ವಿದ್ಯುತ್ ಸಮಸ್ಯೆಗೆ ಶೀಘ್ರ ಪರಿಹಾರ

Contributed byprakashvkhsn@gmail.com|Vijaya Karnataka
immediate solution to electricity issues in karnataka p ravikumar
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ. ರವಿಕುಮಾರ್ ಹೇಳಿಕೆ

ವಿಕ ಸುದ್ದಿಲೋಕ ಹಾಸನ
ಕಾಫಿ ಬೆಳೆಗಾರರು, ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆಯೋಗದ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ. ರವಿಕುಮಾರ್ ತಿಳಿಸಿದರು.

ನಗರದ ಕವಿಪ್ರನಿನಿ ಪ್ರಸರಣ ಭವನದಲ್ಲಿಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ವತಿಯಿಂದ ಕೈಗಾರಿಕೆಗಳು, ಕಾಫಿ ಬೆಳೆಗಾರರು ಹಾಗೂ ನಾನಾ ಸಂಘಟನೆಗಳೊಂದಿಗೆ ಸಭೆಯಲ್ಲಿಮಾತನಾಡಿದರು.

‘‘ಪ್ರಾರಂಭದಲ್ಲಿಕಾಫಿ ಬೆಳೆಗಾರರ ಒಕ್ಕೂಟದ ಪ್ರತಿನಿಧಿಗಳು, ಕೈಗಾರಿಕೆಗಳ ಮುಖ್ಯಸ್ಥರು ಹಾಗೂ ರೈತ ಸಂಘಟನೆ ಪ್ರಮುಖರು, ಡಿಬಿಟಿ ಯೋಜನೆ ಅನುಷ್ಠಾನ, ಸೇವಾ ಸಿಂಧು ತಾಂತ್ರಿಕ ದೋಷ, ಮಿಶ್ರ ಬೆಳೆಗಾರರ ನೋಂದಣಿ ಸಮಸ್ಯೆ, ಬಳಕೆಗೆ ಅನುಗುಣವಾಗಿ ವಿದ್ಯುತ್ ಶುಲ್ಕ ವಿಧಿಸುವುದು, 10 ಎಚ್ ಪಿ ಒಳಗಿನ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ , ಬಡ್ಡಿ ಹಾಗೂ ಬಾಕಿ ಮನ್ನಾ, ಮೀಟರ್ ಅಳವಡಿಕೆ ವಿಳಂಬ, ಮಲೆನಾಡು ಭಾಗದಲ್ಲಿವಿದ್ಯುತ್ ವ್ಯತ್ಯಯ, ಕಾಡು ಪ್ರಾಣಿಗಳ ಹಾವಳಿ ಸೇರಿದಂತೆ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿ, ಈ ಎಲ್ಲಾಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು,’’ಎಂದು ಒತ್ತಾಯಿಸಿದರು.

