ರಸ್ತೆ ಅಭಿವದ್ಧಿಗೆ ಆಗ್ರಹಿಸಿ ಇಟಗಿ ಬಂದ್

Contributed byrudreshs2009@gmail.com|Vijaya Karnataka
protest in itagi village demanding road development
ಸುತ್ತಮುತ್ತಲಿನ ನಾನಾ ಗ್ರಾಮಸ್ಥರ ಬೆಂಬಲ | ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಧಿಕ್ಕಾರ

ವಿಕ ಸುದ್ದಿಲೋಕ ಇಟಗಿ
ರಸ್ತೆಗಳ ಸುಧಾರಣೆಗೆ ಆಗ್ರಹಿಸಿ ಗ್ರಾಮಸ್ಥರು ಗ್ರಾಮದ ಅಂಗಡಿ-ಮುಂಗಟ್ಟುಗಳು, ಬ್ಯಾಂಕ್ ಸೇರಿದಂತೆ ನಾನಾ ಸಂಘ-ಸಂಸ್ಥೆಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಪ್ರತಿಭಟಿಸಿದರು. ಬೋಗೂರು, ಇಟಗಿ ಕ್ರಾಸ್ , ಚಿಕ್ಕಮುನವಳ್ಳಿ, ಹಿರೇಮುನವಳ್ಳಿ, ಕರವಿನಕೊಪ್ಪ, ತೋಲಗಿ, ಗಂದಿಗವಾಡ, ಹಂದೂರ, ಹುಲಿಕೊತ್ತಲ, ಗುಂಡ್ಯಾನಟ್ಟಿ ಗ್ರಾಮಸ್ಥರೂ ಪ್ರತಿಭಟನೆಯಲ್ಲಿಪಾಲ್ಗೊಂಡು ಬೆಂಬಲಿಸಿದರು.

ಮೊದಲಿಗೆ ಹಾಲಿನ ಡೇರಿ ಹತ್ತಿರ ಸೇರಿದ ಪ್ರತಿಭಟನಾಕಾರರು ಬಡೀಗೇರ ಬೀದಿ, ಶ್ರೀ ಕಲ್ಮೇಶ್ವರ ದೇವಸ್ಥಾನ, ಅರ್ಬಾಟ ಬೀದಿ, ಅಗಸಿ, ದೊಡ್ಡೋಣಿ ಮೂಲಕ ರಾರ ಯಲಿ ನಡೆಸಿ, ಜನಪ್ರತಿನಿಧಿಗಳು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು.

ಜಿಟಿ ಜಿಟಿ ಮಳೆಯಲ್ಲೂಪ್ರತಿಭಟನಾಕಾರರು ರಸ್ತೆಯಲ್ಲಿಟೈರಿಗೆ ಬೆಂಕಿ ಹಚ್ಚಿ, ರಸ್ತೆಯ ತಗ್ಗು-ಗುಂಡಿಗಳಲ್ಲಿಸಸಿ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ ಹುಂಜಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂಜಯ ಗಸ್ತಿ, ತಹಸೀಲ್ದಾರ ದುಂಡಪ್ಪ ಕೋಮಾರ ಆಗಮಿಸಿ ಮನವೊಲಿಸಲು ಪ್ರಯತ್ನಿಸಿದರು. ನಮ್ಮ ಬೇಡಿಕೆ ಈಡೇರುವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಹುಲಿಕಟ್ಟಿಯ ಪೂಜ್ಯರು, ಕಾಂಗ್ರೆಸ್ ಮುಖಂಡ ಇರ್ಫಾನ್ ತಾಳಿಕೋಟಿ, ಜೆಡಿಎಸ್ ಮುಖಂಡ ನಾಸೀರ್ ಬಾಗವಾನ, ಕರವೇ ಸಂಘಟನೆಯ ಆರೋಗ್ಯಪ್ಪ ಪಾದನಕಟ್ಟಿ, ವಿಠ್ಠಲ ಹಿಂಡಲ್ಕರ, ರೈತ ಸಂಘಟನೆಯ ಪಡೆಪ್ಪ ಬೋಗೂರ, ಬಸನಗೌಡಾ ಪಾಟೀಲ, ರುದ್ರಗೌಡ ಪಾಟೀಲ, ಮಹಾರುದ್ರಯ್ಯ ಹಿರೇಮಠ, ಕೇದಾರಿ ಸೋನಪ್ಪನವರ, ಕಲ್ಮೇಶ ಮುತ್ನಾಳ, ವಿಠ್ಠಲ ಕಿಳೋಜಿ, ರಾಯಪ್ಪ ಬಳಗಪ್ಪನವರ, ಸುರೇಶ ಹುಣಶಿಕಟ್ಟಿ, ಮಹಿಳೆಯರು ಹಾಗೂ ನಾನಾ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.

ಬಾಕ್ಸ್ ....

ರಾಷ್ಟ್ರೀಯ ಹೆದ್ದಾರಿ ತಡೆ ಎಚ್ಚರಿಕೆ:

‘‘ಜು.31 ರಂದು ಇಟಗಿ ಸಂಪರ್ಕಿಸುವ ರಸ್ತೆಗಳನ್ನು ತಾತ್ಕಾಲಿಕ ಮೆಟ್ಲಿಂಗ್ ಮಾಡಿ ಸಮತಟ್ಟುಗೊಳಿಸಲಾಗುವುದು. ಮಳೆಗಾಲದ ನಂತರ ರಸ್ತೆ ಅಭಿವೃದ್ಧಿಗೊಳಿಸಲಾಗುವುದು,’’ ಎಂದು ಲೋಕೋಪಯೋಗಿ ಇಇ ಪ್ರವೀಣ ಹುಂಜಿ ಲಿಖಿತ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು. ಜು.31ರಂದು ರಸ್ತೆ ಮೆಟ್ಲಿಂಗ್ ನಡೆಯದಿದ್ದರೆ ಆಗಸ್ಟ್ 1 ರಂದು ಇಟಗಿ ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು,’’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಫೋಟೋ ಶೀರ್ಷಿಕೆ ; 27 ಇಟಗಿ 3: ಇಟಗಿ ಗ್ರಾಮದ ರಸ್ತೆಯಲ್ಲಿಕುಳಿತ ಪ್ರತಿಭಟನಾಕಾರರು.