ದುಡ್ಡಿನ ಬೆಳೆ ಅಡಕೆಗೆ ಬರೆ ಮೇಲೆ ಬರೆ ಬೀಳುತ್ತಿದೆ. ಪಾನ್ ಮಸಾಲ ನಿಷೇಧದ ಗುಮ್ಮದ ಜತೆ ಈಗ ಬರದ ಬರೆ ಬೆಳೆಗಾರರನ್ನು ಆತಂಕಕ್ಕೆ ಸಿಲುಕಿಸಿದೆ. ಮಳೆ ಕೊರತೆಯ ಜತೆ ಸೆಪ್ಟಂಬರ್ ತಿಂಗಳಲ್ಲಿಯೇ ಬೇಸಿಗೆಯಂತೆ 33 ಡಿಗ್ರಿಗಿಂತ ಹೆಚ್ಚು ತಾಪಮಾನ ದಾಖಲಾಗುತ್ತಿರುವುದರಿಂದ ಅಡಕೆ ಹರಳುಗಳು ನೆಲ ಕಚ್ಚುತ್ತಿವೆ. ಇನ್ನೊಂದೆಡೆ ಬಿಸಿಲಿನ ತಾಪಕ್ಕೆ ಅಡಕೆ ಗಾತ್ರ ಹೆಚ್ಚದೆ ಕೊಯ್ಲುಮುಂದೆ ಹೋಗುತ್ತಿದೆ. ಇನ್ನು ಅಪಾಯದ ಸಂಗತಿಯೆಂದರೆ ನೀರಿನ ಕೊರತೆಯಿಂದ ಅಡಕೆ ತೋಟಗಳನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ.
ಬರ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುತ್ತಿದ್ದು, ಈಗ ಅಡಕೆ ಬೆಳೆಯ ಸರತಿ ಶುರುವಾಗಿದೆ. ಮಳೆಯಿಲ್ಲದೆ ಬಿಸಿಲು ಹೆಚ್ಚಿರುವುದರಿಂದ ಅಡಕೆ ಗಾತ್ರ ಹೆಚ್ಚುತ್ತಿಲ್ಲ. ಇದರಿಂದ ಕೊಯ್ಲುಕೂಡ ಏರು ಪೇರಾಗುತ್ತಿದೆ. ಸಾಮಾನ್ಯವಾಗಿ ಬಯಲು ಸೀಮೆಯಲ್ಲಿಸೆಪ್ಟೆಂಬರ್ ಹೊತ್ತಿಗೆ ಮೂರನೇ ಕೊಯ್ಲುಮುಗಿದು ಕೊನೆಯ ನಾಲ್ಕನೇ ಕೊಯ್ಲುಆರಂಭವಾಗಿ ಶೇ.25ರಷ್ಟು ಮುಗಿಯುತ್ತಿತ್ತು. ಆದರೆ ಮಳೆ ಕೊರತೆ, ಬಿಸಿಲಿನ ಪರಿಣಾಮ ಅಡಕೆ ಗಾತ್ರ ಆಗುತ್ತಿಲ್ಲ. ಹಾಗಾಗಿ ಈಗ ತಾನೇ ಮೂರನೇ ಕೊಯ್ಲುಮುಗಿದು, ನಾಲ್ಕನೇ ಕೊಯ್ಲುಆರಂಭವಾಗಬೇಕಿದೆ. ನೀರಿನ ಕೊರತೆ ಇಲ್ಲದ ಶೇ.20ರಷ್ಟು ತೋಟಗಳಲ್ಲಿಮಾತ್ರ ಸಕಾಲಕ್ಕೆ ಕೊಯ್ಲುಆಗಿದೆ ಎನ್ನುತ್ತಿದೆ ತೋಟಗಾರಿಕೆ ಇಲಾಖೆ.
