ವಿಕ ಸುದ್ದಿಲೋಕ ಕಲಬುರಗಿ ಗುಲ್ಬರ್ಗ ವಿಶ್ವವಿದ್ಯಾಲಯ ಹಣಕಾಸು ವಿಭಾಗದಲ್ಲಿಎಚ್ ಆರ್ ಎಂಎಸ್ ಶಾಖೆಯಲ್ಲಿನ ನಡೆದಿದ್ದ ಅಕ್ರಮದ ಕುರಿತು ವಿಶ್ವವಿದ್ಯಾಲಯ ಠಾಣೆಯಲ್ಲಿಕೊನೆಗೂ ಎಫ್ ಐಆರ್ ದಾಖಲಾಗಿದೆ. ವಿವಿಗೆ ವಂಚನೆಯಾದ ಪ್ರಕರಣದ ಕುರಿತು 2025ರ ಸೆ.9ರಂದು ವಿವಿ ಹಣಕಾಸು ಅಧಿಕಾರಿ ಜಯಾಂಬಿಕಾ ಅವರು ಕುಲಸಚಿವರಿಗೆ ಪತ್ರ ಬರೆಯುವ ಮೂಲಕ ಪ್ರಕರಣ ಹೊರ ಬಿದ್ದಿತ್ತು. ಅದಾದ ನಂತರ ಇಲ್ಲಿವರೆಗೆ ಆರೋಪಿಯಾಗಿದ್ದ ಶರಣಬಸಪ್ಪ ಹೂಗಾರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಈ ಕುರಿತು ವಿಜಯ ಕರ್ನಾಟಕ ಮಾ.6ರಂದು ‘ ಗುಲ್ಬರ್ಗ ವಿವಿ ನಡೆ; ಸಂಶಯಕ್ಕೆ ಎಡೆ!’ ವರದಿ ಮಾಡಿತ್ತು. ವರದಿ ಪ್ರಕಟವಾದ ಐದು ದಿನದಲ್ಲಿಎಫ್ ಐಆರ್ ದಾಖಲಾಗಿದೆ. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ ಲಂಡನಕರ್ ನೀಡಿದ ದೂರಿನ ಆಧಾರದಲ್ಲಿಪ್ರಕರಣ ದಾಖಲಾಗಿದೆ. ದೂರಿನಲ್ಲಿಏನಿದೆ?: ಎಚ್ ಆರ್ ಎಂಎಸ್ ಶಾಖೆಯ ಟೆಕ್ನಿಷಿಯನ್ ಶರಣಬಸಪ್ಪ ಹೂಗಾರ ವಿವಿ ಸಿಬ್ಬಂದಿಯ ಸಂಬಳದ ಬಿಲ್ ತಯಾರು ಮಾಡುತ್ತಿದ್ದರು. ಈ ವೇಳೆ ವಿವಿ ಕಟ್ಟಡ ನಿರ್ಮಾಣದ ವಿಭಾಗದ ಮೇಸ್ತ್ರಿ ವಿಶಾಲ ಜಾಧವ್ ಸಂಬಳದಲ್ಲಿಆಡಳಿತಾತ್ಮಕ ಆದೇಶವಿಲ್ಲದೆ ಹೆಚ್ಚುವರಿ ಭತ್ಯೆ ಎಂದು 2024ರ ನವೆಂಬರ್ ನಲ್ಲಿ50 ಸಾವಿರ ರೂ. ಹೆಚ್ಚುವರಿ ಹಣ ವರ್ಗಾವಣೆ ಮಾಡಿದ್ದರು. ರೀನಾ ಸಂತೋಷಕುಮಾರಗೆ 2024 ಡಿಸೆಂಬರ್ ನಲ್ಲಿ80,000 ರೂ. ಮತ್ತು 2025ರ ಜನವರಿಯಲ್ಲಿ90,000 ರೂ. ಫೆಬ್ರವರಿ 95 ಸಾವಿರ ರೂ. ಜಮಾ ಮಾಡಿದ್ದಾನೆ. ನಂತರ ಇವರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿದ್ದ ಶರಣಪ್ಪ, ಹೆಚ್ಚುವರಿ ಹಣ ಮರಳಿ ತಮ್ಮ ಅಕೌಂಟ್ ಗೆ 3.15 ಲಕ್ಷ ವರ್ಗಾವಣೆ ಮಾಡಿಕೊಂಡಿದ್ದಾನೆ. ಈ ಕುರಿತು ಹಣಕಾಸು ಅಧಿಕಾರಿ ನೇತೃತ್ವದಲ್ಲಿತನಿಖೆ ನಡೆಸಿದಾಗ ವಿಶ್ವವಿದ್ಯಾಲಯಕ್ಕೆ ವಂಚನೆ ಮಾಡಿದ್ದಾನೆ ಎಂಬುದು ತಿಳಿದು ಬಂದಿರುತ್ತದೆ ಎಂದು ದೂರಿನಲ್ಲಿಕುಲಸಚಿವ ರಮೇಶ ಲಂಡನಕರ್ ತಿಳಿಸಿದ್ದಾರೆ.

