ರಾಜ್ಯ ಸರಕಾರವು ಪಡಿತರ ಸೀಮೆಎಣ್ಣೆ ಬೆಲೆಯನ್ನು ಹೆಚ್ಚಿಸಿದೆ. ಕೇಂದ್ರ ಸರಕಾರವು ಸೀಮೆಎಣ್ಣೆ ಪ್ರಮಾಣವನ್ನು ಕಡಿತಗೊಳಿಸಿದ ಬೆನ್ನಲ್ಲೇ ರಾಜ್ಯ ಸರಕಾರವು ಈ ಕ್ರಮ ಕೈಗೊಂಡಿದೆ. ಇದುವರೆಗೆ ಪಡಿತರ ಸೀಮೆಎಣ್ಣೆಗೆ ಲೀಟರ್ ಗೆ 71 ರೂ.ಇತ್ತು. ಇನ್ನು ಮುಂದೆ ಲೀಟರ್ ಗೆ 77ರೂ.ಗೆ ಮಾರಾಟ ಮಾಡಲು ನಿರ್ದೇಶಿಸಲಾಗಿದೆ.ಕೇಂದ್ರ ಸರಕಾರವು ಮಂಜೂರು ಮಾಡಿರುವ ಸೀಮೆಎಣ್ಣೆ ಪ್ರಮಾಣವನ್ನು 16.08 ಲಕ್ಷ ಲೀಟರ್ ನಷ್ಟು ಕಡಿತಗೊಳಿಸಿರುವುದರಿಂದ ಮೀನುಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಬೆಲೆಯನ್ನು ಕೂಡ ದಿಢೀರನೆ ಹೆಚ್ಚಿಸಿರುವುದರಿಂದ ಮೀನು ಕಾರ್ಮಿಕರ ಸಮಸ್ಯೆಯೂ ದುಪ್ಪಟ್ಟಾಗಲಿದೆ.
ರಾಜ್ಯಕ್ಕೆ ನೀಡುತ್ತಿದ್ದ 56.76 ಲಕ್ಷ ಲೀಟರ್ ಸೀಮೆಎಣ್ಣೆಯನ್ನು ಕಡಿತಗೊಳಿಸಿ ಕೇಂದ್ರ ಸರಕಾರವು 10.68 ಲಕ್ಷ ಲೀಟರ್ ಗೆ ಸೀಮಿತಗೊಳಿಸಿತ್ತು. ಮೂರು ತಿಂಗಳಿಗೆ ಒಂದು ಬಾರಿಯಂತೆ ವರ್ಷದಲ್ಲಿ ನಾಲ್ಕು ಬಾರಿ ಪಡಿತರ ಅಂಗಡಿಗಳ ಮೂಲಕ ಸೀಮೆಎಣ್ಣೆ ವಿತರಿಸಲಾಗುತ್ತದೆ. ಓಣಂ, ಹವಾಮಾನ ವೈಪರೀತ್ಯ, ವಿದ್ಯುತ್ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸೀಮೆಎಣ್ಣೆ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಲು ಕೂಡಾ ರಾಜ್ಯ ಸರಕಾರ ತಯಾರಾಗಿಲ್ಲ.
ರಾಜ್ಯದಲ್ಲಿ 95 ಲಕ್ಷದಷ್ಟು ಪಡಿತರ ಕಾರ್ಡ್ ಗಳಿವೆ. ಇದರಲ್ಲಿ 5.94 ಲಕ್ಷ ಎಎವೈ ಕಾರ್ಡ್ ಮಾಲೀಕರಿಗೆ ಒಂದು ಲೀಟರ್ ಸೀಮೆಎಣ್ಣೆ, ಉಳಿದ ಕಾರ್ಡ್ ದಾರರಿಗೆ ಅರ್ಧ ಲೀಟರ್ ಸೀಮೆಎಣ್ಣೆ ಮೂರು ತಿಂಗಳಿಗೊಂದು ಬಾರಿ ವಿತರಿಸಲಾಗುತ್ತದೆ. ಈ ಬಾರಿ ಮೀನುಗಾರಿಕಾ ಬೋಟುಗಳಿಗೆ ಕೂಡಾ ಸೀಮೆಎಣ್ಣೆ ನೀಡಲು ಕೇಂದ್ರ ನಿರ್ದೇಶಿಸಿರುವುದರಿಂದ ಸೀಮೆಎಣ್ಣೆ ವಿತರಣೆಯು ತಾಳತಪ್ಪಿತು.
ಎಂಜಿನ್ ಸಾಮರ್ಥ್ಯದ ಅನುಸಾರ ಪ್ರತಿಯೊಂದು ದೋಣಿಗೆ 40ರಿಂದ 130 ಲೀಟರ್ ಸೀಮೆಎಣ್ಣೆ ಅಗತ್ಯವಿದೆ. ಸೀಮೆಎಣ್ಣೆ ಪ್ರಮಾಣ ಕಡಿತಗೊಳಿಸಿರುವುದರಿಂದ ಅಗತ್ಯದಷ್ಟು ಸೀಮೆಎಣ್ಣೆ ಲಭಿಸುತ್ತಿಲ್ಲ. ಇದರಿಂದ ಹೆಚ್ಚುವರಿ ಬೆಲೆ ನೀಡಿ ಹೊರಗಿನಿಂದ ಖರೀದಿಸಬೇಕಾದ ಅನಿವಾರ ್ಯತೆ ಮೀನುಕಾರ್ಮಿಕರದ್ದಾಗಿದೆ.