ಇಂದು ಕನ್ನಡದ ಖ್ಯಾತ ನಟ ನರಸಿಂಹರಾಜು ಅವರ ಜನ್ಮದಿನ. 60ರ ದಶಕದಲ್ಲಿಕನ್ನಡದ ಜನಪ್ರಿಯ ಮತ್ತು ಬಹುಬೇಡಿಕೆಯ ನಟರಾಗಿದ್ದ ನರಸಿಂಹರಾಜು, ಹಿಂದಿ ಚಿತ್ರವೊಂದರಲ್ಲಿನಟಿಸಿದ್ದ ವಿಷಯ ಗೊತ್ತಾ? ಕನ್ನಡದಲ್ಲಿ‘ಹಾಸ್ಯ ಚಕ್ರವರ್ತಿ’ ಎಂದೇ ಬಿರುದು ಪಡೆದಿದ್ದ ನರಸಿಂಹರಾಜು ಅವರು ತಮ್ಮ ಜೀವಿತಾವಧಿಯಲ್ಲಿಒಟ್ಟಾರೆ 215 ಚಿತ್ರಗಳಲ್ಲಿ ನಟಿಸಿದ್ದರು ಎಂದು ಹೇಳಲಾಗುತ್ತದೆ. ಈ ಪೈಕಿ ಅವರು ಹಿಂದಿ ಚಿತ್ರದಲ್ಲೂನಟಿಸಿದ್ದರು ಎಂಬುದು ವಿಶೇಷ. 1956ರಲ್ಲಿಹಿಂದಿಯಲ್ಲಿಬಿಡುಗಡೆಯಾದ ರಾಜ್ ಕಪೂರ್ ಮತ್ತು ನರ್ಗಿಸ್ ಅಭಿನಯದ ‘ಚೋರಿ ಚೋರಿ’ ಚಿತ್ರದಲ್ಲಿಅವರು ಅತಿಥಿ ಪಾತ್ರದಲ್ಲಿಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿಜಾನಿ ವಾಕರ್ , ಭಗವಾನ್ ದಾದಾ, ಮುಖ್ರಿ ಮುಂತಾದ ಜನಪ್ರಿಯ ನಟರು ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿನರಸಿಂಹರಾಜು ಅವರು ಹೋಟೆಲ್ ಮಾಣಿಯಾಗಿ ನಟಿಸಿದ್ದರು. ಇದೊಂದೇ ಅವರು ನಟಿಸಿದ್ದ ಪರಭಾಷೆ ಚಿತ್ರವಾಗಿತ್ತು. ಮಿಕ್ಕಂತೆ ಕನ್ನಡದಲ್ಲಿಅತೀ ಬೇಗ 100 ಚಿತ್ರಗಳನ್ನು ಪೂರೈಸಿದ ಮೊದಲ ನಟ ಎಂಬ ಹೆಗ್ಗಳಿಕೆ ನರಸಿಂಹರಾಜು ಅವರಿಗಿದೆ. 1954ರಲ್ಲಿ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿಡಾ. ರಾಜಕುಮಾರ್ ಅವರ ಜೊತೆಜೊತೆಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನರಸಿಂಹರಾಜು ಅವರು, 1967ರ ಹೊತ್ತಿಗೆ 100 ಚಿತ್ರಗಳನ್ನು ಪೂರೈಸಿದ್ದರು. ನರಸಿಂಹರಾಜು ಆಗಿನ ಕಾಲಕ್ಕೆ ಅದೆಷ್ಟು ಬ್ಯುಸಿ ನಟರಾಗಿದ್ದರೆಂದರೆ 1962ರಲ್ಲಿಅವರ ಅಭಿನಯದ 22 ಚಿತ್ರಗಳು ಬಿಡುಗಡೆಯಾಗಿದ್ದವು. ಕೇವಲ 13 ವರ್ಷಗಳಲ್ಲಿಅವರು 100 ಚಿತ್ರಗಳನ್ನು ಪೂರೈಸಿದರು. 1967ರಲ್ಲಿಬಿಡುಗಡೆಯಾದ ಎಂ.ಆರ್ . ವಿಠ್ಠಲ್ ನಿರ್ದೇಶನದ ‘ನಕ್ಕರೆ ಅದೇ ಸ್ವರ್ಗ’ ನರಸಿಂಹರಾಜು ಅವರ 100ನೇ ಚಿತ್ರವಾಗಿತ್ತು.