7 ತಿಂಗಳು ಬಿಸಿಲು ತಾಪದ ಭೀತಿ:
ಅಡಕೆಗೆ ಬಿಸಿಲಿನ ತಾಪ 26 ಡಿಗ್ರಿ ಒಳಗಿದ್ದರೆ ಒಳ್ಳೆಯದು, 30 ಡಿಗ್ರಿ ದಾಟಿದರೆ ಸಮಸ್ಯೆ ಆಗಲಿದೆ. ಈ ಕಾರಣಕ್ಕೆ ಬೇಸಿಗೆ ದಿನಗಳಲ್ಲಿಅಡಕೆ ತೋಟಗಳು ನಲುಗುತ್ತವೆ. ಪ್ರತಿ ವರ್ಷ ಜನವರಿ ತಿಂಗಳ ನಂತರ 30 ಡಿಗ್ರಿ ದಾಟುತ್ತಿತ್ತು, ಆದರೆ ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿಯೇ ತಾಪಮಾನ 30 ಡಿಗ್ರಿ ದಾಟಿದೆ. ಈಗಾಗಲೇ ಜಿಲ್ಲೆಯ ನೀರಾವರಿ ಹೊರತಾದ ಮಾಯಕೊಂಡ, ಆನಗೋಡು, ಚನ್ನಗಿರಿಯ ಸಂತೆಬೆನ್ನೂರು, ದೇವರಹಳ್ಳಿ ಹಾಗೂ ಜಗಳೂರು ತಾಲೂಕಿನಲ್ಲಿಅಡಕೆ ತೋಟಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಇನ್ನು ಜಿಲ್ಲಾದ್ಯಂತ ಬಿಸಿಲಿಗೆ ಹರಳುಗಳು ಉದುರುತ್ತಿರುವ ಬಗ್ಗೆ ವರದಿ ಆಗುತ್ತಿದೆ.
ಎಲ್ ನಿನೋ ಪರಿಣಾಮ ಚಳಿಗಾಲದಲ್ಲೂಚಳಿ ಕಡಿಮೆಯಿದ್ದು ಬಿಸಿಲು ಹೆಚ್ಚಿರುತ್ತದೆ ಎಂಬ ವರದಿಗಳಿವೆ. ಹಾಗಾಗಿ ಈಗ ಮುಂದಿನ ಮೇ ವರೆಗೆ ಅಂದರೆ 7 ತಿಂಗಳು ಬಿಸಿಲಿನ ತಾಪ ಇರಲಿದೆ. ಇಷ್ಟು ದೀರ್ಘಕಾಲ ಬಿಸಿಲಿನ ತಾಪಕ್ಕೆ ಅಡಕೆ ತೋಟಗಳು ಸಿಲುಕಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಒಂದೊಮ್ಮೆ ತೋಟ ಕಳೆದುಕೊಂಡರೆ ಬಹು ದೊಡ್ಡ ಆದಾಯದ ಮೂಲ ಹೋಗಲಿದೆ. ಪ್ರತಿ ವರ್ಷ ಸಾವಿರಾರು ಕೋಟಿ ಹಣದ ಹರಿವು ನಿಂತು ಹೋಗಲಿದ್ದು, ಆರ್ಥಿಕತೆ ದೃಷ್ಟಿಯಿಂದಲೂ ಇದು ಅಪಾಯಕಾರಿ ಬೆಳವಣಿಗೆಯಾಗಿದೆ.
------
* ರಾಜ್ಯದಲ್ಲಿನಂ.1 ದಾವಣಗೆರೆ
- ಅಡಕೆ ಪ್ರದೇಶ 109672.7 (ಹೆ)
- ಇಳುವರಿ ಪ್ರದೇಶ 84784 (ಹೆ)
* ವಹಿವಾಟು
- ಎಪಿಎಂಸಿ 1188.72 ಕೋಟಿ ರೂ.(ವಾರ್ಷಿಕ)
- ಹೊರಗಿನ ವ್ಯಾಪಾರ ಸೇರಿ 2000 ಕೋಟಿ ರೂ.
-----
ರಾಜ್ಯದಲ್ಲಿ
-ಇಳುವರಿ ಪ್ರದೇಶ 614216 ಹೆ.
-933006 ಮೆ.ಟನ್
----
7 ವರ್ಷದಲ್ಲಿ4.76 ಲಕ್ಷ ಹೆ. ಹೆಚ್ಚಳ
ಅಡಕೆ ಬೆಲೆ ಹೆಚ್ಚಿದಂತೆ ಪ್ರದೇಶವೂ ಹೆಚ್ಚುತ್ತಿದ್ದು 7 ವರ್ಷದಲ್ಲಿರಾಜ್ಯದಲ್ಲಿ4.76 ಲಕ್ಷ ಹೆಚ್ಚಿದೆ. 2018 ರಲ್ಲಿರಾಜ್ಯದಲ್ಲಿ2,27,000 ಹೆಕ್ಟೇರ್ ಇತ್ತು, 2025 ರ ಹೊತ್ತಿಗೆ 7,55,674 ಹೆ.ಗೆ ಏರಿಕೆಯಾಗಿದೆ.
----
ಬಾಕ್ಸ್ ...
