ವಿಕ ಸುದ್ದಿಲೋಕ ಹುಣಸೂರು ತಂಬಾಕು ಬೆಳೆಗೆ ಬೆಂಬಲ ಬೆಲೆ ನೀಡುವುದರ ಜತೆಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಸೇರಿಸುವಂತೆ ಶಾಸಕ ಜಿ.ಡಿ.ಹರೀಶ್ ಗೌಡ ಸರಕಾರವನ್ನು ಆಗ್ರಹಿಸಿದರು. ವಿಧಾನಸಭಾ ಅಧಿವೇಶನದಲ್ಲಿತಂಬಾಕು ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಪ್ರಸ್ತಾಪಿಸಿದ ಅವರು, ‘‘ಪ್ರಸಕ್ತ ಸಾಲಿನಲ್ಲಿತಂಬಾಕು ಬೆಳೆ ತೀವ್ರ ಕುಸಿತ ಕಂಡಿದ್ದು, ರೈತರು ಆರ್ಥಿಕವಾಗಿ ಕಂಗಾಲಾಗಿದ್ದಾರೆ. ಬೆಲೆ ಕುಸಿತದಿಂದ ಉಂಟಾಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿದ ಅವರು, ರಾಜ್ಯದಲ್ಲಿಸುಮಾರು 50 ಸಾವಿರ ರೈತ ಕುಟುಂಬಗಳು ತಂಬಾಕು ಬೆಳೆ ಅವಲಂಬಿಸಿದ್ದು, ಪಿರಿಯಾಪಟ್ಟಣ, ಹುಣಸೂರು, ಎಚ್ .ಡಿ.ಕೋಟೆ, ಕೆ.ಆರ್ .ನಗರ, ಅರಕಲಗೂಡು ಭಾಗಗಳಲ್ಲಿಹೆಚ್ಚಿನ ಪ್ರಮಾಣದಲ್ಲಿಬೆಳೆಯಲಾಗುತ್ತಿದೆ. ಉತ್ತಮ ಗುಣಮಟ್ಟದ ಬೆಳೆ ಇದ್ದರೂ, ಬೆಲೆ ತೀವ್ರವಾಗಿ ಕುಸಿದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹುಣಸೂರು ತಾಲೂಕಿನ ಹಿರಿಕ್ಯಾತನಹಳ್ಳಿಯ ಮಹದೇವ ಎಂಬ ರೈತ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿರುವ ಘಟನೆ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ,’ ಎಂದು ವಿಷಾದ ವ್ಯಕ್ತಪಡಿಸಿದರು. ‘‘ಜನವರಿಯಲ್ಲಿಪ್ರತಿ ಕೆಜಿ ತಂಬಾಕಿಗೆ 278 ರೂ. ಇದ್ದ ಬೆಲೆ, ಫೆಬ್ರವರಿಯಲ್ಲಿ262 ರೂ. ಮತ್ತು ಮಾರ್ಚ್ನಲ್ಲಿ243 ರೂ.ಗಳಿಗೆ ಇಳಿದಿದ್ದು, ಕೇವಲ ಎರಡು ತಿಂಗಳಲ್ಲಿ34-35 ಕುಸಿತವಾಗಿದೆ. ಪ್ರಸ್ತುತ 45 ರೂ.ವರೆಗೆ ಬೆಲೆ ಇಳಿಕೆಯಾಗಿದೆ. ಆದರೆ, ಒಬ್ಬ ರೈತ ಪ್ರತಿ ಕೆಜಿ ತಂಬಾಕು ಬೆಳೆಯಲು ಕನಿಷ್ಠ 185ರೂ. ವೆಚ್ಚವಾಗುತ್ತಿದೆ,’’ ಎಂದು ಹೇಳಿದರು. ಎಲ್ಲವಿಷಯಗಳಿಗೂ ಕೇಂದ್ರ ಸರಕಾರವನ್ನೇ ಅವಲಂಬಿಸದೇ ರಾಜ್ಯ ಸರಕಾರವೇ ಕ್ರಮಕೈಗೊಳ್ಳಬೇಕು. ಈ ಸಂಬಂಧವಾಗಿ ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿಕೇಂದ್ರ ಸರಕಾರದ ಗಮನಕ್ಕೂ ವಿಷಯವನ್ನು ತಂದಿರುವುದಾಗಿ ಹೇಳಿದ ಅವರು, ರಾಜ್ಯ ಸರಕಾರ ತಂಬಾಕು ಖರೀದಿಸಲು ಸಾಧ್ಯವಾಗದಿದ್ದಲ್ಲಿ, ಕನಿಷ್ಠ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು.

