ಹಾಡು ಕೇಳುಗರ ಮುಖದಲ್ಲಿಪ್ರತಿಫಲಿಸಲಿ
ಕಿಕ್ಕರ್ : ವಿಕ ಲವಲವಿಕೆಯೊಂದಿಗೆ ಗಾಯಕ ಪಂ. ಸಂಜೀವ ಅಭ್ಯಂಕರ ಮಾತು
ಚಿತ್ರಾ ಸಂತೋಷ್
ಮಾಧುರ್ಯ ದನಿಗೆ ಹೆಸರಾದವರು ಪಂ. ಸಂಜೀವ ಅಭ್ಯಂಕರ. ಪುಣೆ ಮೂಲದ ಇವರು ‘ಗಾಡ್ ಮದರ್ ’ ಸಿನಿಮಾದ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದವರು. ಜಾವೇದ್ ಅಖ್ತರ್ ಸಾಹಿತ್ಯದ ‘ಸುನೊರೇ ಸುನೋರೇ ಬೈಲಾ’ ಎಂಬ ರಾಜಸ್ಥಾನಿ ಜನಪದೀಯ ಶೈಲಿಯ ಪ್ರಭಾವ ಇರುವ ಗೀತೆಯನ್ನು ತಮ್ಮ ಮಧುರ ಕಂಠದಿಂದ ಜನಮಾನಸಗೊಳಿಸಿದವರು ಅಭ್ಯಂಕರ.
ಮೇವಾತಿ ಘರಾಣೆಯ ಪಂ. ಜಸ್ ರಾಜ್ ಅವರ ಬಳಿ ಗುರು-ಶಿಷ್ಯ ಪರಂಪರೆಯಲ್ಲಿಯೇ ಕಲಿತ ಇವರು ಇತ್ತೀಚೆಗೆ ಬೆಂಗಳೂರಿನ ಸಪ್ತಕ ಮತ್ತು ಪುಣೆಯ ಮಿತ್ರ ಫೌಂಡೇಶನ್ ಸಹಯೋಗದಲ್ಲಿನಡೆದ ‘ಸ್ವರ ಉತ್ಸವ’ದಲ್ಲಿಹಾಡಿದರು.
ತಮ್ಮ ವೃತ್ತಿಬದುಕಿನ ಜೊತೆಗೆ ಅನನ್ಯ ನಂಟಿರುವ ‘ಪೂರ್ವಿ’ ಮತ್ತು ‘ಚಂದ್ರಕೌಂಸ್ ’ ರಾಗಗಳನ್ನು ಸ್ವರ ಉತ್ಸವದಲ್ಲಿಪ್ರಸ್ತುತಿಪಡಿಸಿದ್ದು ವಿಶೇಷ. 11 ವರ್ಷಗಳ ಹಿಂದೆ ತಮ್ಮ ಪ್ರಪ್ರಥಮ ರೆಕಾರ್ಡಿಂಗ್ ನಲ್ಲಿಅಭ್ಯಂಕರ ಅವರು ಹಾಡಿದ್ದು ಇದೇ ‘ಪೂರ್ವಿ’. ಈ ರಾಗ ಕೇಳಿದ ಅನೇಕರು ತಮ್ಮ ಮಗಳಿಗೆ ‘ಪೂರ್ವಿ’ ಎಂಬ ಹೆಸರಿಟ್ಟಿದ್ದು ವೃತ್ತಿಪರ ಗಾಯಕರೋರ್ವರಿಗೆ ಸಂದ ಗೌರವವೂ ಹೌದು. ‘ಚಂದ್ರಕೌಂಸ್ ’ ರಾಗ ಇವರ ಬಾಲ್ಯದ ಪ್ರೀತಿ. ತಮ್ಮ ಹದಿಮೂರರ ವಯಸ್ಸಲ್ಲಿಕನ್ನಡ ನೆಲದಲ್ಲಿನಡೆದ ಮೊದಲ ಕಛೇರಿಯಲ್ಲಿಹಾಡಿದ್ದು ಇದೇ ಚಂದ್ರಕೌಂಸ್ ರಾಗವನ್ನೇ. ಕಛೇರಿಯಲ್ಲಿತನ್ಮಯತೆಯಿಂದ ರಾಗದೊಂದಿಗೆ ಬೆಸೆದು ಹಾಡುವ ಅಭ್ಯಂಕರ ಅವರು ‘ನನ್ನ ಗಾಯನ ಶ್ರೋತೃಗಳ ಮುಖದಲ್ಲಿಪ್ರತಿಫಲಿಸಿದರೆ ಸಾಕು’ ಎನ್ನುತ್ತಾರೆ.
