ಭಕ್ತಾದಿಗಳ ದಶಕದ ಬೇಡಿಕೆಯಾಗಿದ್ದ ಇತಿಹಾಸ ಪ್ರಸಿದ್ಧ ಅಂಬಾಮಠದ ಅಂಬಾದೇವಿ ದೇವಸ್ಥಾನದ ಶಿಲಾಮಂಟಪ ಕಾಮಗಾರಿಗೆ ವೇಗ ಸಿಕ್ಕಿದ್ದು, ಕಾಮಗಾರಿ ನೋಡುಗರ ಕಣ್ಸೆಳೆಯುತ್ತಿದೆ.
ಜಿಲ್ಲೆಯ ಎರಡು ‘ಎ’ ಗ್ರೇಡ್ ದೇವಸ್ಥಾನಗಳಲ್ಲಿಒಂದಾಗಿರುವ ಸೋಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಾಮಠದ ಅಂಬಾದೇವಿ ದೇವಸ್ಥಾನ, 350ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿದೆ. ಬಗಳಾಚಕ್ರ ಹೊಂದಿರುವ ದೇಶದ ಪ್ರಮುಖ ದೇವಸ್ಥಾನವೂ ಇದಾಗಿದೆ. ಶಿಥಿಲಾವಸ್ಥೆ ತಲುಪಿದ ಹಿನ್ನೆಲೆಯಲ್ಲಿವರ್ಷದ ಹಿಂದೆ ಆರಂಭಗೊಂಡ ಶಿಲಾಮಂಟಪ ಕಾಮಗಾರಿಯನ್ನು ಖಾಸಗಿ ಏಜೆನ್ಸಿಗೆ ವಹಿಸಲಾಗಿದೆ. ಏಜೆನ್ಸಿಯಡಿ ತಮಿಳುನಾಡು ಮೂಲದ ಶಿಲ್ಪಿಗಳು ದೇವಸ್ಥಾನದ ಶಿಲಾಮಂಟಕ್ಕೆ ಹೊಸ ಮೆರುಗು ನೀಡುತ್ತಿದ್ದಾರೆ. ದಿನ ಕಳೆದಂತೆ ಅಂಬಾದೇವಿ ದೇವಸ್ಥಾನ ನೋಡುಗರಲ್ಲಿಪುಳಕ ಉಂಟು ಮಾಡುತ್ತಿದೆ.
ಏನೇನು ಕಾಮಗಾರಿ?:
ಈ ಹಿಂದೆ ಶಾಸಕರಾಗಿದ್ದ ವೆಂಕಟರಾವ್ ನಾಡಗೌಡ ಅವಧಿಯಲ್ಲಿಶಿಲಾ ಮಂಟಪ ಕಾಮಗಾರಿ ಗೆ ಚಾಲನೆ ನೀಡಿದ್ದರೂ, ಹಲವು ಗೊಂದಲದ ಕಾರಣಕ್ಕಾಗಿ ಕಾಮಗಾರಿ ಶುರುವಾಗಿರಲಿಲ್ಲ. 2023ರಲ್ಲಿಹಂಪನಗೌಡ ಬಾದರ್ಲಿ ಶಾಸಕರಾದ ಬಳಿಕ ಮುತುವರ್ಜಿವಹಿಸಿ, ಎಲ್ಲತೊಡಕು ನಿವಾರಿಸಿ, ಕಾಮಗಾರಿ ಆರಂಭಕ್ಕೆ ಮುಂದಾದರು. ಆರು ತಿಂಗಳ ಅವಧಿಯಲ್ಲಿಮುಜರಾಯಿ ಹಾಗೂ ಕೆಕೆಆರ್ ಡಿಬಿಯ 5.50 ಕೋಟಿ ರೂ. ಅನುದಾನದಲ್ಲಿಗೋಪುರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಗರ್ಭಗುಡಿ, ಸುಖಾಸೀನ, ಮಂಟಪ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ನೆಲಹಾಸು, ಮೆಟ್ಟಿಲು, ಸಣ್ಣಪುಟ್ಟ ಕೆಲಸ ಇವೆ. ಇದಲ್ಲದೆ ಶಿಲಾಮಂಟಪ ಕೆಲಸಕ್ಕಾಗಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ 80 ಲಕ್ಷ ರೂ. ಅನುದಾನ ನೀಡಿದ್ದಾರೆ. ಅಂದುಕೊಂಡಂತೆ ಕಾಮಗಾರಿ ನಡೆದರೆ, ಎರಡು ತಿಂಗಳಲ್ಲಿಬಹುತೇಕ ಪೂರ್ಣಗೊಳ್ಳಬಹುದೆಂಬ ವಿಶ್ವಾಸದಲ್ಲಿಎಂಜಿನಿಯರ್ ಗಳು ಇದ್ದಾರೆ.
