗೆ ತಿಳಿದಂತೆ ಕಿವಿ, ಕಣ್ಣು, ಮೂಗು, ನಾಲಗೆ ಮತ್ತು ಚರ್ಮ. ಇವಾವುವೂ ನಿಜ ಅರ್ಥದಲ್ಲಿಇಂದ್ರಿಯಗಳಲ್ಲ. ಕೇವಲ ಅಧಿಷ್ಠಾನ ಮಾತ್ರ. ಅಂದರೆ ಈ ಐದು ಸಂವೇದನೆಗಳು ನಮಗೆ ಉಂಟಾಗಲು ಕೆಲಸ ಮಾಡುವುದು ಮನಸ್ಸು! ಅದು ಈ ತಾಣದಲ್ಲಿಶಬ್ದ, ಸ್ಪರ್ಶಾದಿಗಳು ನಮಗೆ ಅನುಭವ ಆಗಲು ಸಹಕರಿಸುತ್ತದೆ. ಆ ಮನಸ್ಸು ಎಲ್ಲಿದೆ? ಸ್ಥೂಲ ಅರ್ಥದಲ್ಲಿಮಿದುಳನ್ನು ತೋರಿಸುತ್ತೇವೆ. ಅಂದರೆ ಈ ಅವಯವಗಳು ಕ್ಷಣಕ್ಷಣದ ಸಂವೇದನೆಗಳನ್ನು ಅತ್ಯಂತ ಚುರುಕುತನದಿಂದ ಮಿದುಳಿಗೆ(ಆಯಾ ಗೊತ್ತು ಪಡಿಸಿದ ಪ್ರದೇಶ) ತಲುಪಿಸುವುದು ಅತಿ ಸೂಕ್ಷ್ಮಾತಿ ಸೂಕ್ಷ್ಮ ನರಗಳ ಮೂಲಕ! ಇದು ವಾತ ಎಂಬ ದೇಹಸ್ಥ ಮೂಲಭೂತ ಧಾತು,ದೋಷ, ಮಲದ ಮೂಲಕ ಸಂಭವಿಸುತ್ತದೆ.

ಮನಸ್ಸಿನ ಕಾರ್ಯವೈಖರಿಯ ವಿವರ

ಬಸವ ಶರಣರ ಸಮಕಾಲೀನ ಚಿಂತಕನ ಹೆಸರು ಚಕ್ರಪಾಣಿ ದತ್ತ. ಇಂದಿನ ಬಂಗಾಲ ಮೂಲದವನು. ಮನಸ್ಸು ಅಧಿಷ್ಠಾನ ಮತ್ತು ಅದರ ವಿವರಗಳ ಬಗ್ಗೆ ಚರಕ ಸಂಹಿತೆ ಒಂದು ವ್ಯಾಖ್ಯಾನ ನೀಡುತ್ತದೆ. ಯುಗಪತ್ ಎಂಬ ಪದದ ಮೂಲಕ ಮನಸಿನ ಕಾರ್ಯವೈಖರಿ ವಿವರಿಸಿದ್ದು ಚರಕ ಮಹರ್ಷಿ. ಆದರೆ ಅದರ ವಿಶದೀಕೃತ ವಿವರ ನೀಡಲು ನಾಲ್ಕು ಸಾವಿರ ವರ್ಷದ ಅನಂತರ ಚಕ್ರಪಾಣಿಯು ಒಂದು ನ್ಯಾಯ(ಸಾದೃಶ್ಯ-ಸಮೀಕರಣ) ಉಲ್ಲೇಖಿಸುತ್ತಾನೆ. ಆ ನ್ಯಾಯದ ಹೆಸರು ಸೂಚೀಪಟಲ ನ್ಯಾಯ. ಕಮಲದ ದಳಗಳನ್ನು ಒಂದೇ ಬಾರಿಗೆ ಸೂಜಿಯೊಂದು ಹೊಕ್ಕು ಇತ್ತಣದಿಂದ ಅತ್ತಣಕ್ಕೆ ಸಾಗುತ್ತದೆ. ಅದೇ ರೀತಿಯಾಗಿ ಕೆರೆ ದಡ ಆಟದಲ್ಲಿಮನಸು ಮತ್ತು ದೇಹದ ಸ್ಥಿತ ಮತ್ತು ಚಲನ ಶೀಲತೆಯನ್ನು ಮನಸ್ಸು ಕಾಪಾಡುವ ಪ್ರಕ್ರಿಯೆ ಜರಗುತ್ತದೆ. ಅಂತಹ ಮನಸ್ಸಿನ ವಿಷಾದತೆಯೇ ಖಿನ್ನತೆ, ಚಿಂತೆ, ಮರೆಗುಳಿತನ, ಅಪಸ್ಮಾರ, ಸ್ಟೊ್ರೕಕ್ ಕಾಯಿಲೆಗಳ ಮೂಲ ಕಾರಣ. ‘ಸತ್ವಮುಚ್ಯತೇ ಮನಃ’ ಎಂದರು ಚರಕರು. ಅದಕ್ಕೂ ಎರಡು ದೋಷಗಳಿವೆ. ರಜಸ್ಸು ಮತ್ತು ತಮಸ್ಸು. ಅದನ್ನು ಗೆಲ್ಲಲು ಧ್ಯಾನ ಮತ್ತು ಪ್ರಾಣಾಯಾಮ ಮಾತ್ರ ಅಲ್ಲ, ಸಾತ್ವಿಕ ಆಹಾರ ಸೇವನೆಯ ಶಿಸ್ತಿನ ಜೀವನವನ್ನು ರೂಢಿಸಿಕೊಳ್ಳಬೇಕು.