ಚಿಕ್ಕ ವಯಸ್ಸಿನಲ್ಲೇ ಹಾಡಲು ಶುರು ಮಾಡಿದ್ದೀರಿ. ಪಂ.ಜಸ್ ರಾಜ್ ನಿಮ್ಮ ದನಿಯನ್ನು ‘ಬಿರುಗಾಳಿ’ಗೆ ಹೋಲಿಸಿದ್ದಾರಂತೆ?. ನನ್ನ ತಾಯಿ ಶೋಭಾ ಅಭ್ಯಂಕರ ಸಂಗೀತದಲ್ಲಿಎಂಎ, ಪಿಎಚ್ .ಡಿ ಮಾಡಿದವರು. ಹಾಗಾಗಿ, ನನಗೆ ಎಂಟು ತುಂಬುವಾಗಲೇ ಪ್ರತಿದಿನ ರಿಯಾಜ್ ಶುರುವಾಗಿತ್ತು. ಆ ವಯಸ್ಸಿನಲ್ಲೇ ಬಹಳ ಬೇಗ ಸಂಗೀತದ ಆಳ-ಅಗಲಗಳನ್ನು ಅರ್ಥಮಾಡಿಕೊಳ್ಳುವವನಾಗಿದ್ದೆ. ಆಗ ನನ್ನನ್ನು ‘ವಂಡರ್ ಬಾಯ್ ’ ಎಂದು ಕರೆಯುತ್ತಿದ್ದರಂತೆ. ಆಗೆಲ್ಲಾಹೀರಾಬಾಯಿ ಬಡೋದೆಕರ್ , ಭೀಮಸೇನ ಜೋಷಿ, ಜಸ್ ರಾಜ್ ಅವರನ್ನೆಲ್ಲಾಮುಖತಃ ನೋಡುವ, ಅವರ ಕಛೇರಿ ಕೇಳುವ ಅವಕಾಶ ಸಿಗುತ್ತಿತ್ತು. ನನ್ನ ಪ್ರತಿಭೆಯ ಅರಿವಿದ್ದ ಗಂಗೂಬಾಯಿಯವರು ‘ಕುಂದಗೋಳ ಸವಾಯಿ ಗಂಧರ್ವ’ ಉತ್ಸವದಲ್ಲಿಹಾಡಲು ಕರೆದಿದ್ದರು. ನನಗಾಗ 13 ವರ್ಷ. ಅಲ್ಲಿಹಾಡಿದ್ದೂ ಚಂದ್ರಕೌಂಸ್ ರಾಗ. ಆ ಗಾಯನ ಕೇಳಿದ ಜಸ್ ರಾಜ್ ಅವರು ಅಮ್ಮನ ಬಳಿ (ಶೋಭಾ ಅಭ್ಯಂಕರ ಕೂಡಾ ಜಸ್ ರಾಜ್ ಶಿಷ್ಯೆ) ‘ನಿನ್ನ ಮಗ ಬಿರುಗಾಳಿ ತರ ಹಾಡಿದ್ದ, ಅವನ ನನ್ನ ಬಳಿ ಕಳಿಸು’ ಎಂದಿದ್ದರು.
ಎಷ್ಟು ವರ್ಷ ಕಲಿತಿರಿ ಜಸ್ ರಾಜ್ ಬಳಿ? ಓರ್ವ ಗುರುವಾಗಿ ಜಸ್ ರಾಜ್ ಹೇಗಿದ್ದರು?
ನನಗೆ 13 ವರ್ಷ ಇದ್ದಾಗ ಅವರ ಪಾಠ ಶುರುವಾಯಿತು. ಹತ್ತು ವರ್ಷ ನಿರಂತರ ಕಲಿಕೆ. ಆ ಹತ್ತು ವರ್ಷದಲ್ಲಿಸುಮಾರು 4 ವರ್ಷ ನನ್ನ ದನಿ ಬದಲಾವಣೆಯ ಘಟ್ಟವಾಗಿತ್ತು. ಆ ಸಮಯದಲ್ಲಿಕಛೇರಿಯ ಪಾಠಗಳು ನಡೆದವು. ತದನಂತರ ಬರೀ ರಿಯಾಜ್ .
ಬೆಳಗ್ಗೆ ನಾಲ್ಕೂವರೆಗೆ ಅಭ್ಯಾಸ ಶುರುವಾಗುತ್ತಿತ್ತು. ಜೊತೆಗೆ ಗುರುಗಳೊಂದಿಗೆ ನಿರಂತರ ಪ್ರಯಾಣ. 300ಕ್ಕೂ ಹೆಚ್ಚು ಕಛೇರಿಗಳಲ್ಲಿವೋಕಲ್ ಸಪೋರ್ಟ್ ನೀಡಿದೆ. ಆ ಸಮಯದಲ್ಲಿಪರ್ಫಾಮರ್ ಆಗಲು ನಾನೇನು ರೂಢಿಸಿಕೊಳ್ಳಬೇಕೆಂದು ಅವರು ಗಂಭೀರವಾಗಿ ಅರಿವಾಗಿಸಿದರು. ಅವರ ವ್ಯಕ್ತಿತ್ವದ ಬಗ್ಗೆ ಹೇಳಬೇಕಾದರೆ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಕಲಿಕೆಯಲ್ಲಿಸಣ್ಣ ತಪ್ಪನ್ನೂ ಸಹಿಸುತ್ತಿರಲಿಲ್ಲ.
