ವಿಕ ಸುದ್ದಿಲೋಕ ಮೈಸೂರು ಮಳೆ ಹಾಗೂ ಫ್ಲಡ್ ಲೈಚ್ ತಾಂತ್ರಿಕ ದೋಷದ ನಡುವೆಯೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿಶಿವಮೊಗ್ಗ ಯೋಧಾಸ್ ವಿರುದ್ಧ 16 ರನ್ ಗಳ ಗೆಲುವು ದಾಖಲಿಸಿತು. ಎಸ್ ಡಿಎನ್ ಆರ್ ಡಬ್ಲ್ಯು ಕ್ರೀಡಾಂಗಣದಲ್ಲಿಭಾನುವಾರ ನಡೆದ ಪಂದ್ಯವು ಮಳೆ ಹಾಗೂ ಬೆಳಕಿನ ಸಮಸ್ಯೆಯಿಂದಾಗಿ 10 ಓವರ್ ಗಳಿಗೆ ಸೀಮಿತಗೊಂಡಿತು. ವಿಜೆಡಿ ನಿಯಮದಂತೆ 136 ರನ್ ಗಳ ಪರಿಷ್ಕೃತ ಗುರಿ ಪಡೆದ ಶಿವಮೊಗ್ಗ ಯೋಧಾಸ್ 7 ವಿಕೆಟ್ ಗೆ 119 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಬೆಂಗಳೂರು ಪರ ಪ್ರವೀಣ್ ದುಬೆ, ಶುಭಾಂಗ್ ಹೆಗ್ಡೆ ಹಾಗೂ ಶ್ರೀವತ್ಸ ಆಚಾರ್ಯ ತಲಾ ಎರಡು ವಿಕೆಟ್ ಪಡೆದು ಶಿವಮೊಗ್ಗದ ಹೋರಾಟಕ್ಕೆ ಕಡಿವಾಣ ಹಾಕಿದರು. ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು ತಂಡಕ್ಕೆ ರೋಹನ್ ಪಾಟೀಲ (ಅಜೇಯ 51) ಹಾಗೂ ಕೆ.ಎಲ….ಶ್ರೀಜಿತ್ (ಅಜೇಯ 47) 45 ಎಸೆತಗಳಲ್ಲಿ97 ರನ್ ಗಳ ಮುರಿಯದ ಜೊತೆಯಾಟ ನೀಡಿದರು. ಭುವನ್ ರಾಜು 23 ರನ್ ಗಳ ಕೊಡುಗೆ ನೀಡಿದರು. ರೋಹನ್ ಪಾಟೀಲ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಫ್ಲಡ್ ಲೈಚ್ ದೋಷಕ್ಕೆ 25 ನಿಮಿಷ ಆಟ ಸ್ಥಗಿತ: ಬೆಂಗಳೂರು 9.2 ಓವರ್ ಗಳಲ್ಲಿ1 ವಿಕೆಟ್ ಗೆ 116 ರನ್ ಗಳಿಸಿದ್ದ ವೇಳೆ ಫ್ಲಡ್ ಲೈಟ್ ನ ಒಂದು ಭಾಗದ ದೀಪಗಳು ಮಂಕಾದ ಕಾರಣ ಪಂದ್ಯವನ್ನು 25 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಯಿತು. ದುರಸ್ತಿ ಬಳಿಕ ಆಟ ಮರು ಆರಂಭಗೊಂಡರೂ ಸಮಯದ ಅಭಾವದಿಂದ 14 ಓವರ್ ಗಳ ಪಂದ್ಯವನ್ನು 10 ಓವರ್ ಗಳಿಗೆ ಕಡಿತಗೊಳಿಸಲಾಯಿತು.

