Vik Health Excellence Award Presented To Doctors In North Karnataka
ವಿಕ ಹೆಲ್ತ್ ಎಕ್ಸಲೆನ್ಸ್ ಅವಾರ್ಡ್
Contributed by: Subhas S|Vijaya Karnataka•
ಉತ್ತರ ಕರ್ನಾಟಕದ ಶ್ರೇಷ್ಠ ವೈದ್ಯರಿಗೆ ‘ವಿಕ ಹೆಲ್ತ್ ಎಕ್ಸಲೆನ್ಸ್ - ಆನರ್ಸ್ ’ ಪ್ರಶಸ್ತಿ ಪ್ರದಾನ
ಉ.ಕ ಭಾಗದ ವೈದ್ಯರ ಸೇವೆ ಶ್ಲಾಘನೀಯವಿಕ ಸುದ್ದಿಲೋಕ ಬೆಂಗಳೂರು
ಆರೋಗ್ಯ ಕ್ಷೇತ್ರದಲ್ಲಿಅಪ್ರತಿಮ ಸೇವೆ ಸಲ್ಲಿಸುತ್ತಿರುವ ಉತ್ತರ ಕರ್ನಾಟಕದ ಶ್ರೇಷ್ಠ ವೈದ್ಯರು ಹಾಗೂ ವೈದ್ಯಕೀಯ ಸಂಸ್ಥೆಗಳಿಗೆ ‘ವಿಜಯ ಕರ್ನಾಟಕ’ದಿಂದ ‘ವಿಕ ಹೆಲ್ತ್ ಎಕ್ಸಲೆನ್ಸ್ - ಆನರ್ಸ್ ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ನಗರದ ಖಾಸಗಿ ಹೋಟೆಲ್ ನಲ್ಲಿನಡೆದ ಅದ್ಧೂರಿ ಸಮಾರಂಭದಲ್ಲಿನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು 23 ಸಾಧಕ ವೈದ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಈ ವೇಳೆ ಮಾತನಾಡಿದ ಸಚಿವ ಡಾ.ಯತೀಂದ್ರ, ‘‘ವೈದ್ಯೋ ನಾರಾಯಣೋ ಹರಿ’ ಎಂದು ಸಮಾಜ ವೈದ್ಯರಿಗೆ ಪೂಜ್ಯ ಸ್ಥಾನ ನೀಡಿದೆ. ಈ ವೃತ್ತಿ ಕೇವಲ ಜೀವನೋಪಾಯಕ್ಕಾಗಿ ಮಾತ್ರ ಮಾಡುವುದಲ್ಲ. ಅದು ನಿಜವಾದ ಸಮಾಜ ಸೇವೆ. ವೈದ್ಯರಿಲ್ಲದೆ ಸ್ವಸ್ಥ, ಅಭಿವೃದ್ಧಿಯ ಸಮಾಜ ಸಾಧ್ಯವಿಲ್ಲ. ಸವಾಲಿನ ನಡುವೆ ಉತ್ತರ ಕರ್ನಾಟಕ ಭಾಗದಲ್ಲಿವೈದ್ಯರು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ,’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘‘ಸುದ್ದಿ ನೀಡುವ ಜತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿನಿರಂತರ ಶ್ರಮಿಸುತ್ತಿರುವ ವೈದ್ಯಕೀಯ ಕ್ಷೇತ್ರದ ನೈಜ ಹೀರೋಗಳನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿರುವ ‘ವಿಜಯ ಕರ್ನಾಟಕ’ ಬಳಗದ ಈ ಪ್ರಯತ್ನ ಪ್ರಶಂಸನೀಯ. ವೈದ್ಯನಾಗಿ ನನ್ನ ಸಮುದಾಯದ ಸಾಧಕರಿಗೆ, ಅದರಲ್ಲೂಉತ್ತರ ಕರ್ನಾಟಕದ ವೈದ್ಯರಿಗೆ ಪ್ರಶಸ್ತಿ ನೀಡುತ್ತಿರುವುದು ಖುಷಿ ತಂದಿದೆ,’’ ಎಂದು ಸಂತಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ‘‘ಸಾಮಾನ್ಯ ಜನರಿಗೆ ಸುಲಭ ಮತ್ತು ಕಡಿಮೆ ವೆಚ್ಚದಲ್ಲಿವೈದ್ಯಕೀಯ ಸೇವೆ ತಲುಪಿಸಲು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿಸಮಗ್ರ ಸುಧಾರಣೆ ಅಗತ್ಯವಿದೆ. ನಗರ ಪ್ರದೇಶ ಮತ್ತು ಕಾರ್ಪೊರೇಟ್ ಆಸ್ಪತ್ರೆಗಳಲ್ಲಿವೈದ್ಯರು ಕೇಂದ್ರಿಕೃತರಾಗುತ್ತಿದ್ದು, ಗ್ರಾಮೀಣ ಪ್ರದೇಶಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿತಜ್ಞ ವೈದ್ಯರ ಅಭಾವ ಎದ್ದು ಕಾಣುತ್ತಿದೆ. ಈ ಅಸಮಾನತೆ ಸರಿಪಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ,’’ ಎಂದು ಅಭಿಪ್ರಾಯಪಟ್ಟರು.