ಮಾಧುರ್ಯ ತುಂಬಿದ ನಿಮ್ಮ ದನಿಯ ಹಿಂದಿನ ಕಸರತ್ತು ಏನು?
ಪುಟ್ಟ ವಯಸ್ಸಿನಿಂದಲೇ ಪಳಗಿದ ದನಿ ನನ್ನದು. ಯಾವ ಸ್ವರವನ್ನು ಎಷ್ಟು ಒತ್ತು ಕೊಟ್ಟು ಹಾಡಬೇಕು, ಹೇಗೆ ಅಭ್ಯಾಸ ಮಾಡಬೇಕೆಂದು ಮೊದಲಿನಿಂದಲೂ ರೂಢಿಸಿಕೊಂಡೆ. ದಿನವೂ ಅಭ್ಯಾಸ ನಡೆಯುತ್ತಿತ್ತು. ಈಗ ಅಗತ್ಯವಿದ್ದರೆ ಮಾತ್ರ ರಿಯಾಜ್ ಮಾಡುತ್ತೇನೆ, ದನಿಗೆ ವಿಶ್ರಾಂತಿ ನೀಡುವುದೂ ಒಂದು ಬಗೆಯ ರಿಯಾಜ್ ಎಂದೇ ಭಾವಿಸುತ್ತೇನೆ. ವಾರಕ್ಕೆ ಎರಡೇ ಕಛೇರಿ ಒಪ್ಪಿಕೊಳ್ಳುತ್ತೇನೆ. ಹಾಗೆಯೇ ಸೇಬು, ಬಾಳೆಹಣ್ಣು, ಮೊಸರು ಮೊದಲಾದ ಗಂಟಲಿಗೆ ತೊಂದರೆ ಕೊಡುವ ಆಹಾರಗಳಿಂದ ದೂರವಿರುತ್ತೇನೆ.
ಹಿನ್ನೆಲೆ ಗಾಯನಕ್ಕೆ ರಾಷ್ಟ್ರೀಯ ಪುರಸ್ಕಾರ ಪಡೆದಿರಿ, ಮತ್ತೆ ಸಿನಿಮಾ ಅವಕಾಶಗಳ ಬಗ್ಗೆ ಯೋಚಿಸಿಲ್ಲವೇ?
ಸಾಕಷ್ಟು ಶಾಸ್ತ್ರೀಯ ಸಂಗೀತ ಕಛೇರಿಗಳು ಸಿಗುತ್ತವೆ. ಹಾಗಾಗಿ, ಇಲ್ಲಿನನ್ನ ಸ್ವಪ್ರತಿಭೆಗೆ ಹೆಚ್ಚು ಅವಕಾಶವೂ ಇದೆ. ‘ಗಾಡ್ ಮದರ್ ’ ನಂತರವೂ ನಾಲ್ಕೈದು ಹಾಡು ಹಾಡಿರುವೆ. ಆದರೆ, ಸಿನಿಮಾರಂಗದ ಅವಕಾಶಗಳನ್ನು ನಾನಾಗಿಯೇ ಹುಡುಕೊಂಡು ಹೋಗುವುದಿಲ್ಲ, ಏನಿದ್ದರೂ ಶಾಸ್ತ್ರೀಯ ಸಂಗೀತ ಮೊದಲ ಆದ್ಯತೆ.
ಕೃತಕ ಬುದ್ಧಿಮತ್ತೆ ಶಾಸ್ತ್ರೀಯ ಸಂಗೀತಕ್ಕೆ ತೊಡಕಾಗಬಹುದೇ?
ನಾನು ನಾಳೆ ಏನು ಹಾಡುತ್ತೇನೆ ಎನ್ನುವುದನ್ನು ಎಐ ಊಹಿಸಲು ಸಾಧ್ಯವಿಲ್ಲ. ಯಾವುದೇ ರಾಗ ಹಾಡಿದರೂ ವೇದಿಕೆಯಲ್ಲಿಅದು ಮರುರೂಪ ಪಡೆಯುತ್ತದೆ. ಅದನ್ನೇ ನಾವು ‘ಮನೋಧರ್ಮ ಸಂಗೀತ’ ಎನ್ನುವುದು. ಈ ಮನೋಧರ್ಮ ಸಂಗೀತವನ್ನು ಎಐ ಸೃಷ್ಟಿಸಲು ಸಾಧ್ಯವಿಲ್ಲ.

