ಎಚ್ ಎಂಟಿ ಜಾಗ ಅರಣ್ಯ ಭೂಮಿ, ರಾಜ್ಯ ಸರಕಾರದ್ದೇ ಹಕ್ಕು - ಎಚ್ಡಿಕೆಗೆ ತಿರುಗೇಟು ನೀಡಿದ ಈಶ್ವರ ಖಂಡ್ರೆ

Contributed by: KENCHE GOWDA|Vijaya Karnataka•
hmt land is the right of the state government eeswara khandre said
ವಿಕ ಸುದ್ದಿಲೋಕ ಬೆಂಗಳೂರು

ಅರಣ್ಯೇತರ ಉದ್ದೇಶಕ್ಕೆ ಈವರೆಗೆ ಭೂಪರಿವರ್ತನೆ ಆಗದ ಎಚ್ ಎಂಟಿ ಜಾಗವು ಅರಣ್ಯ ಭೂಮಿಯಾಗಿದ್ದು, ಅರಣ್ಯವಾಗೇ ಉಳಿಯುತ್ತದೆ. ಈ ಆಸ್ತಿ ಮೇಲೆ ರಾಜ್ಯ ಸರಕಾರಕ್ಕೆ ಹಕ್ಕಿದೆಯೇ ಹೊರತು ಎಚ್ ಎಂಟಿಗೆ ಅಲ್ಲಎಂದು ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರಿಗೆ ಸಚಿವ ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ.
ಈ ಜಾಗವು ಅರಣ್ಯ ಪ್ರದೇಶವಾಗಿಯೇ ಉಳಿದಿರುವ ಬಗ್ಗೆ ದೃಡೀಕರಣಕ್ಕಾಗಿ ಎಚ್ ಎಂಟಿ ಪ್ರದೇಶಕ್ಕೆ ಬರಲು ಕುಮಾರಸ್ವಾಮಿ ಅವರ ನೀಡಿರುವ ಸವಾಲನ್ನು ಖಂಡ್ರೆ ಸ್ವೀಕರಿಸಿದ್ದಾರೆ.

ವಿಧಾನಸೌಧ ಕಚೇರಿಯಲ್ಲಿಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ಅಭಿವೃದ್ಧಿಯಲ್ಲಿರಾಜಕೀಯ ಮಾಡುವವನೂ ಅಲ್ಲ, ಕುಮಾರಸ್ವಾಮಿ ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷವೂ ಇಲ್ಲ. ಆದರೆ, ಎಚ್ ಎಂಟಿ ಅರಣ್ಯ ಭೂಮಿಯನ್ನು ರಾಜ್ಯ ಸರಕಾರದ ವಶಕ್ಕೆ ಮರಳಿ ಪಡೆದು ಲಾಲ್ ಬಾಗ್ , ಕಬ್ಬನ್ ಪಾರ್ಕ್ಗಿಂತ ದೊಡ್ಡ ಉದ್ಯಾನ ನಿರ್ಮಿಸಬೇಕು. ಆ ಮೂಲಕ ಬೆಂಗಳೂರು ಉತ್ತರ ಭಾಗಕ್ಕೆ ಅತ್ಯಗತ್ಯವಾದ ಶ್ವಾಸತಾಣ ಉಳಿಸಲು ನಿರ್ಧರಿಸಿದ್ದೆ,’’ ಎಂದು ಸಮಜಾಯಿಷಿ ನೀಡಿದರು.

