ಹೋರಾಟದ ಫಲವಾಗಿ 1 ಕೋಟಿ ರೂ. ಅನುದಾನ ಮಂಜೂರು
ವಿಕ ಸುದ್ದಿಲೋಕ ಕಡಬ
ಕಡಬ ತಾಲೂಕಿನ ಐತ್ತೂರು ಗ್ರಾಮದ ಸುಂಕದಕಟ್ಟೆ- ಮುಜೂರುಕಟ್ಟ ರಸ್ತೆ ಅಭಿವೃದ್ಧಿಗೆ ಹಲವು ವರ್ಷಗಳ ಹೋರಾಟದ ಫಲವಾಗಿ ಸರಕಾರದಿಂದ 1 ಕೋಟಿ ರೂ. ಅನುದಾನ ಮಂಜೂರುಗೊಂಡಿದ್ದು, ಕಾಮಗಾರಿಗೆ ಚಾಲನೆ ನೀಡಲಾಯಿತು.
ದುಸ್ಥಿತಿಯಲ್ಲಿದ್ದ ರಸ್ತೆಯ ಅಭಿವೃದ್ಧಿ ಪಡಿಸುವ ಬೇಡಿಕೆ ಮುಂದಿಟ್ಟುಕೊಂಡು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ಭಟ್ ಮುಜೂರುಕಟ್ಟ ಅವರು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಬೇಸತ್ತು 2024 ಫೆ. 8 ರಂದು ಬೆಂಗಳೂರಿನಲ್ಲಿನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಸ್ಪಂದನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ್ದರು. ಒಂದು ವರ್ಷ ಕಳೆದರೂ ಫಲ ನೀಡದ ಹಿನ್ನೆಲೆಯಲ್ಲಿ 2025ರ ಆರಂಭದಲ್ಲಿ ಮುಖ್ಯಮಂತ್ರಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗೆ ಒಟ್ಟು 45 ದಿನ ದಿನಕ್ಕೊಂದು ಪೋಸ್ ಕಾರ್ಡ್ ಬರೆದು ಗಮನ ಸೆಳೆದಿದ್ದರು. ಅದರ ಫಲವಾಗಿ ಸರಕಾರವು 1 ಕೋಟಿ ರೂ. ಅನುದಾನ ಮಂಜೂರು ಮಾಡಿತ್ತು. ಆ ಪೈಕಿ 2026 ಫೆ.16 ರಂದು ಪ್ರಥಮ ಹಂತದಲ್ಲಿ 20 ಲಕ್ಷ ರೂ. ಅನುದಾನ ಬಿಡುಗಡೆಯಾಗಿ ರಸ್ತೆಯನ್ನು ಕಾಂಕ್ರೀಟ್ ಹಾಕಿ ಅಭಿವೃದ್ಧಿಗೊಳಿಸುವ ಕಾಮಗಾರಿ ಆರಂಭಗೊಂಡಿದೆ.
ಮಂಜೂರುಗೊಂಡ 1 ಕೋಟಿ ರೂ. ಅನುದಾನದ ಪೈಕಿ 20 ಲಕ್ಷ ರೂ. ಅನುದಾನ ಬಿಡುಗಡೆ ಗೊಂಡಿದ್ದು, ಶನಿವಾರ ಭೂಮಿ ಪೂಜೆ ನಡೆದು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಹಂತ ಹಂತವಾಗಿ ಉಳಿದ ಅನುದಾನ ಬಿಡುಗಡೆಯಾಗಲಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಪುರೋಹಿತ ಗೋಪಾಲಕೃಷ್ಣ ಭಟ್ ನೆಟ್ಟಣ ಭೂಮಿಪೂಜೆಯ ಧಾರ್ಮಿಕ ವಿಧಿ ನೆರವೇರಿಸಿದರು. ಅನುದಾನಕ್ಕಾಗಿ ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ಭಟ್ ಮುಜೂರುಕಟ್ಟ, ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್ , ಗುತ್ತಿಗೆದಾರ ಅಬ್ದುಲ್ ಖಾದರ್ ಬಿ.ಕೆ., ಸಿವಿಲ್ ಕಂಟ್ರಾಕ್ಟರ್ ಜಯಕುಮಾರ್ ಆರ್ . ನಾಯರ್ , ಸಿದ್ಧಾರ್ಥ ಜೆ. ನಾಯರ್ , ಮುರಳೀಧರ ಮಠಂತಬೆಟ್ಟು, ಸ್ಥಳೀಯ ಪ್ರಮುಖರಾದ ಕುರಿಯಾಕೋಸ್ , ಲಿಂಗಪ್ಪ ಗೌಡ, ನಿತಿನ್ ಗೌಡ ಉರುಂಬಿ, ಮನಮೋಹನ ಗೋಳ್ಯಾಡಿ, ಇಸ್ಮಾಯಿಲ್ ಕೆ., ಎಂ.ಪಿ.ಯೂಸುಫ್ , ಶಿವಪ್ರಸಾದ್ ಮೀನಾಡಿ, ಸತೀಶ್ ಮೀನಾಡಿ, ಸುಬ್ಬಣ್ಣ ಭಟ್ , ಬಿನೋಯ್ ಮ್ಯಾಥ್ಯೂ, ಗಣೇಶ್ ಮುಜೂರು, ಪುಟ್ಟಣ್ಣ ಮಯ್ಯ, ಅರ್ಚನ ಎಸ್ . ಭಟ್ , ಸ್ವಾತಿ ಅನಂತ ಭಟ್ ಉಪಸ್ಥಿತರಿದ್ದರು.
(ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಯಿತು: ಫೊಟೋ ಫೈಲ್ ನೇಮ್ 28ಕೆಡಿಬಿ ಕೆಬಿ)