‘‘ಕಾರ್ಪೊರೇಟ್ ವ್ಯವಸ್ಥೆಯಿಂದ ವೈದ್ಯಕೀಯ ಸೇವೆ ದುಬಾರಿಯಾಗಿದೆ. ಭಾರತದ ಜನಸಂಖ್ಯೆ ಹಾಗೂ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಚಿಕಿತ್ಸಾ ವೆಚ್ಚಗಳು ಸ್ಥಳೀಯವಾಗಿಯೇ ನಿರ್ಧಾರವಾಗಬೇಕು. ವೈದ್ಯಕೀಯ ವೃತ್ತಿ ಕೇವಲ ಹಣ ಗಳಿಕೆಯ ಹಾದಿಯಾಗದೆ, ಮಾನವನ ದೈಹಿಕ ನೋವನ್ನು ನಿವಾರಿಸುವ ಅತ್ಯಂತ ಪವಿತ್ರ ಕಾಯಕವಾಗಿ ಮುಂದುವರಿಯಬೇಕು,’’ ಎಂದು ಆಶಿಸಿದರು.
---
ಬಾಕ್ಸ್
ಉತ್ತರ ಕರ್ನಾಟಕ ವೈದ್ಯರ ಸೇವೆ ಶ್ಲಾಘನೀಯ
‘ವಿಜಯ ಕರ್ನಾಟಕ’ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ ಮಾತನಾಡಿ, ‘‘ವಿಜಯ ಕರ್ನಾಟಕ’ ರಾಜ್ಯದ ಸಮಗ್ರ ಪ್ರಗತಿಗಾಗಿ ಹಲವು ಆಯಾಮಗಳಲ್ಲಿಕೆಲಸ ಮಾಡುತ್ತಿದೆ. ಜನತೆಗೆ ಸುದ್ದಿ ತಲುಪಿಸುವ ಜತೆಗೆ ಸಮಾಜಮುಖಿ ಕೆಲಸ ಮುಂದುವರಿಸಿಕೊಂಡು ಬಂದಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತಿದೆ,’’ ಎಂದು ಹೇಳಿದರು.
‘‘ಸಾಧಕ, ಸೇವಾ ಮನೋಭಾವದ ವೈದ್ಯರನ್ನು ಗುರುತಿಸಿ ಗೌರವಿಸಿದರೆ ಅವರಿಂದ ಮತ್ತಷ್ಟು ಜನಕ್ಕೆ ಪ್ರೇರಣೆ ಸಿಗಬಹುದು ಎಂಬ ಆಶಯದಿಂದ ಎಲೆಮರೆ ಕಾಯಿಯಂತೆ ಸೇವೆಯಲ್ಲಿತೊಡಗಿರುವ ವೈದ್ಯರನ್ನು ‘ವಿಕ ಹೆಲ್ತ್ ಎಕ್ಸಲೆನ್ಸ್ - ಆನರ್ಸ್ ’ ಪ್ರಶಸ್ತಿಗಾಗಿ ಗುರುತಿಸಿದ್ದೇವೆ. ವೈದ್ಯಕೀಯ ಶಿಕ್ಷಣದ ಬಳಿಕ ಹಲವರು ಅಮೆರಿಕ, ಆಸ್ಪ್ರೇಲಿಯಾ, ಯುಕೆ ಕಡೆಗೆ ಪ್ರತಿಭಾ ಪಲಾಯನ ಮಾಡುತ್ತಿದ್ದಾರೆ. ಇಲ್ಲವೇ ಬೆಂಗಳೂರಿನಂತಹ ನಗರ ಸೇರುತ್ತಿದ್ದಾರೆ. ಆದರೂ, ಹಲವರು ತಮ್ಮ ಊರುಗಳಲ್ಲಿವೈದ್ಯಕೀಯ ಸೇವೆ ಮಾಡಿಕೊಂಡಿರುವುದು ಶ್ಲಾಘನೀಯ,’’ ಎಂದರು.
