ಹೆಗ್ಗನೂರಲ್ಲಿಕಾಳಮ್ಮ ಜಾತ್ರೆ ಸಂಪನ್ನ
* ಗ್ರಾಮದ ಬೀದಿಗಳಿಗೆ ತಳಿರು ತೋರಣ, ರಂಗೋಲಿ ಅಲಂಕಾರ
* ಸಂಭ್ರದ ಧಾರ್ಮಿಕ ಮಹೋತ್ಸವ
ವಿಕ ಸುದ್ದಿಲೋಕ ಸರಗೂರು
ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬುಧವಾರ ಮಹೇಶ್ವರಿ ಕಾಳಮ್ಮನವರ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಜಾತ್ರೆ ಅಂಗವಾಗಿ ಹೆಗ್ಗನೂರು ಗ್ರಾಮದ ಎಲ್ಲಬೀದಿಗಳಿಗೆ ತಳಿರು-ತೋರಣ ಕಟ್ಟಿ, ರಂಗೋಲಿ ಬಿಡಿಸಿ ವಿದ್ಯುತ್ ದೀಪ ಅಳವಡಿಸಲಾಗಿತ್ತು. ದೇವಸ್ಥಾನದಲ್ಲಿವಿಶೇಷ ಹೋಮ-ಹವನಗಳು ಮುಂಜಾನೆ 5ರಿಂದಲೇ ಆರಂಭವಾದವು. ಸುಪ್ರಭಾತ ಸೇವೆ, ವಿಶೇಷ ಪಂಚಾಮೃತ ಅಭಿಷೇಕ ನಡೆಯಿತು.
ಭಕ್ತಾದಿಗಳಿಂದ ಉರುಳು ಸೇವೆ ಮಾಡಿ, ಕ್ಷೇತ್ರದ ಈಶಾನ್ಯ ದಿಕ್ಕಿನಲ್ಲಿರುವ ಹೆಬ್ಬಳದ ತೊರೆಯಿಂದ ಗಂಗಾ ಪೂಜೆ ಮಾಡಿ, ನಂತರ ಭಕ್ತಾದಿಗಳು ಬಾಯಿಬೀಗ ಹರಕೆ, ಮುಡಿ ಮುಗಿಸಿ ಸತ್ತಿಗೆಗಳು, ನಂದಿಧ್ವಜ ಉಮಾ ಮಹೇಶ್ವರಸ್ವಾಮಿ ದೇವರ ರುದ್ರಾಕ್ಷಿ ಮಂಟಪದೊಂದಿಗೆ ಪಂಜಿನ ಸೇವೆ, ನಾದಸ್ವರ, ವಾದ್ಯಗೋಷ್ಠಿ, ಬ್ಯಾಂಡ್ ಸೆಟ್ , ವೀರಗಾಸೆ ನೃತ್ಯ, ಗಾರುಡಿಗೊಂಬೆ, ಕೋಲಾಟ, ನೃತ್ಯವಾದ್ಯ, ಚಂಡಿವಾದ್ಯ, ಮಂಗಳವಾದ್ಯ, ಡಿ.ಜೆ.ಸೌಂಡ್ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿಮೆರವಣಿಗೆ ಮೂಲಕ ದೇವರನ್ನು ದೇವಸ್ಥಾನದ ಬಳಿಗೆ ಕರೆತರಲಾಯಿತು.
ನಂತರ ಉಯ್ಯಾಲೆ ಸೇವೆ ಮೂಲಕ ಗರ್ಭಗುಡಿ ಸೇರಿಸಿ ಪಟ್ಟಕ್ಕೆ ಕುಳಿತು ಗಣಪತಿ ಪೂಜೆ, ನವಗ್ರಹ ಪೂಜೆ, ಹೋಮ, ಸಹಸ್ರನಾಮ, ಪೂರ್ಣಾಹುತಿ, ಮಂಗಳಾರತಿ ನೆರವೇರಿಸಲಾಯಿತು. ರಾತ್ರಿ 1ಗಂಟೆಗೆ ದೇವಸ್ಥಾನದಿಂದ ಪ್ರಾರಂಭಗೊಂಡ ರಥೋತ್ಸವವು ಗ್ರಾಮದ ಪ್ರಮುಖ ರಸ್ತೆಯಲ್ಲಿಶ್ರೀ ಮಹೇಶ್ವರಿ ಕಾಳಮ್ಮನವರಿಗೆ ಜೈಕಾರ ಹಾಕುವ ಮೂಲಕ ಭಕ್ತರು ರಥ ಎಳೆದು ತಮ್ಮ ಹರಕೆ ತೀರಿಸಿದರು. ಗುರುವಾರ ಬೆಳಗ್ಗೆ ಮಹಾಮಂಗಳರಾತಿ ನಡೆಸಿ ಉತ್ಸವ ಮೂರ್ತಿಯನ್ನು ಸ್ವಸ್ಥಾನಕ್ಕೆ ಸೇರಿಸಲಾಯಿತು.
ಜಾತ್ರೆ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ರಸಮಂಜರಿ ಕಾರ್ಯಕ್ರಮ ಜರುಗಿತು. ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಕ್ತರು ಮನೆಗಳ ಮುಂದೆ ಪಾನಕ, ಮಜ್ಜಿಗೆ ಕೋಸಂಬರಿ ವಿತರಣೆ ಮಾಡಿದರು.
ದೇವಸ್ಥಾನಕ್ಕೆ ಜೆಡಿಎಸ್ ಮುಖಂಡ ಕೃಷ್ಣನಾಯಕ ಭೇಟಿ ನೀಡಿ, ದೇವರ ದರ್ಶನ ಪಡೆದು ಹರಕೆ ತೀರಿಸಿದರು. ಸಮಿತಿ ಅಧ್ಯಕ್ಷ ಶಿವಣ್ಣೇಗೌಡ, ಒಕ್ಕಲಿಗರ ಸಂಘದ ಸರಗೂರು ತಾಲೂಕು ಅಧ್ಯಕ್ಷ ಸುಧೀರ್ ಗೌಡ, ವಕೀಲರಾದ ಟ್ರಸ್ಟ್ ಕಾರ್ಯದರ್ಶಿ ಸತೀಶ್ ಗೌಡ, ಯಜಮಾನರಾದ ರವಿಗೌಡ, ಗೋವಿಂದೇಗೌಡ, ಜಯರಾಮೇಗೌಡ, ಶಿವಚಂದ್ರ, ತಾಪಂ ಮಾಜಿ ಸದಸ್ಯ ರಮೇಶ್ , ಉದಯ್ ಕುಮಾರ್ , ಮೊಳೆಯೂರು ದಿಲೀಪ್ , ಪ್ರಶಾಂತ್ ಗೌಡ, ಎಚ್ .ಸಿ. ಲೇಖನ್ ಕುಮಾರ್ , ಡಾ.ರಾಮರಾಜ್ ಇತರರಿದ್ದರು.
ಎಂವೈಎಸ್ ಎಸ್ ಆರ್ ಜಿ ನ್ಯೂಸ್ 5-3-2026(2)
ಸರಗೂರು ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಹೇಶ್ವರಿ ಕಾಳಮ್ಮನವರ ಜಾತ್ರಾ ರಥೋತ್ಸವ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು.

