ವಿಕ ಸುಧಿದ್ದಿಧಿಲೋಕ ಹುಣಸೂರು ಮೇವಿಗಾಗಿ ನಾಗರಹೊಳೆ ಉದ್ಯಾನದಿಂದ ಹೊರಬಂದಿದ್ದ ಕಾಡಾನೆಯೊಂದು ಮರಳಿ ಕಾಡಿಗೆ ಸೇರಲು ರೈಲ್ವೆ ಕಂಬಿ ತಡೆಗೋಡೆ ಮೂಲಕ ನುಸುಳಲು ಹೋಗಿ ಕಂಬಿಗೆ ಸಿಲುಕಿ ಕೆಲ ಹೊತ್ತು ಒದ್ದಾಡಿದ ಘಟನೆ ಹುಣಸೂರು ವನ್ಯಜೀವಿ ವಲಯದ ಐಯ್ಯನಕೆರೆ ಹಾಡಿ ಬಳಿ ನಡೆದಿದೆ. ಮಂಗಳವಾರ ರಾತ್ರಿ ಉದ್ಯಾನದಿಂದ ಮೇವನ್ನರಸಿ ಹೊರಬಂದಿದ್ದ ಸುಮಾರು 25-30 ವರ್ಷದ ಕಾಡಾನೆಯು ಸುತ್ತಮುತ್ತಲ ತೋಟಗಳಲ್ಲಿಅಡ್ಡಾಡಿ ಹೊಟ್ಟೆ ತುಂಬಿಸಿಕೊಂಡಿದೆ. ಬೆಳಗಿನ ಜಾವ ಗ್ರಾಮಗಳಲ್ಲಿವಾಹನಗಳ ಓಡಾಟ ಹಾಗೂ ಉದ್ಯಾನ ದಾಟಿ ಬಂದಿರುವ ಕಾಡಾನೆಯನ್ನು ಕಂಡು ಜನರು ಕೂಗಾಟ ನಡೆಸಿ ಕಾಡಿನತ್ತ ಓಡಿಸಿದ್ದಾರೆ. ಗಾಬರಿಗೊಂಡಿದ್ದ ಆನೆಯು ಉದ್ಯಾನ ಸೇರಿಕೊಳ್ಳಲು ರೈಲ್ವೆ ಕಂಬಿ ಹಳಿಯನ್ನು ನುಸಳಲು ಹೋಗಿ ಸಿಲುಕಿದೆ. ಘೀಳಿಡುತ್ತಾ ಒದ್ದಾಡಿದೆ. ಕೊನೆಗೂ ಒದ್ದಾಡಿ ಒದ್ದಾಡಿ ಕಾಡು ಸೇರಿಕೊಂಡು ನಿಟ್ಟುಸಿರು ಬಿಟ್ಟಿದೆ. ಸ್ಥಳಕ್ಕೆ ಆನೆ ಕಾವಲು ಪಡೆ, ಅರಣ್ಯ ಸಿಬ್ಬಂದಿ ಧಾವಿಸಿದ್ದರು ಎಂದು ಆರ್ ಎಫ್ ಒ ಸುಬ್ರಮಣಿ ತಿಳಿಸಿದ್ದಾರೆ. ಜನರ ಕೂಗಾಟದಿಂದ ಗಾಬರಿಗೊಂಡಿದ್ದ ಸಲಗವು ಉದ್ಯಾನದೊಳಕ್ಕೆ ಸೇರುವ ಭರದಲ್ಲಿರೈಲ್ವೆಕಂಬಿ ಹಳೆ ತಡೆಗೋಡೆ ಕೆಳಗೆ ಸಿಲುಕಿ ಕೊಂಡಿತ್ತು. ಕೊನೆಗೂ ಮೇಲೆದ್ದು ಉದ್ಯಾನವನ ಸೇರಿಕೊಂಡಿತೆಂದು ಎಸಿಎಫ್ ಲಕ್ಷ್ಮಿಕಾಂತ್ ಮಾಹಿತಿ ನೀಡಿದ್ದಾರೆ.