‘‘ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿ ವಿದ್ಯಾರ್ಥಿಗಳಿಗಾಗಿ ಸಂವಾದ ಏರ್ಪಡಿಸುವ ‘ವಿಜಯೀಭವ’ ಕಾರ್ಯಕ್ರಮವನ್ನು ಪ್ರತಿ ವರ್ಷ ಜಿಲ್ಲಾಮಟ್ಟದಿಂದ ಗ್ರಾಮ, ಹೋಬಳಿವರೆಗೆ ಏರ್ಪಡಿಸಲಾಗುತ್ತಿದೆ. ರೈತರಲ್ಲಿಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ರಮ, ಕಲಾವಿದರಿಗಾಗಿ ಶಾರ್ಟ್ ಫಿಲ್ಮ್ ಫೆಸ್ಟಿವಲ್ ಆಯೋಜಿಸಲಾಗುತ್ತಿದೆ. ಆರ್ಥಿಕ ಶಿಕ್ಷಣಕ್ಕಾಗಿ ತಂದ ‘ವಿಕ ಮನಿ’ ಪತ್ರಿಕೆ ರಾಜ್ಯಾದ್ಯಂತ ವ್ಯಾಪಕ ಜನಪ್ರಿಯತೆ ಪಡೆದಿದೆ,’’ ಎಂದರು.
---
ಬಾಕ್ಸ್
ವೈದ್ಯರ ಕುಟುಂಬದ ತ್ಯಾಗ ಪ್ರಶಂಸನೀಯ: ನಿಮಿಕಾ
ನಟಿ ನಿಮಿಕಾ ರತ್ನಾಕರ ಮಾತನಾಡಿ, ‘‘ನನ್ನ ವೃತ್ತಿ ಜೀವನದಲ್ಲಿಅತ್ಯಂತ ಜನಪ್ರಿಯತೆ ತಂದುಕೊಟ್ಟ ‘ಪುಷ್ಪಾವತಿ’ ಹಾಡು ಮೊದಲು ಬಿಡುಗಡೆಯಾಗಿದ್ದೇ ಹುಬ್ಬಳ್ಳಿಯಲ್ಲಿ. ಹೀಗಾಗಿ ಉತ್ತರ ಕರ್ನಾಟಕ ಮತ್ತು ಹುಬ್ಬಳ್ಳಿಯ ಜನರ ಪ್ರೀತಿ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದೆ,’’ ಎಂದರು.
‘‘ಯಾವುದೇ ವೇಳೆ ಬರುವ ಕರ್ತವ್ಯದ ಕರೆಗೆ ತೆರಳುವ ವೈದ್ಯರಿಗೆ ಬೆಂಬಲವಾಗಿ ನಿಲ್ಲುವ ಅಮ್ಮಂದಿರು ಹಾಗೂ ಪತ್ನಿಯರ ಸಹಕಾರ ಪ್ರಶಂಸನೀಯ. ಕುಟುಂಬದ ನೆಮ್ಮದಿ ಮತ್ತು ಬೆಂಬಲವಿದ್ದಾಗ ಮಾತ್ರ ವೈದ್ಯರು ನಿರಾತಂಕವಾಗಿ ಸೇವೆ ಸಲ್ಲಿಸಲು ಸಾಧ್ಯ,’’ ಎಂದು ಅಭಿಪ್ರಾಯಪಟ್ಟರು.
