ತಾ.ಪಂ. ಕಚೇರಿಯಲ್ಲಿಅಗ್ನಿ ಅವಘಡ, ಸಭಾಂಗಣ ಭಸ್ಮ
ವಿಕ ಸುದ್ದಿಲೋಕ ಹೊಸಪೇಟೆ (ವಿಜಯನಗರ)
ಇಲ್ಲಿನ ಸಂಡೂರು ರಸ್ತೆಯಲ್ಲಿರುವ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿಮಂಗಳವಾರ ರಾತ್ರಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಕಚೇರಿಯ ಮೊದಲ ಮಹಡಿಯಲ್ಲಿದ್ದ ಸಭಾಂಗಣ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.
ಕಚೇರಿಯ ಮೊದಲ ಮಹಡಿಯಿಂದ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಜ್ವಾಲೆ ಇಡೀ ಸಭಾಂಗಣವನ್ನು ಆವರಿಸಿಕೊಂಡಿದೆ. ಸಭಾಂಗಣದಲ್ಲಿದ್ದ ದುಬಾರಿ ಪೀಠೋಪಕರಣಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಧಗಧಗನೆ ಉರಿದಿವೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿಯಶಸ್ವಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಹೊಸಪೇಟೆ ತಹಸೀಲ್ದಾರ್ ಶ್ರುತಿ, ಸಂಚಾರ ಠಾಣೆಯ ಸಿಪಿಐ ಹುಲುಗಪ್ಪ ಹಾಗೂ ತಾಪಂ ಇಒ ಆಲಂ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿಯ ತೀವ್ರತೆಗೆ ಕಚೇರಿಯ ಪ್ರಮುಖ ದಾಖಲೆಗಳು ಸುಟ್ಟು ಕರಕಲಾಗಿರುವ ಶಂಕೆ ವ್ಯಕ್ತವಾಗಿದೆ.
ಬೆಂಕಿ ಅವಘಡದ ಹಿಂದೆ ಕಿಡಿಗೇಡಿಗಳ ಕೈವಾಡವಿರಬಹುದೇ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಬೆಂಕಿ ಹಚ್ಚಿದ್ದಾರೆಯೇ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿಕೇಳಿಬರುತ್ತಿವೆ.

