ವಿಕ ಸುದ್ದಿಲೋಕ ವಿಜಯಪುರ ‘‘ಪ್ರತಿಯೊಬ್ಬ ಹಿಂದೂ ಎಸ್ ಐಆರ್ ಪ್ರಕ್ರಿಯೆಯಲ್ಲಿಭಾಗವಹಿಸಿ ತಮ್ಮ ಮತ್ತು ಕುಟುಂಬದ ಸದಸ್ಯರ, ನೆರೆ-ಹೊರೆಯವರ, ಸಂಬಂಧಿಕರ ಹೆಸರು ಉಳಿಸಿಕೊಳ್ಳಬೇಕು’’ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಸಿದ್ಧೇಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿಹಿಂದೂ ಮುಖಂಡರು, ಕಾರ್ಯಕರ್ತರ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ‘‘ಹೇಗಾದರೂ ಮಾಡಿ ವಿಜಯಪುರ ನಗರ ಮತಕ್ಷೇತ್ರವನ್ನು ಹಿಂದೂಗಳಿಂದ ಕಸಿದುಕೊಳ್ಳಬೇಕೆಂಬ ಹುನ್ನಾರ ನಡೆಸಲಾಗುತ್ತಿದೆ. ತಮ್ಮ ಖೊಟ್ಟಿ ಮತಗಳು ಕೈಬಿಟ್ಟು ಹೋಗುತ್ತವೆ ಎಂಬ ಭಯದಿಂದ ಕೆಲ ಗೂಂಡಾಗಳು ಎಸ್ ಐಆರ್ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ’’ ಎಂದರು.
‘‘ಈ ಹಿಂದೆ ಪಶ್ಚಿಮ ಬಂಗಾಳದಲ್ಲಿಬಿಜೆಪಿ ಧ್ವಜ ಹಿಡಿದವರು ಕಂಡರೆ ಹೊಡೆಯುತ್ತಿದ್ದರು. ಚುನಾವಣೆಗಳ ಸಂದರ್ಭದಲ್ಲಿಹಿಂದೂಗಳ ಮನೆಗೆ ಬೀಗ ಹಾಕಿ ಮತದಾನಕ್ಕೆ ಬರದಂತೆ ತಡೆಯುತ್ತಿದ್ದರು. ಎಸ್ ಐಆರ್ ಪ್ರಕ್ರಿಯೆ ಬಳಿಕ ಬಾಂಗ್ಲಾನುಸುಳುಕೊರರ ಖೊಟ್ಟಿ ಮತಗಳು ಡಿಲಿಟ್ ಆಗಿದ್ದರಿಂದ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶವೇ ಬದಲಾಯಿತು. ಅಲ್ಲಿದ್ದ ಬಾಂಗ್ಲಾನುಸುಳುಕೋರರು, ರೊಹಿಂಗ್ಯಾಗಳು ಇದೀಗ ಕರ್ನಾಟಕ ಸೇರಿದ್ದಾರೆ. ಈ ಸರಕಾರ ಅಂಥವರಿಗೆ ಆತಿಥ್ಯ ನೀಡುತ್ತಿದೆ’’ ಎಂದು ದೂರಿದರು.
ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ರಾಹುಲ ಜಾಧವ, ರಾಜಶೇಖರ ಕುರಿಯವರ, ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕ ಗುರು ಗಚ್ಚಿನಮಠ, ಬಿಜೆಪಿ ನಗರ ಮಂಡಲ ನಿಕಟಪೂರ್ವ ಅಧ್ಯಕ್ಷ ಶಂಕರ ಹೂಗಾರ ಮಾತನಾಡಿದರು.