ಒಂದು ಚಿತ್ರ ಮಾಡುವ ಸಂದರ್ಭದಲ್ಲಿನಟ ಮತ್ತು ನಿರ್ದೇಶಕರ ನಡುವೆ ಸಣ್ಣಪುಟ್ಟ ಮನಸ್ತಾಪಗಳಾಗುವುದು, ಅದರಿಂದ ಅವರು ಮಾತು ಬಿಡುವುದು ಸಹಜ. ಆದರೆ, ಒಂದು ಸಣ್ಣ ವೈಮನಸ್ಯದಿಂದಾಗಿ ‘ವೀರಪ್ಪನಾಯ್ಕ’ ಚಿತ್ರದ ಸಂದರ್ಭದಲ್ಲಿಎಸ್ . ನಾರಾಯಣ್ ಮತ್ತು ವಿಷ್ಣುವರ್ಧನ್ ಅವರು ಸುಮಾರು 22 ದಿನಗಳ ಕಾಲ ಮಾತನಾಡಿರಲಿಲ್ಲವಂತೆ. ಈ ವಿಷಯವನ್ನು ಸ್ವತಃ ಎಸ್ . ನಾರಾಯಣ್ ಇತ್ತೀಚೆಗೆ ನಡೆದ ಡಾ. ವಿಷ್ಣುವರ್ಧನ್ ಕಲಾ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಹೇಳಿಕೊಂಡಿದ್ದಾರೆ.ವಿಷ್ಣುವರ್ಧನ್ ಅಭಿನಯದಲ್ಲಿ‘ವೀರಪ್ಪನಾಯ್ಕ’ ಮಾಡುವ ನಿರ್ಧಾರವಾಯ್ತು. ಚಿತ್ರೀಕರಣ ಶುರುವಾಗಿ 10 ದಿನಗಳ ನಂತರ ನನಗೂ ಅವರಿಗೂ ಒಂದು ಸಣ್ಣ ವಿಚಾರದಿಂದ ಮನಸ್ತಾಪವಾಯಿತು. ಆ ಚಿತ್ರಕ್ಕೆ ಒಟ್ಟು 32 ದಿನಗಳ ಕಾಲ ಚಿತ್ರೀಕರಣ ಮಾಡಿದೆವು. ಆದರೆ ಉಳಿದ 22 ದಿನಗಳ ಕಾಲ ನಾವಿಬ್ಬರೂ ಮಾತಾಡಲೇ ಇಲ್ಲ. ಇಬ್ಬರಿಗೂ ಮಾತನಾಡಬೇಕೆಂಬ ಆಸೆ. ಆದರೆ, ಮಾತಾಡುತ್ತಿರಲಿಲ್ಲ. ಮಾತನಾಡದೆ ಚಿತ್ರೀಕರಣವೇ ಮುಗಿದು ಹೋಯ್ತು. ಯಾಕೋ ಹೊಂದಾಣಿಕೆ ಆಗದಿದ್ದರಿಂದ, ಇನ್ನು ಮುಂದೆ ಕೆಲಸ ಮಾಡುವುದು ಬೇಡ ಅಂದುಕೊಂಡೆ. ಸಿನಿಮಾ ಬಿಡುಗಡೆ ಆಗಿ ಇಬ್ಬರಿಗೂ ಒಳ್ಳೆಯ ಹೆಸರು ತಂದುಕೊಟ್ಟಿತು. ಆ ನಂತರ ಎಚ್ .ಡಿ. ಕುಮಾರಸ್ವಾಮಿ ಅವರು ಒಂದು ಹೊಸ ಸಿನಿಮಾ ಮಾಡೋಣ ಎಂದು ವಿಷ್ಣುವರ್ಧನ್ ಅವರ ಬಳಿ ಹೋದರು. ‘ಎಸ್ . ನಾರಾಯಣ್ ಡೇಟ್ ತನ್ನಿ, ಸಿನಿಮಾ ಮಾಡೋಣ’ ಎಂದರಂತೆ ವಿಷ್ಣುವರ್ಧನ್ . ಆದರೆ, ನಾನು ಸಿನಿಮಾ ಮಾಡುವುದಿಲ್ಲಎಂದೆ. ಸುಮಾರು ಮೂರು ತಿಂಗಳ ನಂತರ ಹಲವರಿಂದ ಹೇಳಿಸಿದರು. ಕೊನೆಗೊಂದು ದಿನ ಬೆಳಗ್ಗೆ ಫೋನ್ ಬಂತು. ಖುದ್ದು ವಿಷ್ಣುವರ್ಧನ್ ಫೋನ್ ಮಾಡಿದ್ದರು. ಭೇಟಿ ಆಗಬಹುದಾ ಎಂದರು. ಮನೆಗೆ ಬರ್ತೀನಿ ಎಂದೆ. ಅಷ್ಟು ದೊಡ್ಡ ವ್ಯಕ್ತಿ ಗೇಟ್ ಬಳಿ ನನಗಾಗಿ ಕಾಯುತ್ತಿದ್ದರು. ನನ್ನನ್ನು ತಬ್ಬಿಕೊಂಡು ಏನಾದರೂ ಲೋಪಗಳಾಗಿದ್ದರೆ, ಸರಿಪಡಿಸಿಕೊಳ್ಳೋಣ, ಸಿನಿಮಾ ಮಾಡೋಣ ಎಂದರು. ಆ ನಂತರ ವಿಷ್ಣುವರ್ಧನ್ ಅವರ ಅಭಿನಯದಲ್ಲಿಐದು ಸಿನಿಮಾಗಳನ್ನು ನಿರ್ದೇಶಿಸಿದೆ’ ಎನ್ನುತ್ತಾರೆ ನಾರಾಯಣ್ .