---
ಬಾಕ್ಸ್
ವೃತ್ತಿ ಮೀರಿದ ಮಾನವೀಯ ವೈದ್ಯರಿಗೆ ಪುರಸ್ಕಾರ: ಸಿಇಒ
‘ವಿಜಯ ಕರ್ನಾಟಕ’ ಹಾಗೂ ‘ಬೆಂಗಳೂರು ಮಿರರ್ ’ ಸಿಇಒ ದೀಪಕ್ ಸಲುಜಾ ಮಾತನಾಡಿ, ‘‘ಬದ್ಧತೆಯಿಂದ ಸೇವೆ ನೀಡುತ್ತಿರುವ ವೈದ್ಯರನ್ನು ‘ವಿಜಯ ಕರ್ನಾಟಕ’ ಗೌರವಿಸುತ್ತಿದೆ. ಈ ಪ್ರಶಸ್ತಿಗಳ ಮೂಲಕ ವೈದ್ಯರ ಯಶಸ್ಸಿನ ಕಥೆಗಳನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸುತ್ತಿದೆ. ಇದರಿಂದ ಪುರಸ್ಕೃತ ವೈದ್ಯರು ಮುಂದೆ ಮತ್ತಷ್ಟು ಸಾಧನೆ ಮಾಡಲು, ಯುವಜನರು ಅವರಿಂದ ಪ್ರೇರಣೆ ಪಡೆಯಲು ಸಾಧ್ಯವಾಗಲಿದೆ. ಮುಖ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿಕರ್ನಾಟಕ ಇತರರಿಗೆ ಮಾದರಿಯಾಗುವ ಉನ್ನತ ಮಟ್ಟದ ಗುಣಮಟ್ಟ ಹೊಂದಲು ಸಾಧ್ಯವಾಗುತ್ತದೆ,’’ ಎಂದರು.
‘‘ರಾಜ್ಯ ಸರಕಾರ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ, ಗ್ರಾಮೀಣ ಭಾಗಗಳಿಗೂ ವೈದ್ಯಕೀಯ ಸೌಲಭ್ಯ ತಲುಪಿಸುವಲ್ಲಿಮುಂಚೂಣಿಯಲ್ಲಿದೆ. ವೈದ್ಯರು ಮತ್ತು ಸರಕಾರದೊಂದಿಗೆ ಹೆಗಲು ಜೋಡಿಸಿ ಕೆಲಸ ಮಾಡಲು ‘ವಿಕ’ ಬದ್ಧವಾಗಿದೆ,’’ ಎಂದರು.
‘‘ಯುವಜನತೆ ಸೋಷಿಯಲ್ ಮೀಡಿಯಾದಿಂದಾಗಿ ಎದುರಿಸುತ್ತಿರುವ ಮಾನಸಿಕ ಆರೋಗ್ಯದ ಸಮಸ್ಯೆಯನ್ನು ಆರಂಭದಲ್ಲೇ ಚಿವುಟಿ ಹಾಕಬೇಕಿದೆ. ಉತ್ತಮ ಜೀವನಶೈಲಿಯನ್ನು ಅವರಿಗೆ ತಿಳಿಸಬೇಕಿದೆ. ಈ ನಿಟ್ಟಿನಲ್ಲಿವೈದ್ಯರೊಂದಿಗೆ ಸಂವಾದ, ವೈದ್ಯರಿಂದ ಉತ್ತರ ಪಡೆದುಕೊಳ್ಳುವಂತಹ ವಿಭಾಗಗಳಿವೆ. ಒಟ್ಟಾರೆ ಸ್ವಸ್ಥ ಕರ್ನಾಟಕ ನಿರ್ಮಾಣವಾಗಲಿ ಎಂಬುದು ‘ವಿಜಯ ಕರ್ನಾಟಕ’ದ ಆಶಯ,’’ ಎಂದರು.
---
‘ಆರೋಗ್ಯ ಕ್ಷೇತ್ರದಲ್ಲಿಸಮಗ್ರ ಸುಧಾರಣೆ ಅಗತ್ಯ’
ವಿಕ ಸುದ್ದಿಲೋಕ ಬೆಂಗಳೂರು
‘‘ಸಾಮಾನ್ಯ ಜನರಿಗೆ ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿವೈದ್ಯಕೀಯ ಸೇವೆ ತಲುಪಿಸಲು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿಸಮಗ್ರ ಸುಧಾರಣೆಗಳ ಅಗತ್ಯವಿದೆ,’’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದರು.
