ವಿಕ ಸುದ್ದಿಲೋಕ ಕಲಬುರಗಿಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಜಂತರ್ ಮಂತರ್ ನಿಂದ ಸಂಸತ್ ಭವನದವರೆಗೆ ಶಾಂತಿಯುತವಾಗಿ ಸಂಸತ್ ಚಲೋ ನಡೆಸಲು ಬಂದಿದ್ದ ದೇಶದ ಯುವಜನರ ಮೇಲೆ ನಡೆದ ದಮನವನ್ನು ಕಂಡಾಗ, ಬಿಜಿಪಿಯ ಮೋದಿ ಮತ್ತು ಅಮಿತ್ ಶಾ ವಿದ್ಯಾರ್ಥಿಗಳ ಮೇಲೆ ಅಟ್ಟಹಾಸ ಮೆರೆದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿರುವುದು ಖಂಡನೀಯ ಎಂದು ಅಖಿಲ ಕರ್ನಾಟಕ ದಲಿತ ಸೇನೆಯ ರಾಜ್ಯಾದ್ಯಕ್ಷ ದತ್ತಾತ್ರೇಯ ಕುಡಕಿ, ಜಿಲ್ಲಾಧ್ಯಕ್ಷ ಸಂಜೀವಕುಮಾರ ಕಾಂಬಳೆ ಖಂಡಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿ, ದೇಶದ ಭವಿಷ್ಯ ರೂಪಿಸಬೇಕಾದ ಯುವಜನರು ತಮ್ಮ ಕನಸುಗಳಿಗಾಗಿ, ಶಿಕ್ಷಣಕ್ಕಾಗಿ ಮತ್ತು ಸಂವಿಧಾನಬದ್ಧ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದರು. ಆದರೆ, ಅವರ ಪ್ರಶ್ನೆಗಳಿಗೆ ಉತ್ತರವಾಗಿ ದೊರೆತದ್ದು ಲಾಠಿ ಏಟು. ನಾಟಕೀಯ ಬೆಳವಣಿಗೆಯಂತೆ ಧರ್ಮೇಂದ್ರ ಪ್ರಧಾನ್ ಅವರು ಕಣ್ಣೊರೆಸುವ ತಂತ್ರದ ಭಾಗವಾಗಿ ರಾಜೀನಾಮೆ ನೀಡಿರುವುದು ಈ ದೇಶದ ಜನ ಮತ್ತು ವಿದ್ಯಾರ್ಥಿಗಳ ಸಮೂಹ ಒಪ್ಪುವುದಿಲ್ಲ. ಇಟಲಿ ದೇಶದ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ಸಹ ಈಗಾಗಲೇ ಮೋದಿಯವರಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದಕ್ಕೆ ಸಮಿತಿ ಸ್ವಾಗತಿಸುತ್ತದೆ. ಆದರೆ, ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡಿ ಇಲ್ಲಿವರೆಗೆ ಸುಮಾರು 18 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಜೀವ ಬಲಿಪಡೆದ ನೈತಿಕ ಹೊಣೆ ಹೊತ್ತು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿವಿಫಲರಾದ ಕೇಂದ್ರ ಗೃಹಸಚಿವ ಅಮೀತ್ ಶಾ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.