ವಿಕ ಸುದ್ದಿಲೋಕ ಬೆಂಗಳೂರು
ಸಂಸತ್ ಕಲಾಪಕ್ಕೆ ಪ್ರತಿಪಕ್ಷಗಳ ಅಡ್ಡಿ ಹಿನ್ನೆಲೆಯಲ್ಲಿಕಳವಳ ವ್ಯಕ್ತಪಡಿಸಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರು ಈ ಪರಿಸ್ಥಿತಿಯನ್ನು ಸರಿಪಡಿಸುವಂತೆ ಆಗ್ರಹಿಸಿದ್ದಾರೆ.
‘‘ಬಜೆಟ್ ಅಧಿವೇಶನದ ವೇಳೆ ಪ್ರತಿಪಕ್ಷಗಳ ಸದಸ್ಯರು ನಿರಂತರವಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅದರಲ್ಲಿಯೂ ಕಾಂಗ್ರೆಸ್ ಸಂಸದರು ಸಂಸತ್ತಿನ ಒಳಗೆ ಹಾಗೂ ಆವರಣದಲ್ಲಿಘೋಷಣೆ ಕೂಗುವುದು, ಫಲಕ ಪ್ರದರ್ಶನ ಮಾಡುವುದು, ನಿರ್ದಿಷ್ಟವಾಗಿ ಹೆಸರು ಕೂಗುವುದು, ಧರಣಿ ಮತ್ತು ಕಲಾಪ ಸ್ಥಗಿತ ಆಗುವಂತೆ ಮಾಡುತ್ತಿದ್ದಾರೆ. ಇದು ಸಂಸತ್ತಿನ ಘನತೆಯನ್ನು ಕುಗ್ಗಿಸುತ್ತಿದೆ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೂಲ ತತ್ತ$್ವಗಳಿಗೆ ಧಕ್ಕೆ ಉಂಟು ಮಾಡುತ್ತದೆ. ಹಾಗಾಗಿ ತಮ್ಮ ಅನುಭವ ಮತ್ತು ಪ್ರಬುದ್ಧತೆ ಬಳಸಿಕೊಂಡು ತಮ್ಮ ಪಕ್ಷ ಮತ್ತು ಇತರ ಪಕ್ಷಗಳ ನಾಯಕರೊಂದಿಗೆ ಮಾತನಾಡಿ ಸರಿಪಡಿಸಬೇಕು,’’ ಎಂದು ವಿನಂತಿ ಮಾಡಿಕೊಂಡಿದ್ದಾರೆ.
‘‘ನನ್ನ 65 ವರ್ಷಗಳ ಸಾರ್ವಜನಿಕ ಜೀವನದಲ್ಲಿಶೇ.90ರಷ್ಟು ಪ್ರತಿಪಕ್ಷದಲ್ಲೆಕಳೆದಿದ್ದೇನೆ. ನೀವು ಕೂಡ ಹೆಚ್ಚು ಕಾಲ ಪ್ರತಿಪಕ್ಷದಲ್ಲಿದ್ದಿರಿ. ಪ್ರತಿಪಕ್ಷದ ಹೊಣೆಗಾರಿಕೆ ಹಾಗೂ ಜವಾಬ್ದಾರಿಗಳ ಬಗ್ಗೆ ತಮಗೆ ಅರಿವಿದೆ. ಪ್ರತಿಪಕ್ಷಗಳು ತಮ್ಮ ವಿರೋಧ ತೋರಿಸಬಹುದು. ಆದರೆ ಅದು ನಿಯಮ, ಸಂಪ್ರದಾಯ ಮತ್ತು ಘನತೆಗೆ ಧಕ್ಕೆ ತರುವಂತಿರಬಾರದು. ಪ್ರಸಕ್ತ ಸಂದರ್ಭದಲ್ಲಿಪ್ರತಿಪಕ್ಷ ಸದಸ್ಯರ ವರ್ತನೆ ನನಗೆ ಬಹಳ ನೋವುಂಟು ಮಾಡಿದೆ. ನಿಮ್ಮ ಸದಸ್ಯರು ಸಂಸತ್ತಿನ ಆವರಣದಲ್ಲಿಮತ್ತು ಒಳಗೆ ಪ್ರಚೋದನಾತ್ಮಕ ರೀತಿಯಲ್ಲಿವರ್ತಿಸುತ್ತಿದ್ದಾರೆ. ನೆಹರು, ಸರ್ದಾರ್ ಪಟೇಲ್ , ಬಿ.ಆರ್ . ಅಂಬೇಡ್ಕರ್ , ಮೌಲಾನಾ ಅಬ್ದುಲ್ ಕಲಾಂ ಆಜಾದ್ ಮುಂತಾದವರು ಹಾಕಿಕೊಟ್ಟ ಬುನಾದಿಯ ಮೇಲೆ ನಮ್ಮ ಪರಂಪರೆ ನಿರ್ಮಿತವಾಗಿದೆ. ನನ್ನ ಸುದೀರ್ಘ ಸಂಸದೀಯ ಅನುಭವದಲ್ಲಿಇತ್ತೀಚೆಗೆ ಕಂಡಂತಹ ಅವ್ಯವಸ್ಥೆ ಮತ್ತು ಅಡಚಣೆಯನ್ನು ಎಂದಿಗೂ ನೋಡಿಲ್ಲ,’’ ಎಂದು ಪತ್ರದಲ್ಲಿಉಲ್ಲೇಖಿಸಿದ್ದಾರೆ.
ನಿಯಮಕ್ಕೆ ಬದ್ಧರಾಗಬೇಕು
‘‘ನಾವು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಸಂಸತ್ತಿನ ನಿಯಮ ಮತ್ತು ಸ್ಥಾಪಿತ ಕಾರ್ಯ ವಿಧಾನಗಳಿಗೆ ಬದ್ಧರಾಗಿರುತ್ತೇವೆ ಎಂದು ಹೇಳುತ್ತೇವೆ. ಅದಕ್ಕೆ ಎಲ್ಲರೂ ಬದ್ಧರಾಗಿ ವರ್ತಿಸಬೇಕು ಎಂದು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಸಂಸತ್ತಿನ ಮೆಟ್ಟಿಲುಗಳ ಮೇಲೆ ಕುಳಿತು ಚಹಾ ಸೇವಿಸುವುದು, ಬಿಸ್ಕತ್ತು, ಪಕೋಡಾ ತಿನ್ನುವುದು ಅತಿರೇಕವಾಗುತ್ತದೆ,’’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘‘ನಾನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿಸರಕಾರ ಮುನ್ನೆಡೆಸಿದ್ದೇನೆ. ಆ ಸಂದರ್ಭದಲ್ಲಿ ಪ್ರತಿಪಕ್ಷ ಗಳು ಸಂಸದೀಯ ಸದಾಚಾರ ಹಾಗೂ ಮೌಲ್ಯಗಳನ್ನು ಮೀರಿ ನಡೆದಿಲ್ಲ. ಅಂದಿನ ಸದಸ್ಯರು ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಸಂಯಮದಿಂದ ಕಾರ್ಯ ನಿರ್ವಹಿಸಿದ್ದಾರೆ. ಅವರು ಪ್ರತಿಭಟಿಸಿದಾಗಲೂ ಎಂದೂ ಸಂಸತ್ತಿನ ಪ್ರವೇಶ ದ್ವಾರವನ್ನು ನಿರ್ಬಂಧಿಸಲಿಲ್ಲ. ಈಗ ಅದಕ್ಕೆ ವಿರುದ್ಧವಾದ ಸನ್ನಿವೇಶ ಸೃಷ್ಟಿಯಾಗಿದೆ. ಇದು ಸಂಸದೀಯ ಹೆಗ್ಗಳಿಕೆಗೆ ಅಪಾರ ಹಾನಿ ಉಂಟು ಮಾಡುತ್ತಿದೆ. ನನ್ನ ಕಾಳಜಿ ಮತ್ತು ನನ್ನ ಉದ್ದೇಶವನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಎಂದು ನಂಬಿಕೆಯಿದೆ. ನಾನು ಯಾರನ್ನೂ ಲಘುವಾಗಿ ನೋಡುವ ಅಥವಾ ಯಾರ ಉತ್ಸಾಹ ಕಡಿಮೆ ಮಾಡುವ ಉದ್ದೇಶ ಹೊಂದಿಲ್ಲ. ಪ್ರತಿಭಟನೆಯನ್ನು ನಾನು ವಿರೋಧಿಸುವುದಿಲ್ಲ. ಪ್ರತಿಪಕ್ಷ ಎಷ್ಟು ಬೇಕಾದರೂ ಪ್ರತಿಭಟಿಸಬಹುದು. ಆ ಪ್ರತಿಭಟನೆ 75 ವರ್ಷಗಳ ವೈಭವಯುತ ವರ್ಷಗಳಲ್ಲಿನಾವು ಒಟ್ಟಾಗಿ ನಿರ್ಮಿಸಿಕೊಂಡಿದ್ದನ್ನು ಕೆಡವುವ ರೀತಿಯಲ್ಲಿಇರಬಾರದು,’’ ಕಳಕಳಿ ವ್ಯಕ್ತಪಡಿಸಿದ್ದಾರೆ.

