The Justice Of Euthanasia The Superiority Of Life After War The Case Of Harish Rana
(ವಿಕ ಫೋಕಸ್ ) ಹೋಗಿ ಬನ್ನಿ...
Contributed by: Keerthi Kolgar|Vijaya Karnataka•
ಹರೀಶ್ ರಾಣಾನಿಗೆ ದಯಾಮರಣ ನೀಡುವ ಸುಪ್ರೀಂ ಕೋರ್ಟ್ ತೀರ್ಪು ಭಾರತದಲ್ಲಿ ಜೀವಿಸುವ ಹಕ್ಕಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಯುದ್ಧದಲ್ಲಿ ಜೀವ ಕಳೆದುಕೊಳ್ಳುವುದು ಸುಲಭ, ಆದರೆ ನಾಗರಿಕ ಸಮಾಜದಲ್ಲಿ ಜೀವ ಉಳಿಸುವುದು ಕಷ್ಟ. ನಿಷ್ಕ್ರಿಯ ದಯಾಮರಣದ ಮೂಲಕ ರಾಣಾನ ಜೀವ ಬಿಡುಗಡೆಗೆ ಸಿದ್ಧತೆ ನಡೆದಿದೆ. ಸಕ್ರಿಯ ದಯಾಮರಣವು ನೋವುರಹಿತವಾಗಿದ್ದರೂ, ಭಾರತದಲ್ಲಿ ನಿಷ್ಕ್ರಿಯ ದಯಾಮರಣಕ್ಕೆ ಆದ್ಯತೆ ನೀಡಲಾಗಿದೆ.
ಯುದ್ಧದ ಬಾಂಬ್‌ಗಳು ನೂರಾರು ಜೀವಗಳನ್ನು ಕ್ಷಣಾರ್ಧದಲ್ಲಿ ಕಸಿಯುವಾಗ, ಯುದ್ಧವಿಮಾನದಲ್ಲಿ ಕುಳಿತ ಕಟುಕ ಹೃದಯಿಗಳಿಗೆ ಕಿಂಚಿತ್ತೂ ಕಂಪಿಸದ ಬೆರಳುಗಳು, ನಾಗರಿಕ ಸಮಾಜದಲ್ಲಿ ಒಬ್ಬ ವ್ಯಕ್ತಿಯ ಜೀವವನ್ನು ನಿಲ್ಲಿಸಲು ಸುಪ್ರೀಂ ಕೋರ್ಟ್‌ನ ಆದೇಶ ಬೇಕಾಯಿತು. 13 ವರ್ಷಗಳಿಂದ ಕೋಮಾದಲ್ಲಿದ್ದ, ಯಂತ್ರಗಳ ಸಹಾಯದಿಂದ ಬದುಕುತ್ತಿದ್ದ ಹರೀಶ್ ರಾಣಾ ಎಂಬ ಯುವಕನಿಗೆ 'ಘನತೆಯ ಬಿಡುಗಡೆ' ನೀಡಲು ಏಮ್ಸ್ ವೈದ್ಯರು ಹಗಲುರಾತ್ರಿ ಶ್ರಮಿಸುತ್ತಿದ್ದಾರೆ. ಈ ಘಟನೆ, ಯುದ್ಧದ ಕ್ರೌರ್ಯಕ್ಕೂ, ನಾಗರಿಕ ಸಮಾಜದ ಸಂಕಟಕ್ಕೂ ಇರುವ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತದೆ. ನಿಷ್ಕ್ರಿಯ ದಯಾಮರಣದ ಮೂಲಕ ರಾಣಾ ಜೀವ ಬಿಡುಗಡೆಯ ಹೊಸ್ತಿಲಲ್ಲಿದ್ದಾನೆ.
ಗಾಜಿಯಾಬಾದ್‌ನ ಹರೀಶ್ ರಾಣಾ, 2013ರಲ್ಲಿ ಬಿ.ಟೆಕ್ ಅಂತಿಮ ಸೆಮಿಸ್ಟರ್ ಓದುತ್ತಿದ್ದಾಗ, ಹಾಸ್ಟೆಲ್‌ನಿಂದ ಬಿದ್ದು ಕೋಮಾಕ್ಕೆ ಜಾರಿದ. ಅಂದಿನಿಂದ ಇಂದಿನವರೆಗೂ ಆತನ ದೇಹ ಚಲಿಸದೆ, ಯಂತ್ರಗಳ ಸಹಾಯದಿಂದಲೇ ಬದುಕುತ್ತಿದ್ದಾನೆ. ಮಂಗಳ ಗ್ರಹದಲ್ಲಿ ನೌಕೆ ಹಾರಿದ್ದು, ಮೋದಿ ಪ್ರಧಾನಿಯಾದದ್ದು, ಕೊರೊನಾ ಮಹಾಮಾರಿ ಬಂದದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದು, ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಯುದ್ಧಗಳನ್ನು ಹೂಡಿದ್ದು - ಇವೆಲ್ಲವೂ ರಾಣಾನ ಕೋಮಾ ಪ್ರಪಂಚವನ್ನು ತಲುಪಲೇ ಇಲ್ಲ. ಪ್ರತಿದಿನ ತಾಯಿ ನಿರ್ಮಲಮ್ಮ ಮಗನಿಗೆ ಮಸಾಜ್ ಮಾಡುತ್ತಾ, ದಿನದ ಘಟನೆಗಳನ್ನು ಕಥೆಯಂತೆ ಹೇಳುತ್ತಿದ್ದರು. ಮಗನ ಕಣ್ಣು ಮಿಟುಕಿಸುವುದಕ್ಕಾಗಿ, ಆಕಳಿಸುವುದಕ್ಕಾಗಿ, ಸೀನಿದ್ದಾಗ ಚರ್ಮ ಸಣ್ಣಗೆ ಅಲುಗಾಡುವುದಕ್ಕಾಗಿ ಕಾಯುತ್ತಿದ್ದರು. ಮಗನಿಂದ 'ಅಮ್ಮಾ...' ಎಂಬ ಒಂದೇ ಒಂದು ಮಾತು ಕೇಳಲು ಅಗಣಿತ ಬಾರಿ ಕಾಯ್ದರು.ಮಗ ಇನ್ನು ಎಂದೆಂದಿಗೂ ಮಾತನಾಡಲಾರ ಎಂದು ನಿರ್ಧರಿಸಿದ ಹೆತ್ತವರು, ಆತನ ದಯನೀಯ ಸ್ಥಿತಿ ನೋಡಲಾಗದೆ, ದಯಾಮರಣ ಕ್ಕೆ ಅನುಮತಿ ಕೋರಿದರು. ಭಾರತದಲ್ಲಿ ಸಕ್ರಿಯ ದಯಾಮರಣ ಕಾನೂನುಬದ್ಧವಾಗಿಲ್ಲದ ಕಾರಣ, ರಾಣಾಗೆ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಸಿಕ್ಕಿತು. ಈಗ ರಾಣಾ ಜೀವ ಬಿಡುಗಡೆಯ ಅಂಚಿನಲ್ಲಿದ್ದಾನೆ. ಮನೆಯಲ್ಲಿ ಅಂತಿಮವಾಗಿ ಪ್ರೀತಿ, ಗೌರವ ನೀಡಿ, ಏಮ್ಸ್ ಆಸ್ಪತ್ರೆಯಲ್ಲಿ ಮಲಗಿಸಿದ್ದಾರೆ. ನಿಷ್ಕ್ರಿಯ ದಯಾಮರಣದ ಪ್ರಕ್ರಿಯೆಗಳು ಆರಂಭಗೊಂಡಿವೆ.
ನಿಷ್ಕ್ರಿಯ ದಯಾಮರಣವನ್ನು ವೈದ್ಯರು ಹೇಗೆ ನಡೆಸುತ್ತಾರೆ? ಸುಪ್ರೀಂ ಕೋರ್ಟ್ ತೀರ್ಪು ಬಂದ ತಕ್ಷಣ, ಏಮ್ಸ್ ವೈದ್ಯರ ಮುಖ್ಯಸ್ಥರು ಸಭೆ ಸೇರಿದರು. ಕುಟುಂಬದ ಒಪ್ಪಿಗೆ ಪಡೆದು, ಸಂಜೆ ನಂತರ ರಾಣಾಗೆ ಟ್ಯೂಬ್ ಮೂಲಕ ನೀಡುತ್ತಿದ್ದ ದ್ರವಾಹಾರವನ್ನು ನಿಲ್ಲಿಸಲಾಯಿತು. ಆಮ್ಲಜನಕದ ಬೆಂಬಲವನ್ನೂ ತೆಗೆದುಹಾಕಲಾಯಿತು. ಜೀವ ಉಳಿಸುವ ಎಲ್ಲಾ ಚಿಕಿತ್ಸೆಗಳನ್ನೂ ನಿಲ್ಲಿಸಲಾಯಿತು. ನೋವು ಕಡಿಮೆ ಮಾಡಲು ನೋವು ನಿವಾರಕಗಳನ್ನು ಮಾತ್ರ ನೀಡಲಾಗುತ್ತಿದೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅಡಿಯಲ್ಲಿ, ವೈದ್ಯಕೀಯ ಮಂಡಳಿಯ ಅನುಮೋದನೆಯೊಂದಿಗೆ ವೈದ್ಯರು ರೋಗಿಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಆಹಾರ ಮತ್ತು ನೀರಿನಿಂದ ವಂಚಿತನಾದ ವ್ಯಕ್ತಿ ಒಂದರಿಂದ ಎರಡು ವಾರಗಳವರೆಗೆ ಮಾತ್ರ ಬದುಕಬಲ್ಲ. ರಾಣಾ ಆ ಹಾದಿಯಲ್ಲೇ ಇದ್ದಾನೆ.
ಜೀವ ಬೆಂಬಲ ವ್ಯವಸ್ಥೆ ನಿಲ್ಲಿಸಿದಾಗ ಏನಾಗುತ್ತದೆ? ಫೀಡಿಂಗ್ ಟ್ಯೂಬ್, ವೆಂಟಿಲೇಟರ್ ಅಥವಾ ಆಮ್ಲಜನಕ ಬೆಂಬಲದಂತಹ ಜೀವನಾಧಾರಕ ಸಾಧನಗಳನ್ನು ತೆಗೆದುಹಾಕಿದಾಗ, ದೇಹ ನಿರ್ಜಲೀಕರಣ ಮತ್ತು ಹಸಿವನ್ನು ಅನುಭವಿಸಲು ಪ್ರಾರಂಭಿಸುತ್ತದೆ. ಉಸಿರಾಟದ ಸಾಮರ್ಥ್ಯ ಕಡಿಮೆಯಾದಂತೆ, ಹೃದಯ ಬಡಿತವೂ ನಿಧಾನವಾಗುತ್ತದೆ. ಆಮ್ಲಜನಕದ ಕೊರತೆಯು ಕೋಮಾ ಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸುತ್ತದೆ. ಬಳಿಕ ದೇಹದ ಜೀವಂತಿಕೆ ಕೆಲವು ಗಂಟೆಗಳಿಂದ ಕೆಲವು ದಿನಗಳವರೆಗೆ ಮಾತ್ರ ಉಳಿಯಬಹುದು ಎಂದು ವೈದ್ಯರು ಹೇಳುತ್ತಾರೆ.
ಸಕ್ರಿಯ ದಯಾಮರಣ ಹೇಗೆ ನಡೆಸುತ್ತಾರೆ? ಭಾರತದಲ್ಲಿ ಇದು ಕಾನೂನುಬದ್ಧವಲ್ಲ. ಆದರೆ, ಬೆಲ್ಜಿಯಂ, ಕೆನಡಾ, ದಿ ನೆದರ್ಲೆಂಡ್ಸ್, ನ್ಯೂಜಿಲೆಂಡ್, ಈಕ್ವೆಡಾರ್ ಮತ್ತು ಆಸ್ಟ್ರೇಲಿಯಾದ ಕೆಲವು ರಾಜ್ಯಗಳಲ್ಲಿ ಇದು ಕಾನೂನುಬದ್ಧವಾಗಿದೆ. ಈ ದೇಶಗಳಲ್ಲಿ ಸಕ್ರಿಯ ದಯಾಮರಣವನ್ನು ಅತ್ಯಂತ ಶಾಂತ ಮತ್ತು ನೋವುರಹಿತ ರೀತಿಯಲ್ಲಿ ನಡೆಸಲಾಗುತ್ತದೆ. ವ್ಯಕ್ತಿಯನ್ನು ಅಸಹನೀಯ ಯಾತನೆಯಿಂದ ಮುಕ್ತಗೊಳಿಸುವುದೇ ಇದರ ಮುಖ್ಯ ಉದ್ದೇಶ. ವೈದ್ಯರು ಸಾಮಾನ್ಯವಾಗಿ ಇದನ್ನು ಎರಡು ಹಂತಗಳಲ್ಲಿ ನಿರ್ವಹಿಸುತ್ತಾರೆ. ಮೊದಲಿಗೆ, ರೋಗಿಗೆ ಅಭಿದಮನಿ ಮೂಲಕ ಅತ್ಯಂತ ಪ್ರಬಲ ಅರಿವಳಿಕೆ ನೀಡಲಾಗುತ್ತದೆ. ಇದರಿಂದ ರೋಗಿ ಕೆಲವೇ ಸೆಕೆಂಡುಗಳಲ್ಲಿ ಗಾಢ ನಿದ್ರೆಗೆ ಜಾರುತ್ತಾನೆ. ಈ ಸ್ಥಿತಿಯಲ್ಲಿ ವ್ಯಕ್ತಿಗೆ ತನ್ನ ದೇಹದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ಅನುಭವ ಆಗುವುದಿಲ್ಲ. ನಂತರ, ರೋಗಿ ಸಂಪೂರ್ಣವಾಗಿ ಪ್ರಜ್ಞಾಹೀನನಾಗಿದ್ದಾನೆ ಎಂದು ಖಚಿತಪಡಿಸಿಕೊಂಡ ಬಳಿಕ, ವೈದ್ಯರು ಪ್ಯಾನ್ಕುರೋನಿಯಮ್ ಬ್ರೋಮೈಡ್ ಅಥವಾ ವೆಕುರೋನಿಯಮ್ ಎಂಬ ಔಷಧಿಗಳನ್ನು ಚುಚ್ಚುಮದ್ದಿನ ಮೂಲಕ ಪ್ರಯೋಗಿಸುತ್ತಾರೆ. ಇದರಿಂದ ದೇಹದ ಸ್ನಾಯುಗಳು, ವಿಶೇಷವಾಗಿ ಉಸಿರಾಟದ ವ್ಯವಸ್ಥೆ ಮತ್ತು ಹೃದಯ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಅಲ್ಲದೆ, ನರಮಂಡಲ ಮತ್ತು ಸ್ನಾಯುಗಳ ನಡುವಿನ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸುತ್ತದೆ.
ಇಂಜೆಕ್ಷನ್ ನೀಡಿದ ಬಳಿಕ ದೇಹದಲ್ಲಿ ಏನಾಗುತ್ತದೆ? ಮೊದಲನೆಯದಾಗಿ, ದೇಹದ ಎಲ್ಲಾ ಸ್ನಾಯುಗಳು ಸ್ವಯಂಪ್ರೇರಿತವಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಉಸಿರಾಟಕ್ಕೆ ಕಾರಣವಾದ ಮುಖ್ಯ ಸ್ನಾಯು ಡಯಾಫ್ರಾಮ್ ಸಡಿಲಗೊಳ್ಳುತ್ತದೆ. ಇದರಿಂದಾಗಿ ಶ್ವಾಸಕೋಶಗಳು ಗಾಳಿಯನ್ನು ಒಳಗೆಳೆದುಕೊಳ್ಳುವುದನ್ನೇ ನಿಲ್ಲಿಸುತ್ತವೆ. ಶ್ವಾಸಕೋಶಗಳು ಕೆಲಸ ಮಾಡುವುದನ್ನು ನಿಲ್ಲಿಸಿದಾಗ, ರಕ್ತದಲ್ಲಿನ ಆಮ್ಲಜನಕದ ಮಟ್ಟ ವೇಗವಾಗಿ ಇಳಿಯುತ್ತದೆ. ಆಮ್ಲಜನಕದ ಕೊರತೆಯಿಂದಾಗಿ, ಹೃದಯ ಸ್ನಾಯುಗಳು ಬಡಿಯುವುದನ್ನು ನಿಲ್ಲಿಸುತ್ತವೆ.
ಸಕ್ರಿಯ ದಯಾಮರಣದಲ್ಲಿ ಹತ್ತೇ ನಿಮಿಷದೊಳಗೆ ಸಾವು. ಅರಿವಳಿಕೆ ಇಂಜೆಕ್ಷನ್ ಪಡೆದ 30ರಿಂದ 60 ಸೆಕೆಂಡುಗಳ ಒಳಗೆ ವ್ಯಕ್ತಿ ಪ್ರಜ್ಞಾಶೂನ್ಯನಾಗುತ್ತಾನೆ. ಎರಡನೇ ಇಂಜೆಕ್ಷನ್ ನಂತರ, ಹೃದಯ ಸ್ತಂಭನ ಮತ್ತು ಸಾವು ಸಾಮಾನ್ಯವಾಗಿ 2 ರಿಂದ 5 ನಿಮಿಷಗಳಲ್ಲಿ ಸಂಭವಿಸುತ್ತದೆ. ಒಟ್ಟಾರೆಯಾಗಿ, ಈ ಪ್ರಕ್ರಿಯೆ ಪ್ರಾರಂಭವಾದ ನಂತರ, ವೈದ್ಯರು ಸಾವನ್ನು ದೃಢೀಕರಿಸುವ ಕ್ಷಣದವರೆಗಿನ ಸಮಯ ಕೇವಲ 10 ನಿಮಿಷಕ್ಕಿಂತ ಕಡಿಮೆ ಎಂದು ವೈದ್ಯ ವಿಜ್ಞಾನ ಹೇಳುತ್ತದೆ. ಸಕ್ರಿಯ ದಯಾಮರಣವು ನೋವುರಹಿತ ಎಂದು ಹೇಳಲಾಗುತ್ತದೆ. ವೈದ್ಯಕೀಯ ತಜ್ಞರು ಈ ಪ್ರಕ್ರಿಯೆಯು ನೈಸರ್ಗಿಕ ಸಾವಿಗಿಂತ ಕಡಿಮೆ ನೋವಿನಿಂದ ಕೂಡಿದೆ ಎಂದು ಪ್ರತಿಪಾದಿಸುತ್ತಾರೆ. ಆದರೆ, ಇಲ್ಲಿ ವೈದ್ಯರು ನೋವುರಹಿತ ಸಾವಿಗೆ ನಿಖರ ಪ್ರಮಾಣದಲ್ಲಿ ಔಷಧಿಗಳನ್ನು ನೀಡುವುದು ಮುಖ್ಯ.
ಸಕ್ರಿಯ ದಯಾಮರಣವು ನೋವು ನೀಡುವುದಿಲ್ಲ ನಿಜ. ಆದರೆ, ಇದೊಂದು ‘ವೈದ್ಯಕೀಯ ಕಗ್ಗೊಲೆ’ ಎನ್ನಿಸಿಕೊಳ್ಳಬಹುದು ಎಂದು ಕಾನೂನು ತಜ್ಞರು ಕಳವಳ ವ್ಯಕ್ತಪಡಿಸುತ್ತಾರೆ. ಅಂಥ ಅಪವಾದಗಳನ್ನು ಹೊತ್ತುಕೊಳ್ಳಬಾರದು ಎನ್ನುವ ಕಾರಣಕ್ಕೇ ಭಾರತದ ಸಂವಿಧಾನ ಸದಾ ನಿಷ್ಕ್ರಿಯ ದಯಾಮರಣಕ್ಕೆ ಆದ್ಯತೆ ಕಲ್ಪಿಸುತ್ತದೆ. ರಾಣಾನ ಉಸಿರು ನಿಂತರೆ, ಈಗ ಅದು ನೈಸರ್ಗಿಕ ಸಾವು ಎನ್ನಿಸಿಕೊಳ್ಳುವುದು ಇದೇ ಕಾರಣಕ್ಕೆ. ಯುದ್ಧದ ಸಾವಿಗೂ, ದಯಾಮರಣದ ಸಾವಿಗೂ ಇರುವ ಅಂತರ ಇದು. ಒಂದು ಕಡೆ ಕ್ರೌರ್ಯ, ಇನ್ನೊಂದು ಕಡೆ ಕರುಣೆ ಮತ್ತು ಸಂಕಟ.