‘ವಿಜಯ ಕರ್ನಾಟಕ’ದಿಂದ ಆಯೋಜಿಸಿದ್ದ ಉತ್ತರ ಕರ್ನಾಟಕ ಸಾಧಕರಿಗೆ ‘ವಿಕ ಹೆಲ್ತ್ ಎಕ್ಸಲೆನ್ಸ್ - ಆನರ್ಸ್ ’ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭದಲ್ಲಿಭಾಗವಹಿಸಿ ಅವರು ಮಾತನಾಡಿದರು.
ವೈದ್ಯ, ರೋಗಿಯ ನಡುವೆ ಆತ್ಮೀಯತೆ ಅಗತ್ಯ:
‘‘ಇಂದಿನ ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿಯಂತ್ರಗಳು ಮತ್ತು ರೋಗ ನಿರ್ಣಯ ಪರೀಕ್ಷೆಗಳು (ಘ್ಕಿಒಖಋ, ಸ್ಕ್ಯಾ ನಿಂಗ್ ) ಹೆಚ್ಚಾಗಿ ಪ್ರಾಮುಖ್ಯತೆ ಪಡೆಯುತ್ತಿದ್ದು, ವೈದ್ಯರು ರೋಗಿಯೊಂದಿಗೆ ಕಳೆಯುವ ಸಮಯ ಹಾಗೂ ಆತ್ಮೀಯ ಮಾತುಗಳು ಕಡಿಮೆಯಾಗುತ್ತಿವೆ. ರೋಗಿಯ ಮಾನಸಿಕ ಆತಂಕವನ್ನು ತಿಳಿಗೊಳಿಸುವುದೇ ಶೇ.50 ರಷ್ಟು ಚಿಕಿತ್ಸೆಗೆ ಸಮಾನ. ಈ ಮುಂಚಿನ ಕುಟುಂಬ ವೈದ್ಯರಿದ್ದಂತೆ ಆತ್ಮೀಯತೆ ಮತ್ತೆ ಬರಬೇಕಿದೆ,’’ ಎಂದು ಅಭಿಪ್ರಾಯಪಟ್ಟರು.
ವೈದ್ಯಕೀಯ ಶಿಕ್ಷಣದ ವೆಚ್ಚ ಮತ್ತು ಸವಾಲುಗಳು:
‘‘ಕಳೆದ 10 ವರ್ಷಗಳಲ್ಲಿವೈದ್ಯಕೀಯ ಸೀಟುಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದ್ದರೂ ಸ್ಪರ್ಧೆ ಕಡಿಮೆಯಾಗಿಲ್ಲ. ಮಕ್ಕಳು ಪಿಯು ಓದಿ ನೀಟ್ ಪರೀಕ್ಷೆ ಬರೆಯಬೇಕು. ವೈದ್ಯಕೀಯ ಶಿಕ್ಷಣ ಅತ್ಯಂತ ದುಬಾರಿಯಾಗುತ್ತಿದ್ದು, ಇದು ಸಾಮಾನ್ಯ ಜನರಿಗೆ ಚಿಕಿತ್ಸಾ ವೆಚ್ಚ ಹೆಚ್ಚಾಗಲು ಕಾರಣವಾಗುತ್ತಿದೆ. ಟ್ಯೂಷನ್ ಮತ್ತು ಕೋಚಿಂಗ್ ಸೆಂಟರ್ ಗಳು ಹೆಚ್ಚಾಗಿ ನಿಯಮಿತ ಕಾಲೇಜುಗಳನ್ನೇ ಹಿಂದಿಕ್ಕುತ್ತಿರುವುದು ಕಳವಳಕಾರಿ ಸಂಗತಿ,’’ ಎಂದರು.