ಐದಾರು ಸಾವಿರ ಇಳಿದ ಬೆಲೆ
‘ಬರದ ಹೊಡೆತದ ಜತೆ ಪಾನ್ ಮಸಾಲ ನಿಷೇಧದ ಗುಮ್ಮ ಹೊರ ಬೀಳುತ್ತಿದ್ದಂತೆ ಕ್ವಿಂಟಲ್ ಗೆ 56 ಸಾವಿರ ರೂ.ದಾಟಿದ್ದ ಬೆಲೆ 49 ಸಾವಿರಕ್ಕೆ ಇಳಿದಿದೆ. ಸರಕಾರ ಪಾನ್ ಮಸಾಲಾ ನಿಷೇಧ ಎಂದು ಎಲ್ಲೂಹೇಳಿಲ್ಲ, ಅಡಕೆ ಮತ್ತು ಹೊಗೆಸೊಪ್ಪು ಒಂದೇ ಕಡೆ ಮಾರಾಟ ಮಾಡಬಾರದು ಎಂದು ಹೇಳಿದೆ. ಆದರೆ ಇದು ಪಾನ್ ಮಸಾಲಾ ನಿಷೇಧ ಎಂಬಂತೆ ಸುದ್ದಿ ಹಬ್ಬಿದ್ದರಿಂದ ಬೆಲೆ ಕುಸಿದಿದೆ ಎನ್ನುತ್ತಾರೆ ತುಮ್ಕೋಸ್ ಅಧ್ಯಕ್ಷ ಎಚ್ .ಎಸ್ . ಶಿವಕುಮಾರ್ .
---
ಮಳೆ ಕೊರತೆ ಜತೆಗೆ ಬಿಸಿಲು 32 ಡಿಗ್ರಿ ದಾಟಿರುವುದರಿಂದ ಅಡಕೆ ಬೆಳೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಪ್ರತಿ ರೈತ ಕೇಂದ್ರ ವ್ಯಾಪ್ತಿಯಲ್ಲಿನೀರಿನ ನಿರ್ವಹಣೆ, ತೋಟಗಳ ರಕ್ಷಣೆ ಕುರಿತು ತರಬೇತಿ ನೀಡುತ್ತಿದ್ದೇವೆ, ಈವರೆಗೂ 50 ತರಬೇತಿ ನೀಡಿದ್ದೇವೆ.
- ರಾಘವೇಂದ್ರ ಪ್ರಸಾದ್ ಡಿಡಿ, ತೋಟಗಾರಿಕೆ ಇಲಾಖೆ.
----
ಬಿಸಿಲಿಗೆ ಅಡಕೆ ತೋಟಗಳು ಸಂಕಷ್ಟಕ್ಕೆ ಸಿಲುಕಿವೆ, ಈ ಬೇಸಿಗೆಯಲ್ಲಿಅಡಕೆ ತೋಟ ಉಳಿಸಿಕೊಳ್ಳುವುದು ಕಷ್ಟ ಇದೆ. ಒಂದು ಅಡಕೆ ಗಿಡಕ್ಕೆ ದಿನಕ್ಕೆ 15-20 ಲೀಟರ್ ನೀರು ಸಾಕು, ಹಾಗಾಗಿ ನೀರನ್ನು ಪೋಲು ಮಾಡಬಾರದು.
- ಎಚ್ .ಎಸ್ . ಶಿವಕುಮಾರ್ ಅಧ್ಯಕ್ಷರು, ತುಮ್ಕೋಸ್ .
--
* ತೋಟಗಾರಿಕೆ ಇಲಾಖೆ ಸಲಹೆ
- ತೋಟಗಳಲ್ಲಿಹೊದಿಕೆ ಮಾಡಿ
- ಈಗ ರಸಗೊಬ್ಬರ ಹಾಕಬೇಡಿ.
- ನೀರಿಗೆ ಡ್ರಿಪ್ ವ್ಯವಸ್ಥೆ ಇರಲಿ.
- ಉಳುಮೆ ಮಾಡುವುದು ಬೇಡ.
---
17 ಡಿವಿಜಿ ಅರೆಕಾ 1
ಚನ್ನಗಿರಿ ತಾಲೂಕಿನ ಕಾರಿಗನೂರು ಕ್ರಾಸ್ ನಲ್ಲಿಬಿಸಿಲಿಗೆ ನಲುಗಿರುವ ಅಡಕೆ ತೋಟ.
---
17 ಡಿವಿಜಿ ಅರೆಕಾ 1ಎ
ದಾವಣಗೆರೆ ತಾಲೂಕು ಕುಕ್ಕವಾಡದಲ್ಲಿಅಡಕೆ ಬೆಳೆ ಬಾಡುತ್ತಿರುವುದು.