ಸಸ್ಯಾಹಾರವೇ ಸಾತ್ವಿಕ ಬದುಕಿನ ಹಾದಿ

ಈಗ ಚಾತುರ್ಮಾಸದ ಅವಧಿ. ಋುತುಗಳಿಗೆ ಅನುಗುಣವಾಗಿ ಶಾಕ, ದ್ವಿದಳ, ದಧಿ ಮತ್ತು ಕ್ಷೀರಗಳನ್ನು ಸಹ ಬಿಟ್ಟು ನಿರಮ್ಮಳ ಬದುಕು ಬಾಳಲು ಸರಳ ಆಹಾರ ಮತ್ತು ಆಚಾರದ ವಿಧಿ ವಿಧಾನವನ್ನು ಪೂರ್ವಿಕರು ನಮಗೆ ಹಾಕಿಕೊಟ್ಟರು. ಅದನ್ನು ಅನುಸರಿಸಿದರೆ ಸಾಕು, ನರಮಂಡಲ, ಮಿದುಳು ಕಾಯಿಲೆ ಬಾರದು.

ಮಾತು, ಕೈ ಕಾಲುಗಳು, ಗುದ ಮತ್ತು ಜನನೇಂದ್ರಿಯವು ಪಂಚ ಕರ್ಮೇಂದ್ರಿಯಗಳು. ಅಂದರೆ ಎಲ್ಲಬಗೆಯ ದೇಹ ಎಂಬ ರಥದ ಕೆಲಸ ಕಾರ್ಯ ನಿರ್ವಹಿಸುವ ಈ ಐದು ಇಂದ್ರಿಯಗಳು. ಪಂಚೇಂದ್ರೀಯ ಮತ್ತು ಕರ್ಮೇಂದ್ರಿಯ ಸೇರಿದರೆ ಹತ್ತು ಇಂದ್ರಿಯಗಳು. ಹನ್ನೊಂದನೆಯದು ಮನಸ್ಸು. ಇದನ್ನು ಉಭಯೇಂದ್ರಿಯ ಎನ್ನುತ್ತಾರೆ. ಅದು ಜ್ಞಾನೇಂದ್ರಿಯವೂ ಹೌದು. ಕರ್ಮೇಂದ್ರಿಯವೂ ಹೌದು.