‘‘ಕೋಚಿಂಗ್ ಸೆಂಟರ್ ಗಳಿಗೂ ಶಿಫಾರಸು ಮಾಡುವ ಕಾಲ ಬಂದಿದೆ. ಎಲ್ಲಕೋಚಿಂಗ್ ಸೆಂಟರ್ ನವರು ಫಸ್ಟ್ ರಾರ ಯಂಕ್ ಅಂಥ ಹೇಳಿಕೊಳ್ಳುತ್ತಾರೆ. ಎಷ್ಟು ಜನ ಫಸ್ಟ್ ರಾರ ಯಂಕ್ ಬಂದಿದ್ದಾರೆ ಎನ್ನುವ ಅನುಮಾನ ಮೂಡುತ್ತದೆ. ಈಗ ಹತ್ತು ವರ್ಷದಲ್ಲಿಒಂದು ಲಕ್ಷಕ್ಕೂ ಹೆಚ್ಚು ಸೀಟುಗಳಾಗಿವೆ. ಹೆಚ್ಚು ಕಾಲೇಜುಗಳಾಗಿವೆ. ಮೊದಲು ತಂದೆ ತಾಯಿ, ಮಕ್ಕಳು ಬಿಎ ಡಿಗ್ರಿ ಮಾಡಿದರೆ ಸಾಕು ಅನ್ನುತ್ತಿದ್ದರು. ನಂತರ ಎಂಜಿನಿಯರ್ ಆಗಬೇಕು ಎನ್ನುತ್ತಿದ್ದರು, ಈಗ ಡಾಕ್ಟರ್ ಆಗಬೇಕು ಅಂತ ಬಯಸುತ್ತಾರೆ. ಅದೂ ಎಂಬಿಬಿಎಸ್ ಗೆ ಮರ್ಯಾದೆ ಇಲ್ಲ, ಪಿಜಿ ಮಾಡಿದರೆ ಮಾತ್ರ ಬೆಲೆ ಎನ್ನುವಂತಾಗಿದೆ. ನಮ್ಮ ರಾಜ್ಯದಲ್ಲಿಅತಿ ಹೆಚ್ಚು ಮೆಡಿಕಲ್ ಸೀಟುಗಳಿವೆ. ಆದರೆ, ಎಲ್ಲವೂ ರಾಜ್ಯದ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ. ಅದಕ್ಕೂ ಪೈಪೋಟಿ ಇದೆ. ಬೇರೆ ರಾಜ್ಯದವರಿಗೆ ನಾವು ಕಾಲೇಜು ಮಾಡಿದ್ದೇವೆ,’’ ಎಂದರು.
ಗ್ರಾಮೀಣ ಭಾಗದಲ್ಲಿವೈದ್ಯರ ಕೊರತೆ:
‘‘ನಗರ ಪ್ರದೇಶಗಳಲ್ಲಿಮತ್ತು ಕಾರ್ಪೊರೇಟ್ ಆಸ್ಪತ್ರೆಗಳಲ್ಲಿವೈದ್ಯರು ಕೇಂದ್ರೀಕೃತರಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿಹಾಗೂ ತಾಲೂಕು ಆಸ್ಪತ್ರೆಗಳಲ್ಲಿತಜ್ಞ ವೈದ್ಯರ ಅಭಾವ ಎದ್ದು ಕಾಣುತ್ತಿದೆ. ಈ ಅಸಮಾನತೆ ಸರಿಪಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಎಲ್ಲಿಯವರೆಗೆ ಕಡಿಮೆ ದರದಲ್ಲಿಮೆಡಿಕಲ್ ಶಿಕ್ಷಣ ಸಿಗುವುದಿಲ್ಲವೋ, ಅಲ್ಲಿಯವರೆಗೆ ಕಡಿಮೆ ದರದಲ್ಲಿವೈದ್ಯಕೀಯ ಸೇವೆ ಸಿಗುವುದಿಲ್ಲ,’’ ಎಂದರು
ವಿದೇಶಿ ಬಂಡವಾಳದ ಕುರಿತು ಎಚ್ಚರಿಕೆ:
‘‘ಆರೋಗ್ಯ ಕ್ಷೇತ್ರದಲ್ಲಿವಿದೇಶಿ ಹೂಡಿಕೆಗಳು ಹೆಚ್ಚುತ್ತಿರುವುದು ಸ್ವಾಗತಾರ್ಹವಾದರೂ, ಚಿಕಿತ್ಸಾ ವೆಚ್ಚವನ್ನು ವಿದೇಶಗಳಲ್ಲಿಕುಳಿತವರು ನಿರ್ಧರಿಸುವಂತಾಗಬಾರದು. ಕಾರ್ಪೊರೇಟ್ ವ್ಯವಸ್ಥೆಯಿಂದ ವೈದ್ಯಕೀಯ ಸೇವೆ ದುಬಾರಿಯಾಗಿದೆ. ಭಾರತದ ಜನಸಂಖ್ಯೆ ಹಾಗೂ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಚಿಕಿತ್ಸಾ ವೆಚ್ಚಗಳು ಸ್ಥಳೀಯವಾಗಿಯೇ ನಿರ್ಧಾರವಾಗಬೇಕು,’’ ಎಂದು ಎಚ್ಚರಿಸಿದರು.