‘‘ಎಚ್ ಎಂಟಿ ಶುರುವಾದಾಗ ಖಂಡ್ರೆ ಹುಟ್ಟೇ ಇರಲಿಲ್ಲ, ಹುಟ್ಟಿದ್ದರೂ ಮಗು ಎಂದೆಲ್ಲಾಕುಮಾರಸ್ವಾಮಿ ಅವರು ಮಾತನಾಡಿದ್ದಾರೆ. ನಾನು ಆ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ. ಇನ್ನು ಎಚ್ ಎಂಟಿ ಜಾಗದ ವ್ಯಾಜ್ಯ ಕೋರ್ಟ್ ನಲ್ಲಿದ್ದು, ಮಾಲೀಕತ್ವ ಯಾರದ್ದು ಎಂದು ನ್ಯಾಯಾಲಯ ಹೇಳಬೇಕೇ ಹೊರತು ಕುಮಾರಸ್ವಾಮಿ ಅಲ್ಲ. ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿಒಂದು ಬಾರಿ ಅರಣ್ಯ ಎಂದು ಘೋಷಣೆಯಾದ ಭೂಮಿ ಅನ್ಯ ಉದ್ದೇಶಕ್ಕೆ ಕಾನೂನುಬದ್ಧವಾಗಿ ಪರಿವರ್ತನೆ ಆಗದಿದ್ದರೆ ಅರಣ್ಯವಾಗಿಯೇ ಉಳಿಯುತ್ತದೆ. ಇದು ಮಾಜಿ ಸಿಎಂಗೆ ಗೊತ್ತಿಲ್ಲವೇ,’’ ಎಂದು ಪ್ರಶ್ನಿಸಿದರು.

‘‘ಅರಣ್ಯಾಧಿಕಾರಿ ಎಚ್ ಎಂಟಿಗೆ ನೋಟಿಸ್ ನೀಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದು, ಅದು ನೋಟಿಸ್ ಅಲ್ಲ. ಅರೆ ನ್ಯಾಯಿಕ ಪ್ರಾಧಿಕಾರದ ಆದೇಶ. ಎಸಿ ಕೋರ್ಟ್ , ಡಿಸಿ ಕೋರ್ಟ್ ನಂತೆ ಡಿಸಿಎಫ್ ನ್ಯಾಯಾಲಯದಲ್ಲೂಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 64 (ಎ)ರಡಿ ಒತ್ತುವರಿ ತೆರವು ಪ್ರಕ್ರಿಯೆ ನಡೆದಿದೆ. ಡಿಸಿಎಫ್ ಆದೇಶದ ಬಗ್ಗೆ ತಕರಾರಿದ್ದರೆ ಕಾನೂನು ಪ್ರಕಾರ ಮೇಲ್ಮನವಿ ಸಲ್ಲಿಸಲಿ. ಹೈಕೋರ್ಟ್ ಗೆ ಅರ್ಜಿ ಹಾಕಿಕೊಳ್ಳಲಿ,’’ ಎಂದು ಸವಾಲು ಹಾಕಿದರು.

‘‘ಎಚ್ ಎಂಟಿ ಭೂಮಿ ಅರಣ್ಯ ಎಂಬುದನ್ನು ಕೇಂದ್ರ ಸರಕಾರವೇ ಅಧಿಕೃತವಾಗಿ ಒಪ್ಪಿಕೊಂಡಿದೆ. 2018ರಲ್ಲಿಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಎಚ್ ಎಂಟಿ ಭೂಮಿ ಮಾರಾಟಕ್ಕೆ ಎನ್ ಒಸಿ ನೀಡುವಂತೆ ಕೋರಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಸಿ.ಕೆ.ಮಿಶ್ರಾ ಅವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತ್ಯುತ್ತರವೂ ಬಂದಿದ್ದು, ಎಚ್ ಎಂಟಿ ಭೂಮಿ ಅರಣ್ಯವಾಗಿದ್ದು, 1980ರ ಅರಣ್ಯ ಸಂರಕ್ಷಣಾ ಕಾಯಿದೆ ಅನ್ವಯಿಸುತ್ತದೆ. ಹಾಗಾಗಿ ಎನ್ ಒಸಿ ಕೊಡಲು ಸಾಧ್ಯವಿಲ್ಲಎಂದು ಸ್ಪಷ್ಟಪಡಿಸಿದ್ದಾರೆ,’’ ಎಂಬುದಾಗಿ ಖಂಡ್ರೆ ಅವರು ಈ ಸಂಬಂಧದ ದಾಖಲೆಗಳನ್ನು ಪ್ರದರ್ಶಿಸಿದರು.

