ಪೊಲೀಸ್ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

Contributed bymaddurvk@gmail.com|Vijaya Karnataka

ಮದ್ದೂರು ತಾಲೂಕಿನ ಗೊರವನಹಳ್ಳಿ ಹಾಗೂ ಗೆಜ್ಜಲಗೆರೆ ಗ್ರಾಮಸ್ಥರು ಪೊಲೀಸ್‌ ದೌರ್ಜನ್ಯ ಖಂಡಿಸಿ ಬೃಹತ್‌ ಪ್ರತಿಭಟನೆ ನಡೆಸಿದರು. ನಗರಸಭೆ ಸೇರ್ಪಡೆ ವಿರೋಧಿಸಿ 66 ದಿನಗಳಿಂದ ಧರಣಿ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿಚಾರ್ಜ್‌ ನಡೆಸಿದ್ದಾರೆ. ಅಧಿಕಾರಿಗಳ ಕ್ರಮ ಖಂಡಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.

massive protest against police brutality calls for action against concerned officials

ವಿಕ ಸುದ್ಧಿಲೋಕ ಮದ್ದೂರು (ಮಂಡ್ಯ)

ತಾಲೂಕಿನ ಗೊರವನಹಳ್ಳಿ ಗ್ರಾಮದ ಧರಣಿ ನಿರತರ ಮೇಲೆ ದೌರ್ಜನ್ಯವೆಸಗಿರುವ ಪೊಲೀಸ್ ಅಧಿಕಾರಿಗಳ ಕ್ರಮ ಖಂಡಿಸಿ ಗೊರವನಹಳ್ಳಿ ಹಾಗೂ ಗೆಜ್ಜಲಗೆರೆ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದ ಬಳಿ ಆಗಮಿಸಿದ ಗೆಜ್ಜಲಗೆರೆ, ಗೊರವನಹಳ್ಳಿ ಗ್ರಾಮದ ಸ್ಥಳೀಯ ನಿವಾಸಿಗಳು ಸೇರಿದಂತೆ ರೈತ ಸಂಘಟನೆ ಹಾಗೂ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ರಾಜ್ಯ ಸರಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಚುನಾಯಿತ ಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ದಾರಿಯುದ್ದಕ್ಕೂ ಘೋಷಣೆ ಕೂಗುತ್ತಾ ಪೇಟೆಬೀದಿ ಮೂಲಕ ಮೆರವಣಿಗೆ ನಡೆಸಿದರು. ಬಳಿಕ ತಾಲೂಕು ಕಚೇರಿಯಲ್ಲಿತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರಿಗೆ ಮನವಿ ಸಲ್ಲಿಸಿದರು.

‘‘ಗೊರವನಹಳ್ಳಿ ಗ್ರಾ.ಪಂ. ಕಚೇರಿ ಆವರಣದಲ್ಲಿಕಳೆದ 66 ದಿನಗಳಿಂದಲೂ ಸ್ಥಳೀಯ ನಿವಾಸಿಗಳು ಶಾಂತಿಯುತ ಧರಣಿ ಕೈಗೊಂಡಿದ್ದರೂ ಕಡತ ತೆಗೆದುಕೊಳ್ಳುವ ನೆಪದಲ್ಲಿಅಧಿಕಾರಿಗಳೊಟ್ಟಿಗೆ ಆಗಮಿಸಿದ ಪೊಲೀಸರು ಏಕಾಏಕಿ ದೌರ್ಜನ್ಯವೆಸಗಿದ್ದಾರೆ,’’ಎಂದು ದೂರಿದರು.

‘‘ನಗರಸಭೆ ಸೇರ್ಪಡೆ ಸಂಬಂಧ ನ್ಯಾಯಾಲಯದಲ್ಲಿಪ್ರಕರಣವಿದ್ದರೂ ತೀರ್ಪು ಬರುವವರೆಗೂ ಕಾಯದೆ ಏಕಾಏಕಿ ಕಡತಗಳನ್ನು ದೌರ್ಜನ್ಯವೆಸಗಿ ತೆಗೆದುಕೊಂಡು ಹೋಗಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಅಮಾನತುಗೊಳಿಸಬೇಕು,’’ಎಂದು ಒತ್ತಾಯಿಸಿದರು.