ಸರಕಾರದ ಸಾಧನೆ:
ತಮ್ಮ ಆಡಳಿತಾವಧಿಯಲ್ಲಿಬೆಂಗಳೂರಿನಲ್ಲಿ184 ಹಾಗೂ ರಾಜ್ಯಾದ್ಯಂತ ಒಟ್ಟು 400 ‘ನಮ್ಮ ಕ್ಲಿನಿಕ್ ’ ಪ್ರಾರಂಭಿಸಲಾಗಿತ್ತು. ಅಲ್ಲದೆ, ಹುಬ್ಬಳ್ಳಿಯಲ್ಲಿಜಯದೇವ ಹಾಗೂ ಬೆಳಗಾವಿಯಲ್ಲಿಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗಳ ಶಾಖೆಗಳನ್ನು ತರಲು ಶ್ರಮಿಸಿದ್ದನ್ನು ಸ್ಮರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ‘ಆಯುಷ್ಮಾನ್ ಭಾರತ್ ’ ಹಾಗೂ ‘ಜನೌಷಧಿ’ ಕೇಂದ್ರಗಳು ಜನರಿಗೆ ತಲುಪುತ್ತಿರುವುದನ್ನು ಶ್ಲಾಘಿಘಿಸಿದರು.
‘‘ವೈದ್ಯಕೀಯ ವೃತ್ತಿ ಕೇವಲ ಹಣಗಳಿಕೆಯ ಹಾದಿಯಾಗದೆ, ಮಾನವನ ದೈಹಿಕ ನೋವನ್ನು ನಿವಾರಿಸುವ ಅತ್ಯಂತ ಪವಿತ್ರವಾದ ಕಾಯಕ. ನಿರಂತರವಾಗಿ ಸಮಾಜದ ಬಡವರ ನೋವಿಗೆ ಸ್ಪಂದಿಸುವುದೇ ನಿಜವಾದ ಸಾಧನೆಯಾಗಿದೆ. ನೀವು ದೇವರಿಗೆ ಅತ್ಯಂತ ಹತ್ತಿರವಾದ ಮಕ್ಕಳು, ಮನುಷ್ಯನ ನೋವು ಕಡಿಮೆ ಮಾಡುವುದು ಅತ್ಯಂತ ಪವಿತ್ರ ಕೆಲಸ. ಉತ್ತರ ಕರ್ನಾಟಕದಿಂದ ರೋಗಿಗಳು ಬೆಂಗಳೂರಿಗೆ ಬರದಂತೆ ನೋಡಿಕೊಳ್ಳಿ. ಯಶಸ್ಸು ಬಹಳ ಸಣ್ಣ ವಿಚಾರ, ಯಶಸ್ಸು ನಿರಂತರವಾಗಿದ್ದರೆ ಅದು ಸಾಧನೆಯಾಗುತ್ತದೆ. ಸಾಧನೆ ಮಾಡಲು ನಿಮ್ಮ ಶ್ರಮ ಮೀಸಲಿಡಿ. ಬಡವರ ಬಾಳಿನಲ್ಲಿನ ನೋವು ತೆಗೆದು ಸಮಾಜದಲ್ಲಿನಗು ತರುವ ಕೆಲಸ ಮಾಡಿ,’’ ಎಂದು ಹೇಳಿದರು.
ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ‘ವಿಜಯ ಕರ್ನಾಟಕ’ ಸಿಇಒ ದೀಪಕ್ ಸಲುಜಾ, ‘ವಿಜಯ ಕರ್ನಾಟಕ’ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಹಾಗೂ ಚಿತ್ರನಟಿ ನಿಮಿಕಾ ರತ್ನಾಕರ ಹಾಜರಿದ್ದರು.