ಮತ್ತೆ ಡಿಪಿಆರ್ :
ಶಿಲಾಮಂಟಪದ ಬಹುತೇಕ ಕಾಮಗಾರಿಗೆ ಅನುದಾನ ಇದ್ದರೂ, ಮುಂದುವರಿದ ಕಾಮಗಾರಿಗೆ ಡಿಪಿಆರ್ ನಡೆದಿದೆ. ಶಿಲಾಮಂಟಪದ ಸುತ್ತಲೂ 29.5 ಅಡಿ ಅಂತರದಲ್ಲಿ15 ಅಡಿ ಅಗಲದ ಸುತ್ತಲೂ ಪೌಳಿ ಕಾಮಗಾರಿ, ನೈರುತ್ಯ ದಿಕ್ಕಿಗೆ ರಾಜಗೋಪುರ, ಮಹಾಗೋಪುರ ಇರಲಿವೆ. ಈ ಸಂಬಂಧ ಡಿಪಿಆರ್ ಕೆಲಸ ನಡೆದಿದ್ದು, ಡಿಪಿಆರ್ ಗೆ ಅನುಮೋದನೆ ಸಿಕ್ಕು, ಸರಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿಅನುದಾನ ದೊರೆತರೆ, ಬಾಕಿ ಕೆಲಸವೂ ವರ್ಷಗಳ ಅವಧಿಯಲ್ಲಿವೇಗವಾಗಿ ಪೂರ್ಣಗೊಳ್ಳಲಿದೆ. ಈ ನಿಟ್ಟಿನಲ್ಲಿಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಬೇಕು ಎಂಬುದು ಭಕ್ತರ ಮನವಿಯಾಗಿದೆ.
---
ಬಾಕ್ಸ್
ಅಭಿವೃದ್ಧಿಗೆ ಬೇಕಿದೆ ಹೈಟೆಕ್ ಸ್ಪರ್ಶ
ಅಂಬಾಮಠದ ಶಿಲಾಮಂಟಪ ಕಾಮಗಾರಿ, ಮುಖ್ಯ ರಸ್ತೆ ಕಾಮಗಾರಿಗೆ ವೇಗ ಸಿಕ್ಕಿರುವಂತೆಯೇ ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ಮೂಲಸೌಕರ್ಯ ಒದಗಿಸುವ ಕೆಲಸಕ್ಕೆ ವೇಗ ಸಿಗಬೇಕಿದೆ. ಶತಮಾನಗಳ ಇತಿಹಾಸ ಹೊಂದಿರುವ ದೇವಸ್ಥಾನಕ್ಕೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ರಾಜ್ಯದ ಮೂಲೆಗಳಿಂದ ಭಕ್ತರು ಬರುತ್ತಾರೆ. ಆದರೆ, ಬಂದವರಿಗೆ ಸೂಕ್ತ ಸೌಕರ್ಯ ಸಿಗುತ್ತಿಲ್ಲಎಂಬ ಕೊರಗು ಮೊದಲಿನಿಂದಲೂ ಇದೆ. ಈ ನಿಟ್ಟಿನಲ್ಲಿಅಂಬಾಮಠಕ್ಕೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ಪ್ರತ್ಯೇಕ ಪೊಲೀಸ್ ಠಾಣೆ, ವಸತಿ ಗೃಹಗಳು, ನೀರು, ಶೌಚಾಲಯ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲು ಸಿದ್ಧತೆ ನಡೆಯಬೇಕು ಎಂಬುದು ಭಕ್ತರ ಆಗ್ರಹವಾಗಿದೆ.
---
ಇತಿಹಾಸ ಪ್ರಸಿದ್ಧ ಅಂಬಾಮಠದ ಅಂಬಾದೇವಿ ದೇವಸ್ಥಾನದ ಶಿಲಾಮಂಟಪ ಕಾಮಗಾರಿ ವೇಗವಾಗಿ ನಡೆದಿದೆ. ಗೋಪುರ ಕಾಮಗಾರಿ ಪೂರ್ಣಗೊಂಡಿದ್ದು, ಮಂಟಪ ಸೇರಿ ಇನ್ನುಳಿದ ಕಾಮಗಾರಿಗಳನ್ನು ನುರಿತ ಶಿಲ್ಪಿಗಳು ಮಾಡುತ್ತಿದ್ದಾರೆ. ಮೊದಲ ಹಂತದ ಕಾಮಗಾರಿ ಎರಡು ತಿಂಗಳಲ್ಲಿಬಹುತೇಕ ಪೂರ್ಣಗೊಳ್ಳಬಹುದು.
- ಹಂಪನಗೌಡ ಬಾದರ್ಲಿ ಶಾಸಕರು, ಸಿಂಧನೂರು
---
ಆರ್ ಸಿಎಚ್ 25ಎಸ್ ಎನ್ ಡಿ1:
ಸಿಂಧನೂರು ತಾಲೂಕಿನ ಅಂಬಾಮಠದ ಅಂಬಾದೇವಿ ದೇವಸ್ಥಾನದ ಶಿಲಾಮಂಟಪದ ಗೋಪುರ ಕಾಮಗಾರಿ ಪೂರ್ಣಗೊಂಡಿರುವುದು.