ಹೇಮಲತಾ ಕೆ.ಎಸ್
ವಿಭಿನ್ನ ರುಚಿಯ ಮಾವಿನ ಶುಂಠಿ
ಚಟ್ನಿ
ಸಾಮಗ್ರಿ: ಮಾವಿನ ಶುಂಠಿ ತುರಿ 1/2 ಕಪ್ , ತೆಂಗಿನ ತುರಿ 1 ಕಪ್ , ಹಸಿಮೆಣಸಿನಕಾಯಿ 4, ಉಪ್ಪು ರುಚಿಗೆ ತಕ್ಕಷ್ಟು. ತುಪ್ಪ 2 ಚಮಚ, ಸಾಸಿವೆ 1ಚಮಚ, ಜೀರಿಗೆ 1 ಚಮಚ, ಹುಣ್ಣಸೆ ಹಣ್ಣು ಸ್ವಲ್ಪ, ಇಂಗು ಸ್ವಲ್ಪ, ಕರಿಬೇವು 10 ಎಲೆಗಳು, ಕೊತ್ತಂಬರಿ ಸೊಪ್ಪು ಸ್ವಲ್ಪ.
ವಿಧಾನ: ಬಾಣಲೆಯನ್ನು ಬಿಸಿ ಮಾಡಿ ತುಪ್ಪ ಹಾಕಿ ಹಸಿಮೆಣಸಿನಕಾಯಿ, ಶುಂಠಿ ತುರಿ, ತೆಂಗಿನ ತುರಿಯನ್ನು ಕೆಂಪಗೆ ಹುರಿದು ತಣಿಸಿ. ಮಿಕ್ಸಿ ಜಾರಿಗೆ ಹಾಕಿ ಹುಣ್ಣಸೆ ಹಣ್ಣು, ಉಪ್ಪು, ಕೊತ್ತಂಬರಿ ಸೇರಿಸಿ ನುಣ್ಣಗೆ ರುಬ್ಬಿ. ಬಾಣಲೆ ಬಿಸಿ ಮಾಡಿ ತುಪ್ಪ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಇಂಗು, ಕರಿಬೇವು ಹಾಕಿ ಒಗ್ಗರಣೆ
ಮಾಡಿ. ರುಬ್ಬಿದ ಚಟ್ನಿಗೆ ಮಿಕ್ಸ್ ಮಾಡಿ ರುಚಿಯಾದ ಚಟ್ನಿಯನ್ನು ದೋಸೆ, ರೊಟ್ಟಿ ಜೊತೆ ಸವಿಯಿರಿ.
ರಸಂ
ಸಾಮಗ್ರಿ: ಮಾವಿನ-ಶುಂಠಿ ತುರಿ 4 ಚಮಚ, ತೆಂಗಿನ ತುರಿ 3 ಚಮಚ, ಉಪ್ಪು ರುಚಿಗೆ ತಕ್ಕಷ್ಟು., ಒಣಮೆಣಸಿನಕಾಯಿ 3, ಟೊಮೆಟೊ 1, ತುಪ್ಪ 2 ಚಮಚ, ಜೀರಿಗೆ-1 ಚಮಚ, ಸಾಸಿವೆ 1 ಚಮಚ, ಇಂಗು ಸ್ವಲ್ಪ, ಕರಿಬೇವು 5 ಎಲೆಗಳು, ಕೊತ್ತಂಬರಿ ಸ್ವಲ್ಪ.
ವಿಧಾನ: ದಪ್ಪ ತಳದ ಪಾತ್ರೆಗೆ ಶುಂಠಿ ತುರಿ, ತೆಂಗಿನತುರಿ, ಮೆಣಸಿನಕಾಯಿ, ಜೀರಿಗೆ, ಟೊಮೆಟೊ, 1 ಚಮಚ ತುಪ್ಪ ಹಾಗೂ 2 ಕಪ್ ನೀರನ್ನು ಹಾಕಿ ಚೆನ್ನಾಗಿ ಬೇಯಿಸಿ. ನೀರಿನಿಂದ ತೆಗೆದು ತಣಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆ ತುಪ್ಪ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಕರಿಬೇವು, ಇಂಗು ಹಾಕಿ ಒಗ್ಗರಣೆ ಮಾಡಿ. ರಬ್ಬಿದ ಮಿಶ್ರಣ ಸೇರಿಸಿ 2 ಕಪ್ ನೀರನ್ನು ಹಾಕಿ ಕುದಿಸಿ.
ತಂಬುಳಿ
ಸಾಮಗ್ರಿ: ಮಾವಿನ ಶುಂಠಿ ತುರಿ 1/2 ಕಪ್ , ತೆಂಗಿನತುರಿ 1 ಕಪ್ , ಕಾಳುಮೆಣಸು 10, ಜೀರಿಗೆ 1 ಚಮಚ, ಸಾಸಿವೆ 1ಚಮಚ, ಕರಿಬೇವು 10 ಎಲೆಗಳು, ಕೊತ್ತಂಬರಿ ಸೊಪ್ಪು ಸ್ವಲ್ಪ, ಇಂಗು ಸ್ವಲ್ಪ, ತುಪ್ಪ 2 ಚಮಚ, ಸಿಹಿ ಮೊಸರು 2 ಕಪ್
ವಿಧಾನ: ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ಮೆಣಸು, ಜೀರಿಗೆ, ತೆಂಗಿನತುರಿ, ಶುಂಠಿ ತುರಿ ಹಾಕಿ ಬಾಡಿಸಿ ತಣಿಸಿ. ನಂತರ ಕೊತ್ತಂಬರಿ ಸೊಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಕರಿಬೇವು, ಇಂಗು ಹಾಕಿ ಒಗ್ಗರಣೆ ಮಾಡಿ. ರುಬ್ಬಿದ ಮಿಶ್ರಣ ಸೇರಿಸಿ ಒಲೆಯಿಂದ ಇಳಿಸಿ ತಣಿಸಿ. ಕಡಿದ ಸಿಹಿ ಮೊಸರನ್ನು ಸೇರಿಸಿ. ರುಚಿಗೆ ಉಪ್ಪನ್ನು ಹಾಕಿ ಮಿಕ್ಸ್ ಮಾಡಿ.

