ಯುಗಾದಿ- ವರ್ಷದ ಹಾದಿ
--------------
ಡಾ. ಸಂಧ್ಯಾ ವಿ.
------------
ಯುಗಾದಿ ಹಬ್ಬದ ಆಚರಣೆಯ ಒಳನೋಟ ಇಲ್ಲಿದೆ.
-----
ಚೈತ್ರ ಮಾಸದ ಶುಕ್ಲಪಕ್ಷದ ಪ್ರತಿಪದೆ ತಿಥಿಯಂದು ಆಚರಿಸುವ ಯುಗಾದಿ ಹಬ್ಬವು ಹಿಂದೂಗಳ ಹೊಸ ವರ್ಷದ ಆರಂಭವಾಗಿದೆ. ಯುಗಾದಿ ಎಂಬುದು ಸಂಸ್ಕೃತದ ಎರಡು ಪದಗಳಿಂದ ಕೂಡಿದೆ. ಯುಗ ಎಂದರೆ ವರ್ಷ, ಆದಿ ಎಂದರೆ ಆರಂಭ. ಯುಗಾದಿ ತತ್ಸಮ ಪದವಾದರೆ ಉಗಾದಿ ತದ್ಭವ ಪದವಾಗಿದೆ. ಹಿಂದೂ ಪುರಾಣಗಳ ಪ್ರಕಾರ ಬ್ರಹ್ಮ ದೇವರು ಯುಗಾದಿಯ ದಿನದಂದು ಬ್ರಹ್ಮಾಂಡವನ್ನು ಸೃಷ್ಟಿಸಿದರು ಎಂದು ಹೇಳಲಾಗುತದೆ. ದೇಶದ ವಿವಿಧ ಭಾಗಗಳಲ್ಲಿಇದನ್ನು ಬೇರೆ ಬೇರೆ ರೀತಿಯ ಹೆಸರಿನಿಂದ ಆಚರಿಸಲಾಗುತ್ತದೆ.
ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಗಳಲ್ಲಿಚಾಂದ್ರಮಾನ ಯುಗಾದಿ (ಚಂದ್ರನ ಚಲನೆಯನ್ನು ಆಧರಿಸಿ) ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರಭಾರತದ ಕೆಲವು ಪ್ರದೇಶಗಳಲ್ಲಿಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ.
ಯುಗಾದಿಯ ದಿನದಂದು ಮುಂಜಾನೆ ಎದ್ದು ಮಹಿಳೆಯರು ಮನೆಯ ಬಾಗಿಲ ಅಂಗಳವನ್ನು ಸೆಗಣಿಯಿಂದ ಸಾರಿಸಿ, ವಿವಿಧ ಬಣ್ಣಗಳಿಂದ ಕೂಡಿದ ರಂಗೋಲಿಯಿಂದ ಅಲಂಕರಿಸಲಾಗುತ್ತದೆ. ತೈಲ ಅಭ್ಯಂಜನ (ಎಣ್ಣೆ ಸ್ನಾನ ) ಮಾಡಿ, ಮನೆಯ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಕೆಲವು ಕಡೆ ಆ ದಿನದಂದು ತಮ್ಮ ಹಿರಿಯರನ್ನು ನೆನೆದು ಹೊಸ ಬಟ್ಟೆ ಇಟ್ಟು ಪೂಜೆ ಸಲ್ಲಿಸುವ ಕ್ರಮವೂ ಇದೆ. ಬೇವು ಬೆಲ್ಲಹಂಚಿ, ಸವಿದು ಜೀವನದಲ್ಲಿಬರುವ ಕಷ್ಟ-ಸುಖಗಳೆಲ್ಲವನ್ನು ಸಮನಾಗಿ ಸ್ವೀಕರಿಸೋಣ ಎಂದು ಪಣ ತೊಡುತ್ತಾರೆ.
ಬೇವು ಬೆಲ್ಲದ ಸೇವನೆಯ ಸಂದರ್ಭ ಹೇಳುವ ಶ್ಲೋಕ:
ಶತಾಯುಃ ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ||
ಮನೆಯವರೆಲ್ಲರೂ ಒಟ್ಟಾಗಿ ಸಂತೋಷ ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ. ಹೋಳಿಗೆ, ಪಾಯಸ, ಪಾನಕ, ಕೋಸಂಬರಿ, ಕಾಯಿ ಹಾಲು ಕಡಲೆಕಾಳು ಗೊಜ್ಜು, ಮಾವಿನಕಾಯಿ ಚಿತ್ರನ್ನಾ ಹಬ್ಬದ ಪ್ರಮುಖ ಖಾದ್ಯಗಳಾಗಿದೆ. ದೇವಸ್ಥಾನಗಳಲ್ಲಿಪಂಚಾಂಗ ಶ್ರವಣ ನಡೆಯುತ್ತದೆ. ದೇಗುಲ ದರ್ಶನ ಮಾಡಿ ವಿಶೇಷ ಪೂಜೆ ಹಮ್ಮಿಕೊಳ್ಳುತ್ತಾರೆ. ಶಕ್ತಿ ದೇವತೆಯೆನ್ನು ನೆನೆದು ಕುಲದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಮುಸ್ಸಂಜೆಯ ಹೊತ್ತಿನಲ್ಲಿಚಂದ್ರನನ್ನು ನೋಡಿ, ತಮ್ಮ ಮನೆಯ ಹಿರಿಯರಿಂದ ಆಶೀರ್ವಾದ ಪಡೆಯುತ್ತಾರೆ.
ಲೇಖಕರು: ಸಹಾಯಕ ಪ್ರಾಧ್ಯಾಪಕರು, ಸ್ಕೂಲ್ ಆಫ್ ಕಾಮರ್ಸ್ , ಯಶವಂತಪುರ

