ವಿಕ ಸುದ್ದಿಲೋಕ ಬೆಂಗಳೂರು ಹೈಕಮಾಂಡ್ ಹಸಿರು ನಿಶಾನೆ ತೋರದ ಕಾರಣ ಬಹು ನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆಯಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ14 ಮಂದಿ ಒಳಗೊಂಡ ಸಂಪುಟ ಅಸ್ತಿತ್ವಕ್ಕೆ ಬಂದು ಎರಡು ತಿಂಗಳು ಸಮೀಪಿಸಿದರೂ 20 ಖಾಲಿ ಸ್ಥಾನಗಳನ್ನು ಭರ್ತಿ ಮಾಡಿ ಪೂರ್ಣ ಪ್ರಮಾಣದ ಸಂಪುಟ ರಚಿಸುವ ಪ್ರಕ್ರಿಯೆ ಅನಿಶ್ಚಿತತೆಗೆ ಸಿಲುಕಿದೆ. ಸಂಪುಟ ವಿಸ್ತರಣೆ ಕುರಿತು ಚರ್ಚೆಗೆ ಬನ್ನಿ ಎಂಬ ಬುಲಾವ್ ಆಧರಿಸಿ ವಿಶೇಷ ವಿಮಾನದಲ್ಲಿದಿಲ್ಲಿಗೆ ತೆರಳಿದ್ದ ಸಿಎಂ ಡಿ.ಕೆ.ಶಿವಕುಮಾರ್ , ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಬುಧವಾರ ವಾಪಸಾದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡ ದಿಲ್ಲಿವಿದ್ಯಮಾನಗಳ ಒತ್ತಡದ ಹಿನ್ನೆಲೆಯಲ್ಲಿಹೈಕಮಾಂಡ್ ಜತೆ ಸಭೆ ನಡೆಸಲು ಸಾಧ್ಯವಾಗಲಿಲ್ಲ. ರಾಜ್ಯದೆಲ್ಲೆಡೆ ಬರಗಾಲ ಪರಿಸ್ಥಿತಿ ನಿರ್ಮಾಣ ಆಗಿರುವುದರಿಂದ ಜಿಲ್ಲಾಉಸ್ತುವಾರಿ ಸಚಿವರ ನೇಮಕ ಅಗತ್ಯದ ಜತೆಗೆ ಆಗಸ್ಟ್ 6 ರಿಂದ ವಿಧಾನಮಂಡಲ ಅಧಿವೇಶನ ಶುರುವಾಗುತ್ತಿರುವ ಹಿನ್ನೆಲೆಯಲ್ಲಿಆದಷ್ಟು ಶೀಘ್ರ ಪೂರ್ಣ ಪ್ರಮಾಣದ ಸಂಪುಟ ರಚನೆ ಅಗತ್ಯವನ್ನು ರಾಜ್ಯ ನಾಯಕರು ಬಯಸಿದ್ದರು. ಅಂತೆಯೇ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ ಪಡೆಯಲು ರಾಹುಲ್ ಗಾಂಧಿ ಅವರೊಂದಿಗೆ ಅಂತಿಮ ಸುತ್ತಿನ ಸಮಾಲೋಚನೆ ಉದ್ದೇಶವಿತ್ತು. ಈ ಬಗ್ಗೆ ಪ್ರಸ್ತಾಪಿಸಲು ಮುಂದಾಗಿದ್ದ ರಾಜ್ಯ ನಾಯಕರು, ‘‘ಇಂತಹ ಪರಿಸ್ಥಿತಿಯಲ್ಲಿಅಧಿಕಾರ, ಇದೆಲ್ಲಾಮುಖ್ಯವಾ?,’’ ಎಂಬ ರಾಹುಲ್ ಗಾಂಧಿ ಪ್ರಶ್ನೆಗೆ ತಬ್ಬಿಬ್ಬಾದರು ಎನ್ನಲಾಗಿದೆ. ಹೈಕಮಾಂಡ್ ಗ್ರೀನ್ ಸಿಗ್ನಲ್ ನಿರೀಕ್ಷೆಯಲ್ಲಿಸಂಪುಟ ವಿಸ್ತರಣೆಗೆ ತಯಾರಿ ಮಾಡಿಕೊಳ್ಳಲು ಸೂಚಿಸಿ ರಾಜ್ಯ ನಾಯಕರು ದಿಲ್ಲಿಗೆ ತೆರಳಿದ್ದರು. ಪ್ರತಿಜ್ಞಾವಿಧಿ ಬೋಧಿಸಲು ರಾಜ್ಯಪಾಲರ ಕಾಲಾವಕಾಶಕ್ಕೆ ಕೋರಿಕೆ ಸಲ್ಲಿಸಿ ಸಚಿವ ಸಂಪುಟ ವಿಸ್ತರಣೆಗೆ ತಯಾರಿ ಮಾಡಿಕೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೂ ಸೂಚಿಸಲಾಗಿತ್ತು. ಆದರೆ, ದಿಲ್ಲಿವಿದ್ಯಮಾನಗಳು ಈ ಆಶಯಕ್ಕೆ ಅಡ್ಡಿಯಾದವು. ಕೇಂದ್ರ ಸರಕಾರದ ವಿರುದ್ಧ ಸಂಸತ್ತಿನ ಒಳಗೆ ಮತ್ತು ಹೊರಗೆ ಹೋರಾಟ ತೀವ್ರಗೊಂಡಿದ್ದರಿಂದ ಕಾಯ್ದು ಪ್ರಯೋಜನವಿಲ್ಲಎಂದು ಸಚಿವರ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೈಗೊಪ್ಪಿಸಿ ಬೆಂಗಳೂರಿಗೆ ವಿಮಾನವೇರಿದರು. ದಿಲ್ಲಿಯಿಂದ ವಾಪಸಾದ ದಂಡು: ಮಂತ್ರಿಗಿರಿಯ ಕೊನೆಯ ಅವಕಾಶಕ್ಕಾಗಿ ಕಳೆದ 10-12 ದಿನಗಳಿಂದ ದಿಲ್ಲಿಧಿಧಿಯಲ್ಲಿವಾಸ್ತವ್ಯ ಹೂಡಿದ್ದ ಹಿರಿಯ ಶಾಸಕರೂ ಬೆಂಗಳೂರಿಗೆ ಹಿಂತಿರುಗಿದರು. ಸಂಪುಟದಲ್ಲಿಹೊಸಬರಿಗೆ ಆದ್ಯತೆ ವಿಚಾರ ಗೊತ್ತಿದ್ದೂ ಕೊನೆಯ ಅಧಿಕಾರದ ಅವಕಾಶ ಎಂದು ಆರ್ .ವಿ.ದೇಶಪಾಂಡೆ, ಎಚ್ .ಕೆ.ಪಾಟೀಲ್ , ಟಿ.ಬಿ.ಜಯಚಂದ್ರ, ಬಸವರಾಜ ರಾಯರಡ್ಡಿ ಸೇರಿ ಹಲವು ಹಿರಿಯ ಶಾಸಕರು ದಿಲ್ಲಿಯಲ್ಲಿಉಳಿದು ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ನಾಯಕರ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಿದ್ದರು. ಆದರೆ, ಸಂಪುಟ ವಿಸ್ತರಣೆ ಮುಂದೂಡಿಕೆಯಾಗುತ್ತಿದ್ದಂತೆ ದಿಲ್ಲಿಯಿಂದ ರಾಜ್ಯಕ್ಕೆ ಮರಳಿದರು. ಈ ಮಧ್ಯೆ ದಿಲ್ಲಿಯಲ್ಲಿಉಳಿದಿದ್ದ 35ಕ್ಕೂ ಹೆಚ್ಚು ಸಚಿವ ಸ್ಥಾನ ಆಕಾಂಕ್ಷಿ ಶಾಸಕರೂ ನಿರಾಶರಾಗಿ ಬೆಂಗಳೂರಿಗೆ ಬರಿಗೈಲಿ ವಾಪಸಾದರು. ದಿಲ್ಲಿಯಿಂದ ಬುಧವಾರ ಬೆಂಗಳೂರಿಗೆ ಬಂದ ವಿಮಾನದಲ್ಲಿ35ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಶಾಸಕರೇ ಇದ್ದರು ಎಂಬುದು ಗಮನಾರ್ಹ. ಮತ್ತೆರಡು ಡಿಸಿಎಂ ಹುದ್ದೆ : ರಾಜ್ಯ ಸಚಿವ ಸಂಪುಟ ವಿಸ್ತರಣೆ ಜತೆಗೆ ಮತ್ತೆ ಎರಡು ಡಿಸಿಎಂ ಹುದ್ದೆ ಸೃಷ್ಟಿಸುವ ನಿರೀಕ್ಷೆಯಿದೆ. ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಹೈಕಮಾಂಡ್ ನಾಯಕರ ಮುಂದೆ ಈ ಪ್ರಸ್ತಾವನೆ ಮಾಡಿದ್ದು, ಚರ್ಚಿಸಿ ತೀರ್ಮಾನಿಸುವ ಸ್ಪಂದನೆ ದೊರಕಿದೆ. ಸದ್ಯ ಡಾ.ಜಿ.ಪರಮೇಶ್ವರ್ ಡಿಸಿಎಂ ಆಗಿದ್ದು, ದಲಿತ ಸಮುದಾಯಕ್ಕೆ ಅವಕಾಶ ಸಿಕ್ಕಂತಾಗಿದೆ. ಲಿಂಗಾಯತ ಹಾಗೂ ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ತಲಾ ಒಂದೊಂದು ಡಿಸಿಎಂ ಹುದ್ದೆ ಸೃಷ್ಟಿಸುವ ಲೆಕ್ಕಾಚಾರ ನಡೆದಿದೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಈ ತೀರ್ಮಾನ ಅಗತ್ಯವಿದ್ದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ದೃಷ್ಟಿಯಿಂದಲೂ ಈ ಎರಡು ಡಿಸಿಎಂ ಹುದ್ದೆ ಅಗತ್ಯವಿದೆ ಎಂದು ಸಿಎಂ ಬಯಸಿದ್ದಾರೆ ಎನ್ನಲಾಗಿದೆ. ಹಾಲಿ ಸಚಿವರಾಗಿರುವ ಎಂ.ಬಿ.ಪಾಟೀಲ್ ಮತ್ತು ಸತೀಶ್ ಜಾರಕಿಹೊಳಿ ಅವರಿಗೆ ಕ್ರಮವಾಗಿ ಲಿಂಗಾಯತ ಮತ್ತು ಎಸ್ಟಿ ಕೋಟಾದಲ್ಲಿಡಿಸಿಎಂ ಹುದ್ದೆಗೆ ಬಡ್ತಿ ನೀಡುವ ಕುರಿತು ಚರ್ಚೆ ನಡೆದಿದೆ. ಸಂಪುಟ ವಿಸ್ತರಣೆಗೆ ಪಟ್ಟಿ ಅಂತಿಮಗೊಳ್ಳುವ ಸಂದರ್ಭದಲ್ಲಿಈ ವಿಚಾರದಲ್ಲೂಅಂತಿಮ ತೀರ್ಮಾನ ಆಗಲಿದೆ ಎಂದು ತಿಳಿದು ಬಂದಿದೆ. ಈ ಕುರಿತು ದಿಲ್ಲಿಯಲ್ಲಿಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ‘‘ಲಿಂಗಾಯತ ಮತ್ತು ಎಸ್ಟಿಗೆ ಒಂದೊಂದು ಡಿಸಿಎಂ ಹುದ್ದೆ ಸೃಷ್ಟಿಸುವ ವಿಚಾರ ಪಕ್ಷದಲ್ಲಿಚರ್ಚೆ ಆಗಿರುವುದು ಗಮನಕ್ಕೆ ಬಂದಿದೆ. ಆದರೆ, ನಾನು ಡಿಸಿಎಂ ಮಾಡುವಂತೆ ಕೇಳಿಲ್ಲ. ಇದು ಪಕ್ಷದ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ,’’ ಎಂದು ಹೇಳಿದರು.