ರೈತಪರ ಹೋರಾಟಗಾರ ಮಹೇಶ ಬ.ಕಲಘಟಗಿ ಎಚ್ಚರಿಕೆ
ರೈತನಿಗೆ ವಂಚನೆ: ಕ್ರಮ ಕೈಗೊಳ್ಳದಿದ್ದರೆ ಸತ್ಯಾಗ್ರಹ
ಕುಂದಗೋಳ: ದಾವಣಗೆರೆ ಮೂಲದ ವ್ಯಕ್ತಿಯೊಬ್ಬ ಸ್ಥಳೀಯ ರೈತರೊಬ್ಬರಿಂದ ಲಕ್ಷಾಂತರ ಮೌಲ್ಯದ ಮೆಕ್ಕೆಜೋಳ ಖರೀದಿಸಿ ವಂಚಿಸಿರುವ ಪ್ರಕರಣದಲ್ಲಿಕುಂದಗೋಳ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರೇ ಆರೋಪಿಯೊಂದಿಗೆ ಶಾಮೀಲಾಗಿದ್ದಾರೆ ಎಂದು ರೈತಪರ ಹೋರಾಟಗಾರ ಮಹೇಶ ಬ.ಕಲಘಟಗಿ ಗಂಭೀರ ಆರೋಪ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿಈ ಕುರಿತು ವಿವರ ನೀಡಿದ ಅವರು, ದಾವಣಗೆರೆ ಮೂಲದ ಕೆ.ಎಸ್ .ಪ್ರಶಾಂತ ಎಂಬ ವ್ಯಕ್ತಿ ಕಳೆದ 2026 ಜನವರಿ 4 ರಂದು ಸಂಶಿ ಗ್ರಾಮದ ರೈತ ಶಿವರಾಜ ಗಂಗಪ್ಪ ಕೊಡಿವಾಡ ಎಂಬುವರಿಂದ ಪ್ರತಿ ಕ್ವಿಂಟಲ್ ಗೆ 2,200 ರೂ. ದರದಂತೆ ಒಟ್ಟು 1,250 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಿ 10,00,000 ರೂ.ಗಳನ್ನು ಮಾತ್ರ ಪಾವತಿಸಿ, ಬಾಕಿ 18,00,000 ರೂ.ಗಳನ್ನು ನೀಡದೇ ಇಲ್ಲಿಯವರೆಗೂ ವಂಚಿಸುತ್ತಾ ಬಂದಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಂಚನೆ ಕುರಿತು ಸಂತ್ರಸ್ತ ರೈತರು 2026 ಮಾರ್ಚ್ 6 ರಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್ ಪಿ) ದೂರು ಸಲ್ಲಿಸಿದ್ದರು. ಎಸ್ ಪಿ ಅವರು ತಕ್ಷಣವೇ ಕುಂದಗೋಳ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರಿಗೆ ಕರೆ ಮಾಡಿ ದೂರನ್ನು ಸ್ವೀಕರಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ, ಸಂತ್ರಸ್ತ ರೈತ ಠಾಣೆಗೆ ಹೋದಾಗ ಪಿಎಸ್ ಐ ಅವರು ಬೇಜವಾಬ್ದಾರಿಯಿಂದ ವರ್ತಿಸಿದ್ದಲ್ಲದೆ, ತಮಗೆ ಹಾಗೂ ಆರೋಪಿಗೆ ಅನುಕೂಲವಾಗುವ ರೀತಿಯಲ್ಲಿದೂರು ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಆರೋಪಿಯು ಈಗಾಗಲೇ ಇಲಾಖೆಯ ಕಣ್ಣು ತಪ್ಪಿಸಿ ಹಲವಾರು ರೈತರಿಗೆ ಇದೇ ರೀತಿ ವಂಚಿಸುತ್ತಾ ಬಂದಿದ್ದಾನೆ. ಕುಂದಗೋಳ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರ ನಡೆ ಮತ್ತು ವರ್ತನೆ ಗಮನಿಸಿದರೆ ಆರೋಪಿಯೊಂದಿಗೆ ಶಾಮೀಲಾಗಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ. ವಾರದೊಳಗಾಗಿ ಸಂಬಂಧಪಟ್ಟ ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸಿ, ಬಾಕಿ ಹಣ ಕೊಡಿಸದಿದ್ದಲ್ಲಿಕುಂದಗೋಳ ಪೊಲೀಸ್ ಸ್ಟೇಷನ್ ಎದುರಿಗೆ ವಿವಿಧ ರೈತಪರ ಹಾಗೂ ಕನ್ನಡಪರ ಸಂಘಟನೆಗಳ ಹೋರಾಟಗಾರರೊಂದಿಗೆ ಒಗ್ಗೂಡಿ ಆಮರಣಾಂತರ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿಶಿವು ಎಂ.ಕರಡಿ, ರಮೇಶ ಇಂಗಳಗಿ, ಈಶ್ವರಗೌಡ ಪಾಟೀಲ, ಶಿವು ಕೊಡ್ಲಿವಾಡ, ವೆಂಕಬಗೌಡ ಶಾನವಾಡ, ಅಡಿವೇಪ್ಪಗೌಡ ಪಾಟೀಲ, ನವೀನ ಪಾಟೀಲ ಇತರರಿದ್ದರು.
ಫೋಟೋ 5 ಕೆ ಎನ್ ಡಿ 1
ಕುಂದಗೋಳ ಪಟ್ಟಣದ ಪ್ರವಾಸಿ ಮಂದಿರದಲ್ಲಿರೈತಪರ ಹೋರಾಟಗಾರ ಮಹೇಶ ಬ.ಕಲಘಟಗಿ ಮಾತನಾಡಿದರು.

