ಮುಳಬಾಗಲು: ತಾಲೂಕಿನ ಹೈದಲಾಪುರ ಗ್ರಾಮದ ಸರ್ವೆ ನಂ. 58/3 ರಲ್ಲಿರುವ ಕೋಳಿ ಫಾರಂ ಹಿಂಭಾಗದಲ್ಲಿ9 ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿರುವುದನ್ನು ಅಬಕಾರಿ ಮತ್ತು ಕಂದಾಯ ಇಲಾಖೆಗಳ ಸಿಬ್ಬಂದಿ ಪತ್ತೆ ಹಚ್ಚಿ ಸ್ಥಳದಲ್ಲಿದ್ದ ಆರೋಪಿಗಳನ್ನು ಪ್ರಧಾನ ಜಿಲ್ಲಾನ್ಯಾಯಾಧೀಶರ ಹಾಜರಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕರಾದ ಬಿ.ಪುಷ್ಪ ಮತ್ತು ಎಂ.ರಮಾಮಣಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ರಮ್ಯಶ್ರೀ ದಾಳಿ ಮಾಡಿ ಸ್ಥಳದಲ್ಲಿದ್ದ ಒಂದನೇ ಆರೋಪಿ ಮಾರಪ್ಪ ಅಲಿಯಾಸ್ ಮಾಕೋಂರ್ ಡಪ್ಪ ಅವರನ್ನು ದಸ್ತಗಿರಿ ಮಾಡಿ ಜಮೀನು ಮಾಲೀಕ ಎಚ್ .ಎಂ ರಾಘವೇಂದ್ರರೆಡ್ಡಿ ಅವರನ್ನು ಎರಡನೇ ಆರೋಪಿಯಾಗಿ ಪ್ರಕರಣ ದಾಖಲಿಸಿ ಕೋಲಾರ ಪ್ರಧಾನ ಜಿಲ್ಲಾನ್ಯಾಯಾಧೀಶ ವಿಜಯಕುಮಾರ್ ಎಂ.ಆನಂದ ಕಟ್ಟಿ ಅವರ ಮುಂದೆ ಹಾಜರು ಪಡಿಸಲಾಗಿತ್ತು. ನ್ಯಾಯಾಧೀಶರು ಎನ್ ಡಿಪಿಎಸ್ ಆಕ್ಟ್ 25/2022ರಂತೆ ವಿಚಾರಣೆ ನಡೆಸಿ ದಾಳಿಯಲ್ಲಿಪಾಲ್ಗೊಂಡ ಅಬಕಾರಿ ಅಧಿಕಾರಿಗಳ ಮತ್ತು ಗ್ರಾಮ ಲೆಕ್ಕಾಧಿಕಾರಿ ಅವರ ನುಡಿ ಸಾಕ್ಷ್ಯ, ಕಡತದಲ್ಲಿಲಭ್ಯವಿದ್ದ ದಾಖಲೆ ಮತ್ತು ವಿಡಿಯೊ, ಫೋಟೋಗಳನ್ನು ಗಣನೆಗೆ ತೆಗೆದುಕೊಂಡು ಜಮೀನು ಮಾಲೀಕನಾದ ಎರಡನೇ ಆರೋಪಿಗೆ ಎನ್ ಡಿಪಿಎಸ್ ಕಾಯಿದೆ 20ಎರಂತೆ ಎರಡು ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗೂ ಐವತ್ತು ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಮರ್ಪಕ ಸಾಕ್ಷ್ಯಾಧಾರಗಳ ಕೊರತೆಯಿಂದ ಒಂದನೇ ಆರೋಪಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅಬಕಾರಿ ಇಲಾಖೆಯು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗಿದೆ.