ಸಂತೋಷದ ಕ್ಷಣಗಳು ಕ್ಷಣಾರ್ಧದಲ್ಲಿ ಕಳೆದುಹೋದಂತೆ ಭಾಸವಾಗುತ್ತದೆ. ಆದರೆ ದುಃಖ, ನೋವು, ಭಯದ ಸಂದರ್ಭದಲ್ಲಿ ಸಮಯವು ಯುಗಗಳಂತೆ ಕಳೆಯುತ್ತದೆ. ಇದಕ್ಕೆ ಕಾರಣ ನಮ್ಮ ಮನಸ್ಸಿನ ಗ್ರಹಿಕೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು 'ಟೈಮ್ ಡೈಲೇಷನ್' ಎನ್ನುತ್ತಾರೆ. ಮೆದುಳಿನ ರಾಸಾಯನಿಕ ಬದಲಾವಣೆಗಳಿಂದ ಈ ಗ್ರಹಿಕೆಯ ದೋಷ ಉಂಟಾಗುತ್ತದೆ. ಈ ಸ್ಥಿತಿಯಿಂದ ಹೊರಬರಲು ಆಪ್ತ ಸಮಾಲೋಚನೆ ಅಗತ್ಯ.
ಸಮಯದ ಅನುಭವ, ಸಂತೋಷ-ದುಃಖಗಳಲ್ಲಿ ವ್ಯತ್ಯಾಸ: ವೈದ್ಯಕೀಯ ಭಾಷೆಯಲ್ಲಿ 'ಟೈಮ್ ಡೈಲೇಷನ್' ಎಂದರೇನು?
ಸಮಯವು ಕೆಲವೊಮ್ಮೆ ರೆಕ್ಕೆ ಬಿಚ್ಚಿ ಹಾರಿದಂತೆ, ಮತ್ತೆ ಕೆಲವೊಮ್ಮೆ ನಿಧಾನವಾಗಿ ಸಾಗುವಂತೆ ಭಾಸವಾಗುತ್ತದೆ. ಪ್ರೀತಿ, ಸಂತೋಷದ ಕ್ಷಣಗಳಲ್ಲಿ ಸಮಯ ಎಷ್ಟು ಬೇಗ ಕಳೆದುಹೋಗುತ್ತದೆ ಎಂದು ಗೊತ್ತಾಗುವುದಿಲ್ಲ. ಆದರೆ, ದುಃಖ, ಆತಂಕ, ನೋವಿನ ಸಂದರ್ಭಗಳಲ್ಲಿ ಒಂದು ಕ್ಷಣವೂ ಯುಗಗಳಂತೆ ಭಾಸವಾಗುತ್ತದೆ. ಈ ವ್ಯತ್ಯಾಸಕ್ಕೆ ಕಾರಣ ಹೊರಗಿನ ಸಮಯವಲ್ಲ, ನಮ್ಮೊಳಗಿನ ಗ್ರಹಿಕೆಯ ಬದಲಾವಣೆ ಎಂದು ವೈದ್ಯಕೀಯ ಭಾಷೆಯಲ್ಲಿ 'ಟೈಮ್ ಡೈಲೇಷನ್' ಅಥವಾ ಸಮಯದ ವಿಸ್ತರಣೆ ಎನ್ನಲಾಗುತ್ತದೆ. ಭೂಮಿಯ ಮೇಲ್ಮೈ ಮತ್ತು ಪರ್ವತಗಳ ಮೇಲೆ ಗುರುತ್ವಾಕರ್ಷಣೆಯ ವ್ಯತ್ಯಾಸದಿಂದ ಸಮಯದಲ್ಲಿ ಸೂಕ್ಷ್ಮ ವ್ಯತ್ಯಾಸಗಳಿದ್ದರೂ, ನಮ್ಮ ಅನುಭವಕ್ಕೆ ಬರುವಷ್ಟು ದೊಡ್ಡದಲ್ಲ. ಆದರೆ, ತೀವ್ರ ನೋವು, ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳಲ್ಲಿರುವ ವ್ಯಕ್ತಿಗಳಿಗೆ ಸಮಯವು ನಿಜವಾಗಿಯೂ ನಿಧಾನವಾಗಿ ಸಾಗುವಂತೆ ಭಾಸವಾಗುತ್ತದೆ. ಈ ಸ್ಥಿತಿಯು ಮೆದುಳಿನ ರಾಸಾಯನಿಕ ಬದಲಾವಣೆಗಳಿಂದ ಉಂಟಾಗುವ ತಾತ್ಕಾಲಿಕ ಗ್ರಹಿಕೆಯ ದೋಷವಾಗಿದೆ. ಈ ಕಷ್ಟಗಳೂ ಕಳೆದುಹೋಗುತ್ತವೆ ಎಂಬ ಭರವಸೆ, ಮುಕ್ತವಾಗಿ ಹಂಚಿಕೊಳ್ಳುವಿಕೆ, ಮತ್ತು ಅಗತ್ಯವಿದ್ದಲ್ಲಿ ತಜ್ಞರ ಸಲಹೆ ಪಡೆಯುವುದು ಮುಖ್ಯ ಎಂದು ಡಾ. ಲಕ್ಷ್ಮಣ್ ವಿ ಎ ಅವರು ವಿವರಿಸಿದ್ದಾರೆ."ಹೊತ್ತು ಕಳೆದಿತ್ತೆ ಗೊತ್ತಾಗಲಿಲ್ಲ" ಅಥವಾ "ಎಷ್ಟು ಬೇಗ ಈ ಸಮಯ ಸರಿದು ಹೋಯಿತು!" ಎನ್ನುವ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಪ್ರೇಮಿಗಳ ಭೇಟಿ, ಸ್ನೇಹಿತರೊಡನೆ ಮಾತುಕತೆ, ಹಬ್ಬ, ಮದುವೆಯಂತಹ ಸಂಭ್ರಮದ ಕ್ಷಣಗಳಲ್ಲಿ ಸಮಯ ಎಷ್ಟು ವೇಗವಾಗಿ ಕಳೆದುಹೋಗುತ್ತದೆ ಎಂದರೆ, ಯಾರೋ ಗಡಿಯಾರದ ಮುಳ್ಳನ್ನು ತಳ್ಳಿಬಿಟ್ಟರೇನೋ ಎಂಬ ಅನುಮಾನ ಬರುತ್ತದೆ. ಆದರೆ, ಇದೇ ಸಮಯ, ಆಪ್ತರ ಸಾವಿನ ಸುದ್ದಿ ಕೇಳಿದಾಗ, ಪರೀಕ್ಷೆಯ ಭಯ ಕಾಡಿದಾಗ, ದೊಡ್ಡ ಅಪಾಯ ಎದುರಾದಾಗ, ಯುದ್ಧ ಅಥವಾ ರೋಗದ ಆತಂಕದಲ್ಲಿರುವಾಗ ಕಳೆಯುವುದೇ ಕಷ್ಟವಾಗುತ್ತದೆ. ಆಗ ಗಡಿಯಾರದ ಮುಳ್ಳಿಗೆ ಯಾರೋ ಹಗ್ಗ ಹಾಕಿ ಎಳೆದು ನಿಧಾನಗೊಳಿಸುತ್ತಿದ್ದಾರೆ ಎಂಬಂತೆ ಭಾಸವಾಗುತ್ತದೆ. ಒಂದೊಂದು ನಿಮಿಷವೂ ಒಂದು ಯುಗ ಕಳೆದಂತೆ ಅನಿಸುತ್ತದೆ.
ಭೂಮಿಯ ಮೇಲ್ಮೈ ಮತ್ತು ಪರ್ವತಗಳ ಮೇಲೆ ಸಮಯ ಸ್ವಲ್ಪ ಭಿನ್ನವಾಗಿರುವುದು ನಿಜ. ಇದಕ್ಕೆ ಕಾರಣ ಗುರುತ್ವಾಕರ್ಷಣೆಯ ವ್ಯತ್ಯಾಸ. ಐನ್‌ಸ್ಟೈನ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ, ಗುರುತ್ವಾಕರ್ಷಣೆಯು ಸಮಯವನ್ನು ನಿಧಾನಗೊಳಿಸುತ್ತದೆ. ಭೂಮಿಯ ಮೇಲ್ಮೈಯಲ್ಲಿ ಗುರುತ್ವಾಕರ್ಷಣೆ ಹೆಚ್ಚಿರುವುದರಿಂದ ಸಮಯ ನಿಧಾನವಾಗಿರುತ್ತದೆ. ಪರ್ವತದ ಮೇಲೆ ಗುರುತ್ವಾಕರ್ಷಣೆ ಕಡಿಮೆಯಿರುವುದರಿಂದ ಸಮಯ ವೇಗವಾಗಿರುತ್ತದೆ. ಆದರೆ, ಈ ವ್ಯತ್ಯಾಸ ಬಹಳ ಕಡಿಮೆ. ಉದಾಹರಣೆಗೆ, ಭೂಮಿಯ ಮೇಲ್ಮೈಯಲ್ಲಿರುವ ಗಡಿಯಾರಕ್ಕೆ ಹೋಲಿಸಿದರೆ, ಎವರೆಸ್ಟ್ ಪರ್ವತದ ಮೇಲಿರುವ ಗಡಿಯಾರ ವರ್ಷಕ್ಕೆ ಸುಮಾರು 30 ಮೈಕ್ರೊಸೆಕೆಂಡುಗಳಷ್ಟು ವೇಗವಾಗಿ ಚಲಿಸುತ್ತದೆ. ಈ ವ್ಯತ್ಯಾಸ ನಮ್ಮ ಅನುಭವಕ್ಕೆ ಬರುವುದಿಲ್ಲ.
ಹಾಗಾದರೆ, ಮನುಷ್ಯನಿಗೆ ಒಂದೇ ಸಮಯ ಸಂತೋಷ ಮತ್ತು ಸಂಕಟಗಳಲ್ಲಿ ಏಕೆ ಹೀಗೆ ವ್ಯತಿರಿಕ್ತವಾಗಿ ಭಾಸವಾಗುತ್ತದೆ? ಹೊರಗಿನ ಸಮಯ ಒಂದೇ ಆಗಿದ್ದರೂ, ನಮ್ಮೊಳಗಿನ ಸಮಯ ಬದಲಾಗುವಂತೆ ಭಾಸವಾಗುವ ಈ ಪ್ರಕ್ರಿಯೆಯನ್ನು ವೈದ್ಯಕೀಯ ಭಾಷೆಯಲ್ಲಿ 'ಟೈಮ್ ಡೈಲೇಷನ್' ಅಥವಾ ಸಮಯದ ವಿಸ್ತರಣೆ ಎನ್ನುತ್ತಾರೆ.
ಇನ್ನು, ಆತ್ಮಹತ್ಯೆಯ ಆಲೋಚನೆ ಅಥವಾ ತೀವ್ರ ಖಿನ್ನತೆಯಿಂದ ಬಳಲುತ್ತಿರುವ ರೋಗಿಯ ಮನಸ್ಥಿತಿಯಲ್ಲಿ ಸಮಯ ವಿಭಿನ್ನವಾಗಿ ಕೆಲಸ ಮಾಡುತ್ತದೆ. ತೀವ್ರ ನೋವಿನಲ್ಲಿರುವ ವ್ಯಕ್ತಿಗೆ ಪ್ರತಿಯೊಂದು ಕ್ಷಣವೂ ಒಂದು ಯುಗದಂತೆ ಭಾಸವಾಗುತ್ತದೆ. ಹೊರಗಿನವರಿಗೆ ಕೇವಲ ಐದು ನಿಮಿಷಗಳಾಗಿರಬಹುದು, ಆದರೆ ಆ ರೋಗಿಗೆ ಆ ಐದು ನಿಮಿಷಗಳ ನೋವು ಅನಂತ ಕಾಲದಂತೆ ಭಾಸವಾಗುತ್ತದೆ. ಇದನ್ನು 'Psychological Time Dilation ' ಎಂದು ಕರೆಯಲಾಗುತ್ತದೆ.
ಸಮಯ ನಿಧಾನವಾದಂತೆ ಭಾಸವಾಗುವುದರಿಂದ ತಮ್ಮ ಕಷ್ಟಗಳು ಎಂದಿಗೂ ಮುಗಿಯುವುದಿಲ್ಲ ಮತ್ತು ಭವಿಷ್ಯದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆ ಮೂಡುತ್ತದೆ. ರೋಗಿಯ ಗಮನ ಕೇವಲ ಪ್ರಸ್ತುತ ಕ್ಷಣದ ನೋವಿನ ಮೇಲೆ ಮಾತ್ರ ಇರುತ್ತದೆ. ಇದರಿಂದಾಗಿ ಅವರಿಗೆ ಸಮಯದ ವಿಶಾಲತೆ ಅಥವಾ ಮುಂದಿನ ದಿನಗಳ ಸಕಾರಾತ್ಮಕತೆ ಕಾಣಿಸುವುದಿಲ್ಲ. ಒಬ್ಬ ರೋಗಿಯು "ನನ್ನ ನೋವು ಕೊನೆಗೊಳ್ಳುತ್ತಿಲ್ಲ" ಎಂದು ಹೇಳಿದಾಗ, ಅವರು ಭೌತಿಕ ಸಮಯದ ಬಗ್ಗೆ ಮಾತನಾಡುತ್ತಿರುವುದಿಲ್ಲ. ಬದಲಾಗಿ, ಅವರ ಮನಸ್ಸು ಅನುಭವಿಸುತ್ತಿರುವ ನಿಧಾನಗತಿಯ ಸಮಯದ ಬಗ್ಗೆ ಹೇಳುತ್ತಿರುತ್ತಾರೆ. ಈ ಸ್ಥಿತಿಯು ಮೆದುಳಿನ ರಾಸಾಯನಿಕ ಬದಲಾವಣೆಗಳಿಂದ ಉಂಟಾಗುವ ತಾತ್ಕಾಲಿಕ ಗ್ರಹಿಕೆಯ ದೋಷವಾಗಿದೆ.
"ಈ ಸಮಯವೂ ಸರಿದು ಹೋಗಲಿದೆ" ಎಂಬ ಭರವಸೆ ಸ್ವತಃ ವ್ಯಕ್ತಿಗೆ ಬರಬೇಕು. ತನ್ನೊಳಗಿನ ತುಮುಲ, ಆತಂಕಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಅಗತ್ಯವೆನಿಸಿದರೆ ಆಪ್ತ ಸಮಾಲೋಚನೆ ಹಾಗೂ ಮಾನಸಿಕ ತಜ್ಞರ ಭೇಟಿ ಮಾಡಬೇಕು.