ಸದಾಚಾರದ ವಚನ

‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ನಮ್ಮ ಕೂಡಲ ಸಂಗಮ ದೇವನ ಒಲಿಸುವ ಪರಿ’. ದೇವರು ನಾಲಗೆ ಕೊಟ್ಟಿದ್ದುಸದಾ ಕಾಲ ಒಳಿತು ನುಡಿಯಲು, ಸ್ಮರಣೆ ಮಾಡಲು ಮಾತ್ರ. ಭಗವಂತ ಕಣ್ಣು ಕೊಟ್ಟಿದ್ದು ಒಳಿತನ್ನು ನೋಡಲು. ಕೈ ಕೊಟ್ಟದ್ದು ಮುಗಿಯಲು. ಕಾಲು ಕೊಟ್ಟದ್ದು ದುಡಿಮೆಗೆ, ವ್ಯಾಯಾಮಶೀಲತೆಗೆ. ಗುದದಿಂದ ಅನಗತ್ಯ ಮಲ, ವಾಯು ಹೊರಸಾಗುತ್ತದೆ. ಜನನೇಂದ್ರಿಯದ ಮೂಲಕ ಸಹ ಬೇಡದ ಜಲೀಯಾಂಶ ಹೊರಸಾಗುತ್ತದೆ. ಕರ್ಮೇಂದ್ರಿಯಗಳ ಕೆಲಸ ಹೇಗಿರಬೇಕು ಎಂಬುದನ್ನು ಬಸವಣ್ಣನವರ ಈ ಮೇಲಿನ ವಚನವೂ ತಿಳಿಸಿಕೊಡುತ್ತದೆ.

ಚಿತ್ತದ ಚಂಚಲತೆ ಕಡಿವಾಣ ಹೇಗೆ?

ರಾಜಸ ಮತ್ತು ತಾಮಸ ಎಂಬ ಮಾನಸಿಕ ದೋಷ ತಡೆ ಮತ್ತು ನಿವಾರಣೆಯ ಉಪಾಯನ್ನು ಆಯುರ್ವೇದ ತಿಳಿಸುತ್ತದೆ. ಇದು ಯೋಗದ ಮಾರ್ಗವೂ ಹೌದು. ಪ್ರಾಣಾಯಾಮದ ವಿಧಾನಗಳ ಮೂಲಕ ಅಭ್ಯಾಸ ಮತ್ತು ಅನುಸರಣೆಯ ಮೂಲಕ ಮನಸು ನಿಲ್ಲಿಸುವ ದಾರಿ ಕಾಣಬಹುದು. ಚಿತ್ತದ ಚಂಚಲತೆಗೆ ಕಡಿವಾಣ. ಕೇಂದ್ರೀಕೃತ ಮನಸ್ಸು ಹಳೆಯ ಮತ್ತು ವರ್ತಮಾನದ ನೆನಪು ಶಕ್ತಿಯನ್ನು ಕಾಪಾಡಲು ಸಹಕಾರಿ. ಮದ್ಯ, ಮಾಂಸಾಹಾರ, ರಾಸಾಯನಿಕ ಮಿಶ್ರಿತ ಆಹಾರ, ವಿಪರೀತ ಮದ್ದುಗಳ ಸೇವನೆಯಿಂದ ಮನಸ್ಸು ಕೆಡುತ್ತದೆ. ಹಾಗಾಗಿ ಅವುಗಳಿಂದ ದೂರವಿರೋಣ. ಒಳಿತು ಕೆಡುಕುಗಳನ್ನು ವಿಮರ್ಶಿಸಿ ನಿರ್ಣಯ ಕೈಗೊಳ್ಳೋಣ. ವಿಷಯ ಸುಖ ಅಂದರೆ ಕಂಡದ್ದೆಲ್ಲತಿನ್ನುವ, ಬಯಸುವ, ಚಂಚಲತೆ ಬೇಡ. ಸತ್ಯ ಪರತೆ ನಮಗಿರಲಿ. ಇತರರ ಹಂಗೂ ಬೇಡ. ಅವರ ಅಪರಾಧ ಕ್ಷಮಿಸುವಾ. ವೃದ್ಧರನ್ನು ಗುರು ಹಿರಿಯರನ್ನು ಗೌರವಿಸೋಣ, ಅವರ ಸೇವೆ ಮಾಡೋಣ. ಅಂತಹ ಸಾತ್ವಿಕ ಸ್ವಭಾವ ನಮ್ಮದಾಗಲಿ. ಜೀವೇಮ ಶರದಶ್ಶತಂ, ಪಶ್ಯೇಮ ಶರದಶ್ಶತಂ| ನೂರ್ಕಾಲ ರೋಗರಹಿತರಾಗಿ ಬಾಳಿ ಬದುಕೋಣ.

ಲೇಖಕರು: ಆಯುರ್ವೇದ ವೈದ್ಯರು