*ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದಿಂದ ನಿವೃತ್ತ ಪ್ರಿನ್ಸಿಪಾಲ್ ಸುನಿತ್ ಕುಮಾರ್ ದಂಪತಿಗೆ ಗೌರವ

Contributed by: ajithswarga@gmail.com|Vijaya Karnataka•
retired principal sunith kumar d honored by the community
ಪೆರ್ಲ: ಪೆರ್ಲ ನಾಲಂದ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ, ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಸುನಿತ್ ಕುಮಾರ್ ಡಿ. ದಂಪತಿಗಳನ್ನು ಅವರ ಮನೆಗೆ ತೆರಳಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಸುನಿತ್ ಕುಮಾರ್ ಡಿ. ಅವರು ಬಳಿಕ ಕೆಲಕಾಲ ಪೆರ್ಲ ನಾಲಂದ ಕಾಲೇಜಿನ ಪ್ರಿನ್ಸಿಪಾಲ್ ಆಗಿಯೂ ಸೇವೆ ಸಲ್ಲಿಸಿದ್ದರು.
ಗೌರವ ಸ್ವೀಕರಿಸಿ ಮಾತನಾಡಿದ ಸುನಿತ್ ಕುಮಾರ್ , ‘ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಪಠ್ಯಜ್ಞಾನವನ್ನು ನೀಡುವವರಲ್ಲ. ಅದರೊಂದಿಗೆ ಉತ್ತಮ ಚಿಂತನೆ, ಶಿಸ್ತು, ಮಾನವೀಯ ಮೌಲ್ಯಗಳು, ಆತ್ಮವಿಶ್ವಾಸ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ನಿಜವಾದ ಮಾರ್ಗದರ್ಶಕರಾಗಿದ್ದಾರೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ’ ಎಂದು ತಿಳಿಸಿದರು.

ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಶಂಕರ ಖಂಡಿಗೆ ಮಾತನಾಡಿ, ‘ಶಿಕ್ಷಕರ ಸೇವೆ ಸಮಾಜದ ಭವಿಷ್ಯ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿದೆ. ಅವರ ತ್ಯಾಗ, ಪರಿಶ್ರಮ ಮತ್ತು ಮಾರ್ಗದರ್ಶನವನ್ನು ನಾವೆಲ್ಲರೂ ಸದಾ ಗೌರವಿಸಬೇಕು’ ಎಂದರು.

ಮಲಯಾಳಂ ಉಪನ್ಯಾಸಕಿ ವಿನೀಶಾ ಹಾಗೂ ಎನ್ನೆಸ್ಸೆಸ್ ಯೋಜನಾಧಿಕಾರಿ ವರ್ಷಿತ್ ಕೆ.ಉಪಸ್ಥಿತರಿದ್ದರು. ಕಾಲೇಜಿನ ಎನ್ನೆಸ್ಸೆಸ್ ಸ್ವಯಂಸೇವಕರು ಸಕ್ರಿಯವಾಗಿ ಪಾಲ್ಗೊಂಡಿದ್ದ ಈ ಕಾರ್ಯಕ್ರಮ, ಶಿಕ್ಷಕರ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವಲ್ಲಿಅತ್ಯಂತ ಅರ್ಥಪೂರ್ಣವಾಗಿ ಮೂಡಿಬಂತು.

7 ಪಿಎಲ್ ಸುನಿತ್ : ನಿವೃತ್ತ ಪ್ರಿನ್ಸಿಪಾಲ್ ಸುನಿತ್ ಕುಮಾರ್ ಡಿ. ದಂಪತಿಗಳನ್ನು ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು. )