‘‘ಗ್ರಾಮ ಪಂಚಾಯಿತಿಯು ಪಂಚಾಯಿತಿಯಾಗಿಯೇ ಉಳಿಯಬೇಕೆಂಬುದು ಧರಣಿ ನಿರತರ ಉದ್ದೇಶವಾಗಿದೆ. ಗಾಂಧಿ ಕನಸಿನ ಗ್ರಾಮಸ್ವರಾಜ್ಯ ಆಶಯ ಕೂಡ ಆಗಿದ್ದು, ಆದರೆ ಯಾವ ಸೂಚನೆಯನ್ನು ನೀಡದೆ ಮತ್ತು ಚರ್ಚಿಸದೆ ಚಳವಳಿ ನಿರತರ ಮೇಲೆ ಏಕಾಏಕಿ ದೌರ್ಜನ್ಯವೆಸಗಿ ಲಾಠಿಯಿಂದ ಹಲ್ಲೆಗೊಳಿಸಿದ್ದು, ಕೂಡಲೇ ಪೊಲೀಸರ ಮೇಲೆ ಶಿಸ್ತುಕ್ರಮ ಜರುಗಿಸಬೇಕು,’’ ಎಂದು ಆಗ್ರಹಿಸಿದರು.

‘‘ಸಿನಿಮೀಯ ಮಾದರಿಯಲ್ಲಿಅಮಾನವೀಯವಾಗಿ ನಡೆದುಕೊಂಡಿರುವ ಪೊಲೀಸರು ಅಸ್ವಸ್ಥಗೊಂಡ ಪ್ರತಿಭಟನಾಕಾರರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಕಾರ್ಯಕ್ಕೂ ಮುಂದಾಗದೆ ನಿರ್ಲಕ್ಷ ವಹಿಸಿದ್ದಾರೆ,’’ಎಂದು ದೂರಿದರು.

‘‘ಮುಂದಿನ ದಿನಗಳಲ್ಲಿಇಂತಹ ಘಟನೆಗಳು ಮತ್ತೆ ಮರುಕಳಿಸಿದಲ್ಲಿಮುಂದಾಗುವ ಅನಾಹುತಕ್ಕೆ ಶಾಸಕರೇ ನೇರ ಹೊಣೆಯಾಗಲಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗ್ರಾಮ ಪಂಚಾಯಿತಿಯನ್ನು ಪಂಚಾಯಿತಿಯನ್ನಾಗಿಯೇ ಉಳಿಸಲು ಕ್ರಮ ವಹಿಸಬೇಕು ,’’ಎಂದು ಎಚ್ಚರಿಕೆ ನೀಡಿದರು.

ಭಾರತೀಯ ಕಿಸಾನ್ ಸಂಘದ ಸದಸ್ಯೆ ಪುಟ್ಟಮ್ಮ, ಶ್ರೀಕಂಠೇಗೌಡ, ಸ್ಥಳೀಯ ಮುಖಂಡರಾದ ಸುನಂದಾ ಜಯರಾಂ, ಗೊರವನಹಳ್ಳಿ ಪ್ರಸನ್ನ, ಲಿಂಗಪ್ಪಾಜಿ, ಜಿ.ಎ.ಶಂಕರ್ , ಚಂದ್ರಶೇಖರ್ , ಶಿವರಾಮು, ಯಧು ಶೈಲಸಂಪತ್ , ಸಂತೋಷ್ , ರಾಮಕೃಷ್ಣ, ಮಹೇಶ್ , ಸತೀಶ್ , ಶಿವರಾಮು, ಶಿವಪ್ಪ, ಸುರೇಶ್ ನೇತೃತ್ವ ವಹಿಸಿದ್ದರು.

----------

ಪೋಟೋ ಶೀರ್ಷಿಕೆಗಳು

ಎಂಡಿವೈ17ಎಂಡಿಆರ್ 1ಸಿ

ಧರಣಿ ನಿರತರ ಮೇಲೆ ಪೊಲೀಸ್ ದೌರ್ಜನ್ಯ ಕ್ರಮ ಖಂಡಿಸಿ ಮಂಡ್ಯ ಜಿಲ್ಲೆಮದ್ದೂರು ತಾಲೂಕಿನ ಗೊರವನಹಳ್ಳಿ ಹಾಗೂ ಗೆಜ್ಜಲಗೆರೆ ಗ್ರಾಮಸ್ಥರು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರಿಗೆ ಮನವಿ ಸಲ್ಲಿಸಿದರು.