‘‘ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿನೀಡಿರುವ ತೀರ್ಪುಗಳಲ್ಲಿಯಾವ ಉದ್ದೇಶಕ್ಕೆ ಭೂಮಿ ನೀಡಲಾಗಿದೆಯೋ, ಅದರ ಹೊರತಾಗಿ ಅನ್ಯ ಉದ್ದೇಶಕ್ಕೆ ಭೂಮಿ ಬಳಕೆಗೆ ಅವಕಾಶವಿಲ್ಲ. ಸರಕಾರಕ್ಕೆ ಮರಳಿಸಬೇಕೆಂದು ತೀರ್ಪು ನೀಡಿದೆ. ಎಚ್ ಎಂಟಿ ಕಾರ್ಯಾಚರಣೆ ನಿಲ್ಲಿಸಿದ್ದು, ಮುಚ್ಚಿಹೋಗಿದೆ. ಅಂದರೆ, ಭೂಮಿಯನ್ನು ಹಿಂತಿರುಗಿಸಬೇಕಲ್ಲವೇ, ಹೇಗೆ ಮಾರಾಟ ಮಾಡುತ್ತಾರೆ,’’ ಎಂದು ಪ್ರಶ್ನಿಸಿದರು.

ವಿಐಎಸ್ ಎಲ್ ಗೆ 10 ಸಾವಿರ ಕೋಟಿ ಪೈಕಿ 10 ಪೈಸೆಯೂ ಬಂದಿಲ್ಲ

‘‘ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ಚೇತನಗೊಳಿಸಲು 10,000 ಕೋಟಿ ರೂ. ಹೂಡಿಕೆಗೆ ಚಿಂತನೆ ನಡೆದಿದ್ದು, 2 ತಿಂಗಳಲ್ಲಿಡಿಪಿಆರ್ ಸಿದ್ಧವಾಗಲಿದೆ. ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಕುಮಾರಸ್ವಾಮಿಯವರು ಹೇಳಿದ್ದರು. ಈ ಘೋಷಣೆಯಾಗಿ ಇಷ್ಟು ದಿನ ಕಳೆದರೂ 10,000 ಕೋಟಿ ರೂ. ಇರಲಿ 10 ಪೈಸೆ ಕೂಡ ಬಂದಿಲ್ಲ,’’ ಎಂದು ಟೀಕಿಸಿದರು.

‘‘ಕೆಐಒಸಿಎಲ್ ಗಣಿಗಾರಿಕೆ ಮಾಡುವಾಗ ಅನುಮತಿ ಇಲ್ಲದೆ ಲಕ್ಯಾ ಡ್ಯಾಂ ಎತ್ತರ ಹೆಚ್ಚಿಸಿ, ಅರಣ್ಯ ಮತ್ತು ಪರಿಸರಕ್ಕೆ ಹಾನಿ ಮಾಡಿಲ್ಲವೇ? ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಪರವಾನಗಿಯಲ್ಲಿಸೂಚಿಸಿದ್ದಕ್ಕಿಂತ ಹೆಚ್ಚುವರಿ ಪ್ರದೇಶದಲ್ಲಿಗಣಿಗಾರಿಕೆ ನಡೆಸಿದ್ದು ಹಾಗೂ ಅಣೆಕಟ್ಟೆ ಎತ್ತರವನ್ನು ಅನಧಿಕೃತವಾಗಿ ಹೆಚ್ಚಿಸಿದ್ದರಿಂದ 340 ಹೆಕ್ಟೇರ್ ಮೀಸಲು ಅರಣ್ಯ ಮುಳುಗಡೆಯಾಗಿದೆ. ಇದೆಲ್ಲವೂ ಗೊತ್ತಿದ್ದೂ ಕುಮಾರಸ್ವಾಮಿ ಅವರು ಅನಗತ್ಯವಾಗಿ ರಾಜ್ಯ ಸರಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ,’’ ಎಂದರು.