‘‘ಕೈಗಾರಿಕೆಗಳಿಗೆ ವಿದ್ಯುತ್ ಕಡಿತವಾದರೆ ಅವರಿಗೆ ಮಾತ್ರವಲ್ಲ, ಇಲಾಖೆಯ ಆದಾಯಕ್ಕೂ ಹೊಡೆತ ಬೀಳುತ್ತದೆ. ಆದ್ದರಿಂದ ಅವರ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸುವ ನಿಟ್ಟಿನಲ್ಲಿಕ್ರಮವಹಿಸಬೇಕು,’’ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘‘ಕೈಗಾರಿಕೆಗಳ ಸಮಸ್ಯೆ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ, ರಾಜ್ಯದ ಹಲವು ಜಿಲ್ಲೆಗಳಲ್ಲಿದೆ, ಇನ್ನೂ ಮಳೆಗಾಲದ ಸಂದರ್ಭದಲ್ಲಿವಿದ್ಯುತ್ ಕಂಬಗಳು ಮುರಿಯುವುದು ಸಾಮಾನ್ಯ ಸಂಗತಿ ಆಗಿದೆ, ಆದರೆ ಕೆಲವು ಕಡೆಗಳಲ್ಲಿವಾಹನಗಳ ಡಿಕ್ಕಿಯಿಂದ ವಿದ್ಯುತ್ ಕಂಬಗಳು ಹಾನಿಯಾದಲ್ಲಿ, ಅವುಗಳನ್ನು ಶೀಘ್ರವಾಗಿ ಸರಿಪಡಿಸಲು ನಿರ್ವಹಣಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಮಾಡಿ ದುರಸ್ತಿ ಮಾಡಬೇಕೆಂದು ಸೂಚಿಸಿದ ಅವರು, ಸಭೆಯಲ್ಲಿತಿಳಿಸಲಾಗಿರುವ ಎಲ್ಲಾಸಮಸ್ಯೆಗಳನ್ನು ಪರಿಶೀಲಿಸಲಿದ್ದು, ಆಯೋಗದ ವ್ಯಾಪ್ತಿಯಲ್ಲಿಬಗೆಹರಿಸಲು ಸಾಧ್ಯವಾಗುವ ಸಮಸ್ಯೆಗಳಿಗೆ ತಕ್ಷಣ ಕ್ರಮವಹಿಸಲಾಗುವುದು ಹಾಗೂ ಉಳಿದ ವಿಷಯಗಳನ್ನು ಸರಕಾರದ ಗಮನಕ್ಕೆ ತರಲಾಗುವುದು,’’ಎಂದು ತಿಳಿಸಿದರು.

ಕೆಇಆರ್ ಸಿ ಸದಸ್ಯ ಎಚ್ .ಕೆ. ಜಗದೀಶ್ ಮಾತನಾಡಿ,‘‘ಆಯೋಗದ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಜತೆಗೆ ಸರಕಾರ ಹಾಗೂ ಸೆಸ್ಕ್ ಮಟ್ಟದಲ್ಲಿಬಗೆಹರಿಸಬೇಕಾದ ವಿಷಯಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದು. ಸಭೆಯಲ್ಲಿಬಂದ ಉತ್ತಮ ಸಲಹೆಗಳನ್ನು ಆಯೋಗದ ಅಧ್ಯಕ್ಷರು ಸೂಕ್ಷ್ಮವಾಗಿ ಪರಿಶೀಲಿಸಲಿದ್ದು, ಕಾನೂನಿನ ಚೌಕಟ್ಟಿನೊಳಗೆ ಎಲ್ಲಸಮಸ್ಯೆಗಳನ್ನು ಬಗೆಹರಿಸಿ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುವುದು,’’ಎಂದು ಹೇಳಿದರು.

ಆಯೋಗದ ಸದಸ್ಯ ಜಾವೇದ್ ಅಕ್ತರ್ , ತಾಂತ್ರಿಕ ನಿರ್ದೇಶಕ ಶ್ರೀನಿವಾಸಪ್ಪ, ಸೆಸ್ಕ್ ತಾಂತ್ರಿಕ ನಿರ್ದೇಶಕ ಎಲ್ . ಲೋಕೇಶ್ , ಸೆಸ್ಕ್ ಅಧೀಕ್ಷಕ ಎಂಜಿನಿಯರ್ ಎ.ಎ. ಸುನೀಲ್ ಕುಮಾರ್ ಸೇರಿದಂತೆ ಸೆಸ್ಕ್ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಹಾಜರಿದ್ದರು.

ಫೋಟೊ

ಹಾಸನದ ಕವಿಪ್ರನಿನಿ ಪ್ರಸರಣ ಭವನದಲ್ಲಿಕಾಫಿ ಬೆಳೆಗಾರರು ಹಾಗೂ ನಾನಾ ಸಂಘಟನೆಗಳೊಂದಿಗೆ ಆಯೋಜಿಸಿದ್ದ ಸಭೆಯದಲ್ಲಿವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ.ರವಿಕುಮಾರ್ ಮಾತನಾಡಿದರು.