ವಿಕ ಸುದ್ದಿಲೋಕ ರಬಕವಿ-ಬನಹಟ್ಟಿ‘‘ ಸಹಕಾರ ಸಂಘಗಳು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿವೆ. ಅವುಗಳ ಯಶಸ್ವಿ ನಿರ್ವಹಣೆಗೆ ಸದಸ್ಯರ ಸಹಕಾರ, ಸಮರ್ಥ ಆಡಳಿತ ಹಾಗೂ ಜವಾಬ್ದಾರಿಯುತ ನಿರ್ದೇಶಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ,’’ ಎಂದು ಸಹಕಾರ ಮಹಾಮಂಡಳದ ಜಿಲ್ಲಾಅಧೀಕ್ಷಕ ಹಾಲಪ್ಪ ಕೋಡಿಹಳ್ಳಿ ಹೇಳಿದರು.
ಬನಹಟ್ಟಿಯ ಗಜಾನನ ಸೊಸೈಟಿಯಲ್ಲಿನಡೆದ ಸಹಕಾರ ಸಂಘಗಳ ಪ್ರತಿನಿಧಿಗಳ ಕಾರ್ಯಾಗಾರದಲ್ಲಿಮಾತನಾಡಿದ ಅವರು, ‘‘ಸದಸ್ಯರ ಹಿತಾಸಕ್ತಿ ಕಾಪಾಡುವುದು, ಪಾರದರ್ಶಕ ಆಡಳಿತ ನಡೆಸುವುದು, ಸಂಘದ ಆರ್ಥಿಕ ಶಿಸ್ತು ಕಾಪಾಡುವುದು ಹಾಗೂ ಸರಕಾರದ ವಿವಿಧ ಯೋಜನೆಗಳನ್ನು ಸದಸ್ಯರಿಗೆ ತಲುಪಿಸುವುದು ಸಹಕಾರ ಸಂಘಗಳ ಮುಖ್ಯ ಉದ್ದೇಶವಾಗಿದೆ,’’ ಎಂದು ತಿಳಿಸಿದರು.
‘‘ಇಂದಿನ ದಿನಗಳಲ್ಲಿನೇಕಾರರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ, ಉತ್ಪಾದನಾ ವೆಚ್ಚದ ಹೆಚ್ಚಳ, ಮಾರುಕಟ್ಟೆಯಲ್ಲಿಯಂತ್ರ ತಯಾರಿತ ಬಟ್ಟೆಗಳ ಸ್ಪರ್ಧೆ, ನುರಿತ ಕಾರ್ಮಿಕರ ಕೊರತೆ, ಯುವಜನತೆ ನೇಯ್ಗೆ ವೃತ್ತಿಯಿಂದ ದೂರವಾಗುತ್ತಿರುವುದು ಹಾಗೂ ಉತ್ಪನ್ನಗಳಿಗೆ ಸಮರ್ಪಕ ಬೆಲೆ ದೊರೆಯದಿರುವುದು ನೇಕಾರರ ಪ್ರಮುಖ ಸಮಸ್ಯೆಗಳಾಗಿವೆ. ಅವರ ಸಮಸ್ಯೆಗಳಿಗೂ ಪರಿಹಾರ ಸಿಕ್ಕರೆ ಸಹಕಾರ ಸಂಘಗಳು ಬಲವರ್ಧನೆಗೊಳ್ಳುತ್ತವೆ,’’ ಎಂದು ಹೇಳಿದರು. ಹರಿಪ್ರಕಾಶ ಕಾಬರಾ, ಶಂಕರ ಜಾಲಿಗಿಡದ, ವೀರಭದ್ರಯ್ಯ ಕತ್ತಿ, ಈರಪ್ಪ ಬರಗಲ್ , ಸಂಜೀವ ಬಾಡನವರ, ಹಲವಾರು ನೇಕಾರ ಸಂಘಗಳ ನಿರ್ದೇಶಕರು ಉಪಸ್ಥಿತರಿದ್ದರು.