ಇಂಡಿ ನಗರದ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಶೋಚನಿಯ ಸ್ಥಿತಿ
ಶಿಕ್ಷಣಕ್ಕೆ ಶಾಲೆಗೆ, ಶೌಚಕ್ಕೆ ಮನೆಗೆ !ವಿಕ ವಿಶೇಷ ಇಂಡಿ
1 ರಿಂದ 8ನೇ ತರಗತಿಯವರೆಗೆ ಅಂದಾಜು 200 ವಿದ್ಯಾರ್ಥಿಗಳು ಇಲ್ಲಿಓದುತ್ತಿದ್ದಾರೆ. ಆದರೆ ಈ ಶಾಲೆಯಲ್ಲಿಸುಸಜ್ಜಿತ ಶೌಚಾಲಯವೇ ಇಲ್ಲ. ಹೀಗಾಗಿ ನಿಸರ್ಗ ಕರೆ ಬಂದರೆ ಸಮೀಪದ ಸ್ನೇಹಿತರ ಅಥವಾ ತಮ್ಮ ಮನೆಗೆ ಮಕ್ಕಳು ಓಡಿ ಹೋಗಬೇಕು...
ಹೌದು, ನಗರದ ಮಧ್ಯ ಭಾಗದ ಡಾ.ಬಿ.ಆರ್ .ಅಂಬೇಡ್ಕರ್ ವೃತ್ತ ಮತ್ತು ನಗರಸಭೆಗೆ ಹೊಂದಿಕೊಂಡಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿಕಲಿಯುತ್ತಿರುವ ಮಕ್ಕಳ ಸ್ಥಿತಿ ಇದು.
1970ರಲ್ಲಿಪುರಸಭೆಯವರು ಮಕ್ಕಳ ಶಿಕ್ಷಣಕ್ಕಾಗಿ ಈ ಶಾಲೆ ನಿರ್ಮಿಸಿಕೊಟ್ಟಿದ್ದಾರೆ. 5 ದಶಕಗಳ ಇತಿಹಾಸ ಹೊಂದಿರುವ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. 20 ಕೋಣೆಗಳಿದ್ದು, ಅವುಗಳಲ್ಲಿ12 ಸಂಪೂರ್ಣವಾಗಿ ಕುಸಿದುಬಿದ್ದಿವೆ. ಶಾಲಾ ಆವರಣದಲ್ಲಿರುವ ಶೌಚಾಲಯಗಳು ಕೂಡ ಶಿಥಿಲಾವಸ್ಥೆಗೆ ತಲುಪಿ ಬಳಕೆಗೆ ಯೋಗ್ಯವಾಗಿಲ್ಲ. ಈ ಕುರಿತು ಶಾಲಾ ಶಿಕ್ಷಣ ಇಲಾಖೆಗೆ ಸಾರ್ವಜನಿಕರು, ಪಾಲಕರು, ಮಕ್ಕಳು ಮತ್ತು ಶಿಕ್ಷಕರು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಸೌಲಭ್ಯ ಕಲ್ಪಿಸಲು ಮುಂದಾಗುತ್ತಿಲ್ಲಎಂಬ ಆರೋಪಗಳಿವೆ.
ಕಟ್ಟಡ ಯಾರಿಗೆ ಸೇರಿರಲಿ ಸಮಸ್ಯೆಗೆ ಪರಿಹಾರ ಕಂಡು ಹಿಡಿದು ಅಭಿವೃದ್ಧಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮೂಲ ಸೌಕರ್ಯ ಒದಗಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳ ಪಾಲಕರು ಆಗ್ರಹಿಸುತ್ತಿದ್ದಾರೆ.
---------
ಹೊಣೆ ಯಾರದ್ದು ?
ಪುರಸಭೆಯು ಶಿಕ್ಷಣ ಇಲಾಖೆಗೆ ನಿರ್ಮಿಸಿಕೊಟ್ಟ ಈ ಶಾಲೆಯ ಅಭಿವೃದ್ಧಿಗೆ ಈ ಕಡೆ ಶಿಕ್ಷಣ ಇಲಾಖೆಯೂ ಮುಂದಾಗುತ್ತಿಲ್ಲ. ಅತ್ತ ಪುರಸಭೆಯಿಂದ ಮೇಲ್ದರ್ಜೆಗೇರಿದ ನಗರಸಭೆಯೂ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿಲ್ಲ. ಈ ಶಾಲೆ ಪುರಸಭೆಗೆ ಸೇರಿದ್ದರಿಂದ ಅಭಿವೃದ್ಧಿ ಕೈಗೊಳ್ಳಲು ಶಿಕ್ಷಣ ಇಲಾಖೆಗೆ ಬರುವುದಿಲ್ಲಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದರೆ ಇತ್ತ ಈ ಶಾಲೆಯನ್ನು ಶಿಕ್ಷಣ ಇಲಾಖೆಗೆ ನೀಡಲಾಗಿದ್ದು, ಅದರ ಅಭಿವೃದ್ಧಿ ಜವಾಬ್ದಾರಿ ಅವರದ್ದೇ ಆಗಿದೆ ಎಂದು ನಗರಸಭೆ ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ಹೀಗಾಗಿ ಶಾಲೆಯ ಅಭಿವೃದ್ಧಿ ಜವಾಬ್ದಾರಿ ಯಾರದ್ದು ಎಂಬ ಪ್ರಶ್ನೆ ಮೂಡಿದೆ.
-----
ಅನುದಾನ ಕೊರತೆಯಿಂದ ಶಾಲೆಯ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಸಮಸ್ಯೆ ಕುರಿತು ಶಿಕ್ಷಣ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ.