ಅಮೆರಿಕ ಅಧ್ಯಕ್ಷರು ಇರಾನ್ ಜೊತೆ ಮಾತುಕತೆಗೆ ಸಿದ್ಧತೆ ತೋರಿದ್ದಾರೆ. ಯುದ್ಧವನ್ನು ಕೊನೆಗಾಣಿಸಲು ಷರತ್ತುಗಳೊಂದಿಗೆ ಮಾತುಕತೆ ನಡೆಸಲು ಒಲವು ತೋರಿಸಿದ್ದಾರೆ. ಆದರೆ, ಇರಾನ್ ತನ್ನ ದಾಳಿಗಳನ್ನು ಮುಂದುವರಿಸಿದೆ. ಅಮೆರಿಕ ಮತ್ತು ಇರಾನ್ ನಡುವಿನ ದಾಳಿ-ಪ್ರತಿದಾಳಿಗಳು ನಿರಂತರವಾಗಿ ನಡೆಯುತ್ತಿವೆ. ಈ ಪರಿಸ್ಥಿತಿ ಜಾಗತಿಕ ಇಂಧನ ಪೂರೈಕೆಯಲ್ಲಿ ಆತಂಕ ಸೃಷ್ಟಿಸಿದೆ.
ಅಮೆರಿಕ-ಇರಾನ್ ನಡುವಿನ ಯುದ್ಧ 11ನೇ ದಿನಕ್ಕೆ ಕಾಲಿಟ್ಟಿದ್ದು, ದಾಳಿ-ಪ್ರತಿದಾಳಿಗಳು ಮುಂದುವರಿದಿವೆ. ಈ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ಇರಾನ್ ಜೊತೆ ಷರತ್ತುಬದ್ಧ ಮಾತುಕತೆಗೆ ಸಿದ್ಧ ಎಂದು ಹೇಳುವ ಮೂಲಕ ಸಂಧಾನದ ಸುಳಿವು ನೀಡಿದ್ದಾರೆ. ಈ ಹಿಂದೆ ಇರಾನ್ ಸಂಪೂರ್ಣ ನಾಶವಾಗುವವರೆಗೂ ಬಿಡುವುದಿಲ್ಲ ಎಂದಿದ್ದ ಟ್ರಂಪ್ ಅವರ ನಿಲುವು ಬದಲಾಗಿದೆ. ಇಂಧನ ಭೀತಿ, ಯುದ್ಧದ ಹೆಚ್ಚುತ್ತಿರುವ ವೆಚ್ಚ, ಮತ್ತು ಇರಾನ್ ಸರ್ಕಾರದ ಬಿಗಿ ನಿಲುವು ಇದಕ್ಕೆ ಕಾರಣ ಎನ್ನಲಾಗಿದೆ. ಆದರೆ, ಅಮೆರಿಕ ರಕ್ಷಣಾ ಇಲಾಖೆ ಕಾರ್ಯದರ್ಶಿ ಇದಕ್ಕೆ ವಿರುದ್ಧ ಹೇಳಿಕೆ ನೀಡಿರುವುದು ಗೊಂದಲ ಸೃಷ್ಟಿಸಿದೆ.
ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, "ಸಮರ ಆರಂಭದ ಬಳಿಕ ಇರಾನಿಯನ್ ಆಡಳಿತದ ಕೆಟ್ಟ ಪ್ರತಿಕ್ರಿಯೆ ಗಮನಿಸಿದ್ದೇನೆ. ಜಗತ್ತಿನ ಹಿತದೃಷ್ಟಿಯಿಂದ ಸಂಘರ್ಷ ಕೊನೆಗಾಣಿಸಲು ಬಯಸಿದ್ದೇವೆ. ಆದರೆ, ಷರತ್ತುಬದ್ಧ ಮಾತುಕತೆಗೆ ಇರಾನ್ ಮುಂದೆ ಬರಬೇಕು," ಎಂದು ತಿಳಿಸಿದರು. ಅಮೆರಿಕದ ಷರತ್ತುಗಳೇನು ಎಂಬುದರ ಬಗ್ಗೆ ಅವರು ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದರು. "ಇರಾನ್ ವಿರುದ್ಧದ ಹೋರಾಟ ನಿರೀಕ್ಷೆಯಂತೆ ನಡೆಯುತ್ತಿದೆ. ಇರಾನಿಯನ್ ಹೊಸ ಆಡಳಿತ ಜನರ ಆಯ್ಕೆಯಲ್ಲ. ಸದ್ಯದ ಪರಿಸ್ಥಿತಿಯಲ್ಲಿಖಮೇನಿ ಪುತ್ರ ಮೊಜ್ತಬಾ ಖಮೇನಿ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ," ಎಂದೂ ಟ್ರಂಪ್ ಹೇಳಿದರು.ಈ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಧ್ಯಪ್ರಾಚ್ಯದ ತೈಲಾಗಾರಗಳು ಹೊತ್ತಿ ಉರಿಯುತ್ತಿವೆ. ಇದರಿಂದ ಉತ್ಪಾದನೆ ಸ್ಥಗಿತಗೊಂಡು ಭಾರತ ಸೇರಿದಂತೆ ವಿಶ್ವದಾದ್ಯಂತ ಇಂಧನ ಅಭಾವದ ಭೀತಿ ಎದುರಾಗಿದೆ.
ಇತ್ತ, ಅಮೆರಿಕದ ರಕ್ಷಣಾ ಇಲಾಖೆ ಕಾರ್ಯದರ್ಶಿ ಪೀಟ್ ಹೆಗ್ಸತ್, "ಇರಾನ್ ವಿರುದ್ಧದ ದಾಳಿ ಮತ್ತಷ್ಟು ತೀವ್ರಗೊಳ್ಳಲಿದೆ. ಕೊಲ್ಲಿಸೇರಿದಂತೆ ಹಲವು ದೇಶಗಳ ಮೇಲೆ ನಡೆಸಿದ ಪ್ರತೀಕಾರದ ದಾಳಿಯನ್ನು ಹತ್ತಿಕ್ಕಲಾಗುತ್ತಿದೆ. ಶತ್ರು ದೇಶ ಶರಣಾಗುವ ತನಕ ಯುದ್ಧ ನಿಲ್ಲಿಸುವುದಿಲ್ಲ. ಮುಂದೆ ಇನ್ನಷ್ಟು ಪ್ರಬಲ ದಾಳಿ ನಡೆಯಲಿದೆ," ಎಂದು ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ, "ಕಳೆದ 11 ದಿನದಲ್ಲಿ ಇರಾನ್ ನಡ ಮುರಿದಿದ್ದೇವೆ. ನಮ್ಮ ಗುರಿ ಇರಾನಿಯನ್ ಪ್ರಸ್ತುತ ಆಡಳಿತವನ್ನು ಹೊರಗಟ್ಟುವುದಾಗಿದೆ. ಇರಾನ್ ಜನರನ್ನು ದಬ್ಬಾಳಿಕೆಯಿಂದ ಮುಕ್ತಗೊಳಿಸುವ ತನಕ ವಿರಮಿಸುವುದಿಲ್ಲ," ಎಂದು ಘೋಷಿಸಿದ್ದಾರೆ.
ಇರಾನ್ ಕೂಡ ತನ್ನ ಪ್ರಹಾರವನ್ನು ತೀವ್ರಗೊಳಿಸಿದೆ. ಕೊಲ್ಲಿ ರಾಷ್ಟ್ರಗಳಾದ ಬಹರೇನ್, ಸೌದಿ ಅರೇಬಿಯಾ, ಯುಇಎ, ಕುವೈತ್, ಕತಾರ್, ಟರ್ಕಿ ಮೇಲೆ ಮಂಗಳವಾರವೂ ವೈಮಾನಿಕ ದಾಳಿ ನಡೆಸಿದೆ. ಬಹರೇನ್‌ನ ಮನಾಮಾ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ. ಯುಇಎಯ ಕೈಗಾರಿಕಾ ಪ್ರದೇಶ ರುವೈಸ್ ಮೇಲೆ ಇರಾನ್ ದಾಳಿ ನಡೆಸಿದ್ದು, ಪೆಟ್ರೋಲಿಯಂ ಘಟಕ ಹೊತ್ತಿ ಉರಿದಿದೆ.
ಮತ್ತೊಂದೆಡೆ, ಅಮೆರಿಕ-ಇಸ್ರೇಲ್ ಪಡೆಗಳು ಇರಾನ್ ದಕ್ಷಿಣದಲ್ಲಿರುವ ಕೆರ್ಮನ್ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿವೆ. ಈ ದಾಳಿಯಲ್ಲಿ ಮೂರು ನಾಗರಿಕ ವಿಮಾನಗಳು ಹಾನಿಗೀಡಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.